19/05/2025

Law Guide Kannada

Online Guide

ಇಮೇಲ್ ಮೂಲಕ ನೋಟೀಸ್, ಸಮನ್ಸ್: ಇನ್ಮುಂದೆ ಹೊಸ ರೂಲ್ಸ್ ಜಾರಿ

ಬೆಂಗಳೂರು: ಇನ್ಮುಂದೆ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಇಮೇಲ್ ಮೂಲಕ ನೋಟೀಸ್, ಸಮನ್ಸ್ ನೀಡುವ ವ್ಯವಸ್ಥೆ ಜಾರಿಗೆ ಬರಲಿದೆ. ಹೌದು ಇದಕ್ಕೆ ಸಂಬಂಧಿಸಿದಂತೆ ಅಗತ್ಯ ತಿದ್ದುಪಡಿ ಮಾಡಲಾಗಿದೆ ಎಂದು ಹೈಕೋರ್ಟ್ ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಈ ಬಗ್ಗೆ ಲಿಖಿತವಾಗಿ ಮಾಹಿತಿ ನೀಡಿರುವ ರಾಜ್ಯ ಸರ್ಕಾರವು, ಹೈಕೋರ್ಟ್ ರವಾನಿಸಿದ ಕರಡು ನಿಯಮಗಳನ್ನು ಫೆಬ್ರವರಿ 17ರಂದು ರಾಜ್ಯ ಸರ್ಕಾರ ಅನುಮೋದಿಸಿದ್ದು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಅದರಂತೆ ಹೈಕೋರ್ಟ್, ನ್ಯಾಯಮಂಡಳಿಗಳು ಮತ್ತು ಜಿಲ್ಲಾ ನ್ಯಾಯಾಲಯಗಳು ಸೇರಿದಂತೆ ರಾಜ್ಯದ ಎಲ್ಲ ನ್ಯಾಯಾಲಯಗಳು ಎಲೆಕ್ಟ್ರಾನಿಕ್ ಮೇಲ್ ಮೂಲಕ ನೋಟೀಸ್ ಹಾಗೂ ಸಮನ್ಸ್ ಗಳನ್ನು ಜಾರಿಗೊಳಿಸುವಂತೆ ಆದೇಶಿಸಲು ಅಧಿಕಾರ ಹೊಂದಿದೆ ಎಂದು ಆರ್. ದೇವದಾಸ್ ಅವರಿದ್ದ ನ್ಯಾಯಪೀಠಕ್ಕೆ ತಿಳಿಸಿದೆ.

ಇ ಮೇಲ್ ಮೂಲಕ ಸಮನ್ಸ್ ಜಾರಿಗೊಳಿಸಲು ಅಧಿಸೂಚನೆ ಹೊರಡಿಸುವಂತೆ ಪ್ರತಿವಾದಿ ಸರ್ಕಾರಕ್ಕೆ ನಿರ್ದೇಶನ ಹೊರಡಿಸುವಂತೆ ಕೋರಿ ಸುರೇಶ್ ಎಂಬವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಪೀಠದ ಮುಂದೆ ಇನ್-ಪರ್ಸನ್ ಆಗಿ ವಾದ ಮಂಡಿಸಿದ್ದ ಅವರು, ದೆಹಲಿ, ಮುಂಬೈ ಹಾಗೂ ಇತರ ಹೈಕೋರ್ಟ್ಗಳಲ್ಲಿ ಇಮೇಲ್ ವ್ಯವಸ್ಥೆ ಮೂಲಕ ಸಮನ್ಸ್ ಮತ್ತು ನೋಟೀಸ್ಗಳನ್ನು ಜಾರಿಗೊಳಿಸಲಾಗುತ್ತಿದೆ. ಇದೇ ವ್ಯವಸ್ಥೆಯನ್ನು ರಾಜ್ಯದಲ್ಲೂ ಜಾರಿಗೆ ತರಬೇಕು ಎಂದು ಮನವಿ ಮಾಡಿದ್ದರು.

ಈ ಮಧ್ಯೆ ಫೆಬ್ರವರಿ 11ರಂದು ಇ-ಮೇಲ್ ಮೂಲಕ ನೋಟೀಸ್ ಜಾರಿಗಾಗಿ ನಿಯಮಗಳನ್ನು ಅನುಮೋದಿಸುವ ತುರ್ತು ಅಗತ್ಯವಿದೆ. ಹಾಗಾಗಿ, ಹೈಕೋರ್ಟ್ ನಿಯಮಗಳ ತಿದ್ದುಪಡಿಗಾಗಿ ಮಾಡಿದ ಶಿಫಾರಸ್ಸಿನ ಸ್ಥಿತಿಗತಿಯ ಕುರಿತು ಫೆಬ್ರವರಿ 25ರೊಳಗೆ ಮಾಹಿತಿ ನೀಡಬೇಕು ಎಂದು ಹೈಕೋರ್ಟ್ ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.

ಅದರಂತೆ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಈ ಮಾಹಿತಿ ನೀಡಿದ್ದು, ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿಯನ್ನು ವಿಲೇ ಮಾಡಿದೆ. ಕರ್ನಾಟಕದ ಎಲ್ಲ ನ್ಯಾಯಾಲಯಗಳು ಇನ್ನು ಮುಂದೆ ಇಮೇಲ್ ಮೂಲಕ ನೋಟೀಸ್ ಮತ್ತು ಸಮನ್ಸ್ ಜಾರಿಗೊಳಿಸುವ ಪ್ರಕ್ರಿಯೆಯನ್ನು ನಡೆಸಲಿದೆ. ಈ ವ್ಯವಸ್ಥೆಗೆ ಅನುಕೂಲವಾಗುವಂತೆ ಅಗತ್ಯ ತಿದ್ದುಪಡಿ ಮಾಡಲಾಗಿದೆ ಎಂದು ಕರ್ನಾಟಕ ಸರ್ಕಾರ ರಾಜ್ಯದ ಹೈಕೋರ್ಟ್ಗೆ ಮಾಹಿತಿ ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.