20/05/2025

Law Guide Kannada

Online Guide

ದಾಖಲೆಗಳಲ್ಲಿ ಹೆಸರು ಬದಲಿಸಿದಾಕ್ಷಣ ಆಸ್ತಿ ಮಾಲೀಕತ್ವ ಬದಲಾಗದು – ಹೈಕೋರ್ಟ್

ಖಾಸಗಿ ವ್ಯಕ್ತಿಯ ಹೆಸರಿನಲ್ಲಿದ್ದ ಕಂದಾಯ ದಾಖಲೆಗಳಲ್ಲಿ ಹೆಸರು ಬದಲಾಯಿಸಿದ ತಕ್ಷಣ ಆ ಆಸ್ತಿಯ ಮಾಲಿಕತ್ವ ಬದಲಾಗುವುದಿಲ್ಲ ಎಂದು ಹೈಕೋರ್ಟ್ ನ ಕಲಬುರಗಿ ಪೀಠ ಮಹತ್ವದ ತೀರ್ಪು ನೀಡಿದೆ.

ರಾಯಚೂರಿನ ರೈತ ಮಹಿಳೆ ಚೆನ್ನಮ್ಮ ಹಿರೇಮಠ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ಅರ್ಜಿದಾರರ ಹೆಸರಿಗೆ 60 ದಿನಗಳಲ್ಲಿ ದಾಖಲೆಗಳನ್ನು ಸರಿಪಡಿಸಿಕೊಡುವಂತೆ ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಚೆನ್ನಮ್ಮ ಹಿರೇಮಠ ಎಂಬುವರ ಹೆಸರಿನಲ್ಲಿದ್ದ ಆಸ್ತಿಯ ದಾಖಲೆಗಳಲ್ಲಿ ಅವರ ಹೆಸರು ತೆಗೆದು ವಕ್ಫ್ ಬೋರ್ಡ್ ಹೆಸರು ಸೇರ್ಪಡೆ ಮಾಡಿದ್ದ ಕಂದಾಯ ಇಲಾಖೆ ಅಧಿಕಾರಿಗಳಿಗೆ ದಾಖಲೆಗಳನ್ನು ಸರಿಪಡಿಸಿಕೊಡುವಂತೆ ಹೈಕೋರ್ಟ್ ಸೂಚನೆ ನೀಡಿದೆ.

ಪ್ರಾದೇಶಿಕ ಆಯುಕ್ತರು ಹೊರಡಿಸಿರುವ ಆದೇಶಗಳನ್ನು ತಹಶೀಲ್ದಾರ್ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಒಂದು ಆಸ್ತಿ ವಕ್ಫ್ ಮಂಡಳಿಗೆ ಸೇರಿದ್ದರೆ ಅಂತಹ ಸಂದರ್ಭದಲ್ಲಿ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲನೆ ನಡೆಸಿ, ನಂತರ ದಾಖಲೆಗಳಲ್ಲಿ ಹೆಸರು ಸೇರ್ಪಡೆ ಮಾಡಬೇಕು. ಆದರೆ, ಈ ಪ್ರಕರಣದಲ್ಲಿ ಯಾವುದೇ ಪರಿಶೀಲನೆ ನಡೆಸದೆ, ಏಕಾಏಕಿ ಹೆಸರು ಬದಲಾವಣೆ ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ದೂರುದಾರರು 2012ರಲ್ಲಿ ಕ್ರಯಪತ್ರದ ಮೂಲಕ ಸ್ವಲ್ಪ ಜಮೀನು ಖರೀದಿಸಿದ್ದರು. ಆ ನಂತರ ಕಂದಾಯ ದಾಖಲೆಗಳಲ್ಲಿ ಅವರ ಹೆಸರನ್ನು ನಮೂದಿಸಲಾಗಿತ್ತು. ಆದರೆ, ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ವಕ್ಫ್ ಆಸ್ತಿಗಳ ಬಗ್ಗೆ ಪರಿಶೀಲನೆ ನಡೆಸಿ, ಒಂದು ವೇಳೆ ಕಂದಾಯ ದಾಖಲೆಗಳಲ್ಲಿ ಹೆಸರು ಬದಲಾವಣೆ ಆಗಿದ್ದರೆ ಅವುಗಳನ್ನು ತೆಗೆದು ವಕ್ಫ್ ಹೆಸರನ್ನು ನಮೂದಿಸುವಂತೆ ಆದೇಶ ನೀಡಿದ್ದರು. ಅದರಂತೆ ಜಿಲ್ಲಾಧಿಕಾರಿ 2017ರ ಅ.5ರಂದು ತಹಶೀಲ್ದಾರ್ ಗೆ ಆದೇಶಿಸಿದ್ದರು. 2018-19ರಲ್ಲಿ ಆಸ್ತಿಯ ಕಂದಾಯ ದಾಖಲೆಗಳಲ್ಲಿ ವಕ್ಫ್ ಮಂಡಳಿಯ ಹೆಸರನ್ನು ಜಿಲ್ಲಾಧಿಕಾರಿ ದಾಖಲಿಸಿದ್ದರು.
ನಂತರ ಅರ್ಜಿದಾರರು ಕಂದಾಯ ದಾಖಲೆಗಳಲ್ಲಿ ತಮ್ಮ ಹೆಸರೇ ಹಾಕುವಂತೆ ಕೋರಿ ಮನವಿ ಸಲ್ಲಿಸಿದ್ದರು. ಆದರೆ, ಅದನ್ನು ಅಧಿಕಾರಿಗಳು ಪುರಸ್ಕರಿಸದೇ ಇದ್ದಾಗ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ನ್ಯಾಯಾಲಯ ಅವರ ಮನವಿ ಪರಿಗಣಿಸುವಂತೆ ಸೂಚನೆ ನೀಡಿತ್ತು. ಆದರೆ, ಉಪವಿಭಾಗಾಧಿಕಾರಿಯು ಅರ್ಜಿದಾರರ ಮನವಿ ತಿರಸ್ಕರಿಸಿ, ವಕ್ಫ್ ಕಾಯ್ದೆ ಸೆಕ್ಷನ್ 83ರ ಪ್ರಕಾರ ವಕ್ಫ್ ಟ್ರಿಬ್ಯುನಲ್ಗೆ ಅರ್ಜಿ ಸಲ್ಲಿಸುವಂತೆ ಆದೇಶಿಸಿದ್ದರು. ಅವರ ಆದೇಶ ಪ್ರಶ್ನಿಸಿ ಅರ್ಜಿದಾರರು ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.