07/03/2026

Law Guide Kannada

Online Guide

‘ಹೋಗಿ ಸಾಯಿ’ ಎಂಬ ಒಂದು ಮಾತು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗದು – ಕೇಸ್ ರದ್ದುಗೊಳಿಸಿದ ಕೋರ್ಟ್

ಬೆಂಗಳೂರು: ದಂಪತಿ ನಡುವಿನ ಜಗಳದಲ್ಲಿ ಸಿಟ್ಟಿನಿಂದ ‘ಹೋಗಿ ಸಾಯಿ’ ಎಂದು ಹೇಳಿರುವ ಮಾತು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗದು. ಕೇವಲ ‘ಹೋಗಿ ಸಾಯಿ’ ಎಂಬ ಒಂದೇ ವಾಕ್ಯದಿಂದ ವ್ಯಕ್ತಿ ತನ್ನ ಪ್ರಾಣ ತ್ಯಜಿಸಿದ್ದಾನೆ ಎನ್ನುವುದು ಒಪ್ಪಲಾಗುವುದಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಹುಬ್ಬಳ್ಳಿ ಮೂಲದ ಫಿಬಿ ಗೌತಮ್ ಎಂಬ ಮಹಿಳೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠವು, ಪತಿಯ ಸಾವಿಗೆ ಕಾರಣರಾಗಿದ್ದಾರೆ ಎಂಬ ಆರೋಪದಡಿ ಪತ್ನಿ ಫಿಬಿ ಗೌತಮ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿತು.

ಪ್ರಕರಣದ ಹಿನ್ನೆಲೆ..
ಅರ್ಜಿದಾರೆ ಫಿಬಿ ಗೌತಮ್ 2022ರ ಡಿ.8ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಫಿಬಿ ಗೌತಮ್ ಕೇವಲ ಮೂರು ತಿಂಗಳು ಪತಿಯ ಜತೆಗೆ ಸಂಸಾರ ನಡೆಸಿದ್ದು, ಬಳಿಕ ತವರು ಮನೆಗೆ ಬಂದಿದ್ದರು. ನಂತರ ಎರಡು ಕುಟುಂಬಗಳು ಅರ್ಜಿದಾರೆ ಫಿಬಿ ಗೌತಮ್ ಅವರ ಮನವೊಲಿಕೆಗೆ ಮುಂದಾದರು. ಆದರೆ ಎಷ್ಟೇ ಮನವೊಲಿಸಲು ಪ್ರಯತ್ನಿಸಿದ್ದರೂ ಬಗ್ಗದ ಆಕೆ ಪತಿಯೊಂದಿಗೆ ನೆಲೆಸಲು ತೆರಳಿರಲಿಲ್ಲ.

ಇದಾದ ಬಳಿಕ ಪತಿಯೂ ವೈವಾಹಿಕ ಹಕ್ಕುಗಳ ಮರುಸ್ಥಾಪನೆ’ಗಾಗಿ ಕೌಟುಂಬಿಕ ನ್ಯಾಯಾಲಯದ ಕದ ತಟ್ಟಿದ್ದರು. ನಂತರ ಮಹಿಳೆಯೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ 2005ರ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆ ರಕ್ಷಣೆ ಕಾಯ್ದೆಯಡಿ ಪತಿಯ ಕುಟುಂಬ ಮತ್ತು ಆತನ ವಿರುದ್ಧ ದಾವೆ ಹೂಡಿದ್ದರು. ಇದರ ಮಧ್ಯೆ ಜ. 26ರಂದು ಬೆಳಗ್ಗೆ ಪತಿಯೂ ನೇಣಿಗೆ ಶರಣಾಗಿದ್ದರು. ತದನಂತರ ಅದೇ ಜಾಗದಲ್ಲಿ ಆತ ಬರೆದಿರುವ ಡೆತ್ನೋಟ್ ಸಿಕ್ಕಿತ್ತು. ಇದರ ಬೆನ್ನೆಲ್ಲೇ ಅರ್ಜಿದಾರರ ವಿರುದ್ಧ ಮೃತನ ಸಹೋದರ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದಾಗಿ ಹುಬ್ಬಳ್ಳಿ ಅಶೋಕನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ರದ್ದುಗೊಳಿಸಲು ಕೋರಿ ಫಿಬಿ ಗೌತಮ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ಮೃತ ವ್ಯಕ್ತಿ ಬರೆದಿರುವ ಡೆತ್ ನೋಟ್ ನಲ್ಲಿ ಅರ್ಜಿದಾರರು ತಮಗೆ ಆತ್ಮಹತ್ಯೆಗೊಳಗಾಗುವಂತೆ ನಿರ್ಧಿಷ್ಟವಾಗಿ ಸೂಚಿಸಿದ್ದಾರೆ ಎಂದು ಎಲ್ಲಿಯೂ ಹೇಳಿಲ್ಲ. ಪತ್ನಿ ತನ್ನ ಸಾವಿನ ನಿರೀಕ್ಷೆಯಲ್ಲಿದ್ದಾಳೆ ಎಂದಷ್ಟೇ ಆತ ಉಲ್ಲೇಖಿಸಿದ್ದ. ಕಾನೂನಿನ ಅನ್ವಯ ಇದನ್ನು ಪ್ರಚೋದನೆ ನೀಡಿದಂತೆ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ದುಃಖದಲ್ಲಿ ಓರ್ವ ವ್ಯಕ್ತಿ ನೀಡಿರುವ ಹೇಳಿಕೆಯನ್ನು ಪರಿಗಣಿಸಿ ಆತ್ಮಹತ್ಯೆಗೆ ಪ್ರಚೋದನೆ ಕಾಯ್ದೆ 108ರ ಅಡಿಯಲ್ಲಿ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಿಸಿತು.

, ಸುಪ್ರೀಂಕೋರ್ಟ್ ಆದೇಶದ ಅನ್ವಯ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306ರ (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ವ್ಯಕ್ತಿಯನ್ನು ಶಿಕ್ಷೆಗೊಳಪಡಿಸಲು ಸೂಕ್ತ ಸಾಕ್ಷಾಧಾರಗಳು ಬೇಕು. ಕಾಯ್ದೆ ಅನುಸಾರ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಲು ಆತ ಅಥವಾ ಆಕೆ ಆತ್ಮಹತ್ಯೆಗೊಳಗಾದ ವ್ಯಕ್ತಿಯನ್ನು ನಿರ್ದಿಷ್ಟ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಬೇಕು ಆದರೆ ಈ ಪ್ರಕರಣದಲ್ಲಿ ಎರಡು ಅಂಶಗಳು ಲಭ್ಯವಿಲ್ಲ. ಕೇವಲ ‘ಹೋಗಿ ಸಾಯಿ’ ಎಂಬ ಒಂದೇ ವಾಕ್ಯದಿಂದ ವ್ಯಕ್ತಿ ತನ್ನ ಪ್ರಾಣ ತ್ಯಜಿಸಿದ್ದಾನೆ ಎನ್ನುವುದು ಒಪ್ಪಲಾಗದು ನ್ಯಾಯಪೀಠ ಸ್ಪಷ್ಟಪಡಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.