ಸಾಲ ಮಾಡಿಯಾದ್ರೂ ಪತ್ನಿಗೆ ಜೀವನಾಂಶ ನೀಡಿ: ಹಣವಿಲ್ಲ ಎಂದ ಪತಿಗೆ ಸುಪ್ರೀಂ ಖಡಕ್ ವಾರ್ನಿಂಗ್
ನವದೆಹಲಿ: ಪತ್ನಿಗೆ ಜೀವನಾಂಶ ನೀಡಲು ಹಣವಿಲ್ಲ. ನನ್ನ ಸಂಬಳ ಕಡಿಮೆ ಎಂದ ಪತಿಗೆ ತರಾಟೆ ತೆಗೆದುಕೊಂಡ ಸುಪ್ರೀಂಕೋರ್ಟ್ ಸಾಲ ಮಾಡಿಯಾದರೂ ಪತ್ನಿಗೆ ಜೀವನಾಂಶ ನೀಡಿ. ಇಲ್ಲದಿದ್ದರೇ ಪತ್ನಿಯನ್ನ ನಿಮ್ಮೊಂದಿಗೇ ಇರಿಸಿಕೊಳ್ಳಿ, ಎಂದು ಖಡಕ್ ಸೂಚನೆ ನೀಡಿದೆ.
ನನ್ನ ಆದಾಯ ತೀರಾ ಕಡಿಮೆ ಇದೆ. ಹೀಗಾಗಿ ಪತ್ನಿಗೆ ತಿಂಗಳಿಗೆ 12 ಸಾವಿರ ರೂಪಾಯಿ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದು ವಾದಿಸಿದ ಪತಿಯೊಬ್ಬನಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ದ್ವಿಸದಸ್ಯ ಪೀಠ ಈ ರೀತಿಯಾಗಿ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಹಣವಿಲ್ಲದಿದ್ದರೆ ಸಾಲ ಮಾಡಿಯಾದರೂ ಪತ್ನಿಗೆ ಜೀವನಾಂಶ ಕೊಡುವುದು ನಿನ್ನ ಜವಾಬ್ದಾರಿ, ನಿಮಗೆ ಜೀವನಾಂಶ ಕೊಡಲು ಆಗುವುದಿಲ್ಲ ಎಂದರೆ, ನಿಮ್ಮ ಪತ್ನಿಯನ್ನು ನಿಮ್ಮೊಂದಿಗೇ ಇರಿಸಿಕೊಳ್ಳಿ, ಆಕೆ ನಿಮಗೂ ಮತ್ತು ನಿಮ್ಮ ಮಕ್ಕಳಿಗೂ ಅಡುಗೆ ಮಾಡಿಕೊಡುತ್ತಾಳೆ ಎಂದು ಕಟುನುಡಿಗಳನ್ನಾಡಿತು.
ಏನಿದು ಪ್ರಕರಣ..?
ಪ್ರಕರಣ ಕುರಿತು ವಿಚಾರಣೆ ನಡೆಸಿದ್ದ ಕೆಳ ಹಂತದ ನ್ಯಾಯಾಲಯವು ಪತ್ನಿಗೆ 6 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಿ ವಿಚ್ಛೇದನ ಪಡೆಯಲು ಪತಿಗೆ ಆದೇಶಿಸಿತ್ತು. ಆದರೆ ಈ ಮೊತ್ತ ಅತ್ಯಲ್ಪ ಎಂದು ಅಸಮಾಧಾಗೊಂಡ ಪತ್ನಿ, ಜೀವನಾಂಶ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಮೊದಲು ಹೈಕೋರ್ಟ್ ಮೆಟ್ಟೆಲೇರಿದ್ದರು. ಬಳಿಕ ಪ್ರಕರಣ ಸುಪ್ರೀಂ ಕೋರ್ಟ್ ಮೊರೆ ಹೋದರು.
ಸುಪ್ರೀಂ ಕೋರ್ಟ್ ಮುಂದೆ ಪತ್ನಿಯು ಎರಡು ಪ್ರಮುಖ ಬೇಡಿಕೆಗಳನ್ನಿಟ್ಟರು. ಒಂದು ಪತಿಯು ತನಗೆ ಜೀವಿತಾವಧಿಯವರೆಗೆ ಪ್ರತಿ ತಿಂಗಳು 12 ಸಾವಿರ ರೂಪಾಯಿಗಳನ್ನು ನೀಡಬೇಕು. ಇಲ್ಲವೇ ಒಟ್ಟಾರೆಯಾಗಿ ಒಂದೇ ಸಲ 30 ಲಕ್ಷ ರೂಪಾಯಿಗಳನ್ನು ಜೀವನಾಂಶ ನೀಡಬೇಕು ಎಂದು ಮನವಿ ಮಾಡಿದ್ದರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ದ್ವಿಸದಸ್ಯ ಪೀಠದ ಮುಂದೆ ವಿಚಾರಣೆ ವೇಳೆ ಪತಿಯು ನಾನು ಕೇವಲ ಒಬ್ಬ ದಿನಗೂಲಿ ನೌಕರ. ದಿನಕ್ಕೆ ಕೇವಲ 325 ರೂಪಾಯಿಗಳನ್ನು ಮಾತ್ರ ಸಂಪಾದಿಸುತ್ತೇನೆ. ತಿಂಗಳು ಪೂರ್ತಿ ಕಷ್ಟಪಟ್ಟು ದುಡಿದರೂ ನನ್ನ ಗಳಿಕೆ ಕೇವಲ 9 ಸಾವಿರ ರೂಪಾಯಿಗಳು. ಹೀಗಿರುವಾಗ ನಾನು ಪತ್ನಿಗೆ ತಿಂಗಳಿಗೆ 12 ಸಾವಿರ ರೂಪಾಯಿಗಳನ್ನು ಹೇಗೆ ತಾನೇ ನೀಡಲು ಸಾಧ್ಯ ಎಂದು ವಾದಿಸಿದರು.
ಆಕೆಯ ಪತಿಯ ವಾದ ಆಲಿಸಿದ ಕೋರ್ಟ್ ನಿನ್ನ ಹೇಳಿಕೆಯನ್ನು ನಂಬಲು ಸಾಧ್ಯವೇ ಇಲ್ಲ. ಪ್ರಸ್ತುತ ದಿನಗಳಲ್ಲಿ ಇಂದಿನ ಬೆಲೆ ಏರಿಕೆಯ ಕಾಲದಲ್ಲಿ ಯಾವುದೇ ವ್ಯಕ್ತಿ ಇಷ್ಟು ಕಡಿಮೆ ಮೊತ್ತದ ಆದಾಯ ಗಳಿಸುತ್ತಾನೆ ಅಂದರೆ ಅದನ್ನು ಒಪ್ಪಿಕೊಳ್ಳುವುದು ಅಸಾಧ್ಯ. ಕನಿಷ್ಠ ದಿನಗೂಲಿಗಿಂತ ಕಡಿಮೆ ವೇತನವನ್ನು ಯಾವ ಕಂಪನಿಯಾದರೂ ನೀಡುತ್ತಾ? ಇಷ್ಟು ಕಡಿಮೆ ಸಂಬಳ ನೀಡುವ ಆ ಕಂಪನಿ ಯಾವುದು ಎಂಬುದನ್ನು ನಾವು ನೋಡಬೇಕಿದೆ. ನಿಮ್ಮ ವಾದವು ನಂಬಲರ್ಹವಾಗಿಲ್ಲ ಎಂದು ಟೀಕಿಸಿತು.
ಈ ವೇಳೆ ಪತಿಯ ಪರ ವಕೀಲರು, ನನ್ನ ಕಕ್ಷಿದಾರರು ವಾಸ್ತವಿಕ ಆದಾಯವನ್ನೇ ಕೋರ್ಟ್ ಮುಂದೆ ಬಹಿರಂಗಪಡಿಸುತ್ತಿದ್ದಾರೆ. ಬೇಕಿದ್ದರೆ ಈ ಬಗ್ಗೆ ಅಫಿಡವಿಟ್ ಸಲ್ಲಿಸಲೂ ಸಿದ್ದರಿದ್ದಾರೆ. ಒಂದು ವೇಳೆ ನೀವು ಆ ಕಂಪನಿಗೆ ಸಮನ್ಸ್ ನೀಡಿದರೆ ಅಲ್ಲಿನ ಇತರೇ ನೌಕರರಿಗೂ ಅನುಕೂಲವಾಗಬಹುದು ಎಂದು ವಕೀಲರು ವಾದಿಸಿದರು.
ಈ ವಾದವನ್ನು ಅಸಾಧ್ಯ ಎಂದು ತಳ್ಳಿಹಾಕಿದ ನ್ಯಾಯಪೀಠವು, ಒಂದು ವೇಳೆ ನಿಮಗೆ ಜೀವನಾಂಶ ನೀಡಲು ಸಾಧ್ಯವಾಗದಿದ್ದರೆ ನಿಮ್ಮ ಪತ್ನಿಯನ್ನು ನಿಮ್ಮೊಂದಿಗೆ ಕರೆದುಕೊಂಡು ಹೋಗಿ ಇರಿಸಿಕೊಳ್ಳಿ. ಆಕೆ ನಿಮಗೂ ನಿಮ್ಮ ಮಕ್ಕಳಿಗೂ ಅಡುಗೆ ಮಾಡಿ, ಸಂಸಾರವನ್ನು ನೋಡಿಕೊಳ್ಳುತ್ತಾಳೆ ಎಂದು ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಪತಿಯು ನನ್ನ ಪತ್ನಿ ನನ್ನ ಪೋಷಕರ ವಿರುದ್ಧವೂ ಸುಳ್ಳು ದೂರುಗಳನ್ನು ದಾಖಲಿಸಿದ್ದಾಳೆ. ಹೀಗಾಗಿ ಆಕೆಯನ್ನು ಜೊತೆಯಲ್ಲಿರಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಆಗ ಮತ್ತಷ್ಟು ಗರಂ ನ್ಯಾಯಪೀಠವು ಪತ್ನಿಯ ನಿರ್ವಹಣೆಗೆ ಹಣ ಹೊಂದಿಸುವುದು ನಿನ್ನ ಜವಾಬ್ದಾರಿ, ಅದಕ್ಕಾಗಿ ನೀನು ಬೇರೆ ದಾರಿಗಳನ್ನು ಹುಡುಕಲೇಬೇಕು. ಅಗತ್ಯಬಿದ್ದರೆ ಸಾಲ ಮಾಡು, ಬೇರೆಯವರ ಸಹಾಯ ಕೇಳು, ಆದ್ರೆ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
