ಮೂರ್ನಾಲ್ಕು ವರ್ಷಗಳಿಂದ ಅಮಲ್ಜಾರಿ ದಾವೆಗಳು ಬಾಕಿ: ಸುಪ್ರೀಂ ಕಳವಳ : 6 ತಿಂಗಳಲ್ಲಿ ಇತ್ಯರ್ಥಗೊಳಿಸುವಂತೆ ಖಡಕ್ ಸೂಚನೆ

ನವದೆಹಲಿ: ಮೂರ್ನಾಲ್ಕು ವರ್ಷಗಳಿಂದಲೂ ಅಮಲ್ಜಾರಿ ದಾವೆಗಳು ಇತ್ಯರ್ಥಗೊಳ್ಳದೆ ಬಾಕಿ ಉಳಿದಿರುವುದು ಕಳವಳಕಾರಿಯಾಗಿದೆ. 6 ತಿಂಗಳಲ್ಲಿ ಈ ಬಾಕಿ ದಾವೆಗಳನ್ನ ಇತ್ಯರ್ಥಗೊಳಿಸಿ. ಒಂದು ವೇಳೆ ಇತ್ಯರ್ಥಗೊಳಿಸಲು ವಿಫಲವಾದರೆ ಜಡ್ಜ್ ರನ್ನೇ ಹೊಣೆ ಮಾಡಿ ಎಂದು ಎಲ್ಲ ಹೈಕೋರ್ಟ್ ಗಳಿಗೆ ಸುಪ್ರೀಂಕೋರ್ಟ್ ಖಡಕ್ ನಿರ್ದೇಶನ ನೀಡಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದೀವಾಲಾ ಮತ್ತು ಪಂಕಜ್ ಮಿತ್ತಲ್ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ದೇಶದ ಎಲ್ಲ ವಿಚಾರಣಾ ನ್ಯಾಯಾಲಯಗಳಲ್ಲಿ ಸಲ್ಲಿಸಲಾಗುವ ಅಮಲ್ಜಾರಿ ದಾವೆಗಳನ್ನು ಆರು ತಿಂಗಳಲ್ಲಿ ಇತ್ಯರ್ಥಗೊಳಿಸಬೇಕು. ಅಮಲ್ಜಾರಿ ದಾವೆಗಳನ್ನು ಆರು ತಿಂಗಳಲ್ಲಿ ಇತ್ಯರ್ಥಗೊಳಿಸಲು ವಿಫಲವಾದರೆ ಆಗ ಆಯಾ ನ್ಯಾಯಾಂಗ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವಂತೆ ಹೈಕೋರ್ಟ್ಗಳಿಗೆ ನೀಡಿದ ನಿರ್ದೇಶನದಲ್ಲಿ ನ್ಯಾಯಪೀಠ ತಿಳಿಸಿದೆ.
ಜಿಲ್ಲಾ ನ್ಯಾಯಾಂಗದಲ್ಲಿ ಬಾಕಿ ಇರುವ ಎಲ್ಲ ಅಮಲ್ಜಾರಿ ದಾವೆಗಳ ಮಾಹಿತಿಯನ್ನು ಕಲೆ ಹಾಕುವಂತೆ ಎಲ್ಲ ಹೈಕೋರ್ಟ್ ಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದು, ನಾಲೈದು ವರ್ಷಗಳಿಂದ ಅಮಲ್ಜಾರಿ ದಾವೆಗಳು ಬಾಕಿ ಇದ್ದರೆ ಸಕ್ಷಮ ಪ್ರಾಧಿಕಾರ ನ್ಯಾಯಾಲಯಗಳು ಜಾರಿಗೊಳಿಸಿರುವ ಡಿಕ್ರಿಗೆ ಯಾವುದೇ ಅರ್ಥ ಇರುವುದಿಲ್ಲ ಎಂದು ಅದು ವಿಷಾದ ವ್ಯಕ್ತಪಡಿಸಿದೆ.
2021 ಮತ್ತು 2022ರಲ್ಲಿ ಸುಪ್ರೀಂ ಕೋರ್ಟ್ ಅಮಲ್ಜಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ನೀಡಿತ್ತು. ಈ ನಿರ್ದೇಶನಗಳನ್ನು ನ್ಯಾಯಾಂಗ ಅಧಿಕಾರಿಗಳು ಯಾಕೆ ಪಾಲಿಸುತ್ತಿಲ್ಲ ಎಂದು ಪ್ರಶ್ನಿಸಿದ ನ್ಯಾಯಪೀಠ, ಇಂತಹ ದಾವೆಗಳು ಬಾಕಿ ಇದ್ದರೆ ಜಡ್ಜ್ ಗಳಿಂದ ಲಿಖಿತ ವಿವರ ಕೇಳುವಂತೆ ಹೈಕೋರ್ಟ್ಗೆ ಸೂಚನೆ ನೀಡಿದೆ. ಹಾಗೂ ಇಂತಹ ವೈಫಲ್ಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂದು ಅದು ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ