ಹೊರಗುತ್ತಿಗೆಗೆ ತೀರ್ಪು ಬರೆಯುವ ಕಾರ್ಯ: ಕೆಲ ನ್ಯಾಯಮಂಡಳಿಗಳ ಕಾರ್ಯವೈಖರಿಗೆ ಸುಪ್ರೀಂ ಅಸಮಾಧಾನ
ನವದೆಹಲಿ: ‘ಹಣಕಾಸು ವಿವಾದಗಳಿಗೆ ಸಂಬಂಧಿಸಿದ ನ್ಯಾಯಮಂಡಳಿಯೊಂದರ ಸದಸ್ಯರು ತೀರ್ಪು ಬರೆಯುವ ಕಾರ್ಯವನ್ನು ಕೂಡ ಹೊರಗುತ್ತಿಗೆ ನೀಡಿದ್ದಾರೆ’ ಎಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ದೇಶದಲ್ಲಿನ ಕೆಲ ನ್ಯಾಯಮಂಡಳಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಹಾಗೂ ವಿಪುಲ್ ಪಂಚೋಲಿ ಅವರು ಇದ್ದ ಪೀಠವು , ಇವು ಯಾವುದೇ ರೀತಿಯ ಉತ್ತರದಾಯಿತ್ವದ ಇಲ್ಲದ ‘ಗೊಂದಲದ ಗೂಡುಗಳು’ ಹಾಗೂ ‘ಹೊರೆ’ಯಾಗಿ ಪರಿಣಮಿಸಿವೆ’ ಎಂದು ಕಿಡಿಕಾರಿದೆ.
ನ್ಯಾಯಮಂಡಳಿ ಅಧ್ಯಕ್ಷ ಹಾಗೂ ಸದಸ್ಯರ ಅಧಿಕಾರಾವಧಿ ವಿಸ್ತರಿಸುವಂತೆ ಕೋರಿ ಸಲ್ಲಿಸಲಾದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ನ್ಯಾಯಪೀಠವು ವಿಚಾರಣೆ ನಡೆಸಿತು. ನ್ಯಾಯಮಂಡಳಿಗಳಿಗೆ ಸದಸ್ಯರ ನೇಮಕ ಹಾಗೂ ಅವರ ಅಧಿಕಾರಾವಧಿಗೆ ಸಂಬಂಧಿಸಿ ‘ನ್ಯಾಯಮಂಡಳಿ ಸುಧಾರಣೆಗಳ ಕಾಯ್ದೆ- 2021’ರಲ್ಲಿನ ಕೆಲ ಅವಕಾಶಗಳನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷ ನವೆಂಬರ್ನಲ್ಲಿ ರದ್ದುಗೊಳಿಸಿತ್ತು.
‘ನ್ಯಾಯ ಮಂಡಳಿಗಳನ್ನು ಕೇಂದ್ರ ಸರ್ಕಾರವೇ ರಚಿಸಿದೆ. ಯಾರಿಗೂ ಉತ್ತರದಾಯಿತ್ವ ಹೊಂದಿಲ್ಲ ಎಂಬಂತೆ ಅವು ಕಾರ್ಯನಿರ್ವಹಿಸುತ್ತಿವೆ. ಅವು ನಿಮಗೆ ಹಾಗೂ ನ್ಯಾಯಾಲಯಗಳಿಗೂ ತಲೆನೋವಾಗಿವೆ’ ಎಂದು ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರನ್ನು ಉದ್ದೇಶಿಸಿ ಪೀಠ ಹೇಳಿತು.
‘ಈಗಿನ ವ್ಯವಸ್ಥೆ ಪ್ರಕಾರ, ಟೆಲಿಕಾಂ ವಿವಾದಗಳ ಪರಿಹಾರ ಮತ್ತು ಮೇಲ್ಮನವಿ ನ್ಯಾಯಮಂಡಳಿಯ(ಟಿಡಿಎಸ್ಎಟಿ) ಅಧ್ಯಕ್ಷರ ಅಧಿಕಾರ ಕೊನೆಗೊಂಡಾಗ ಅದರ ಸದಸ್ಯರೊಬ್ಬರು ನ್ಯಾಯಮಂಡಳಿಯ ಹಂಗಾಮಿ ಅಧ್ಯಕ್ಷರಾಗುತ್ತಾರೆ. ಹೀಗಾಗಿ, ಖಾಲಿ ಇರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡುವುದಕ್ಕೆ ಹಾಗೂ ಕಾರ್ಯ ನಿರ್ವಹಣೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ನ್ಯಾಯಪೀಠವು ನಿರ್ದೇಶನ ನೀಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
