ಹುದ್ದೆ ತೋರಿಸದೆ ಅಧಿಕಾರಿಗಳ ವರ್ಗಾವಣೆ ಮಾಡುವಂತಿಲ್ಲ- ಹೈಕೋರ್ಟ್ ಆದೇಶ
ಬೆಂಗಳೂರು: ಹುದ್ದೆ ತೋರಿಸದೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಅಬಕಾರಿ ಉಪ ಆಯುಕ್ತ ಕೆ. ಅರುಣ್ ಕುಮಾರ್ ಅವರನ್ನು ಹುದ್ದೆ ತೋರಿಸದೇ 2025ರ ಜ.29ರಂದು ವರ್ಗಾವಣೆ ಮಾಡಲಾಗಿತ್ತು. ಅಂದಿನಿಂದಲೂ ಹುದ್ದೆಯಿಲ್ಲದ ಕಾರಣ ಅವರು ಪೋಸ್ಟಿಂಗ್ ಗಾಗಿ ಹೈಕೋರ್ಟ್ ಮೆಟ್ಟಿಲೇರಿ ರಿಟ್ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ. ಎಸ್.ಜಿ. ಪಂಡಿತ್ ಮತ್ತು ನ್ಯಾ. ಕೆ.ವಿ. ಅರವಿಂದ್ ಅವರಿದ್ದ ಪೀಠವು, ಹುದ್ದೆ ತೋರಿಸದೆ ಅಧಿಕಾರಿಗಳನ್ನು ವರ್ಗಾಯಿಸುವಂತಿಲ್ಲ. ಈ ರೀತಿಯ ಕ್ರಮಗಳಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಲಿದೆ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ರೀತಿಯ ವರ್ಗಾವಣೆಗಳಿಂದ ತೆರಿಗೆದಾರರ, ಸಾರ್ವಜನಿಕರ ಹಣ ದುರ್ವಿನಿಯೋಗವಾದಂತಾಗಲಿದೆ. ಕೆಲಸ ಪಡೆಯದೇ ಮನೆಯಲ್ಲಿ ಕುಳಿತವರಿಗೆ ಸಂಬಳ ನೀಡಿದಂತಾಗುತ್ತದೆ. ಹೀಗಾಗಿ ಹುದ್ದೆ ತೋರಿಸುವವರೆಗೆ ಹಿಂದಿನ ಹುದ್ದೆಯಿಂದ ಬಿಡುಗಡೆ ಮಾಡಬಾರದು ಎಂದು ನ್ಯಾಯಪೀಠವು ಸ್ಪಷ್ಟ ಸೂಚನೆ ನೀಡಿದೆ.
ಅಲ್ಲದೆ, ಹುದ್ದೆ ತೋರಿಸದೇ ವರ್ಗಾವಣೆ ಮಾಡಿದರೆ ಇಲಾಖೆಯ ಮುಖ್ಯಸ್ಥರೇ ಹೊಣೆಗಾರರಾಗುತ್ತಾರೆ. ಕಾಯುವಿಕೆಯ ಅವಧಿಯ ವೇತನವನ್ನು ಕಾರಣಕರ್ತ ಅಧಿಕಾರಿಯಿಂದಲೇ ವಸೂಲು ಮಾಡಿ ಎಂದು ಪೀಠ ಖಡಕ್ ಆದೇಶ ನೀಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
