20/05/2025

Law Guide Kannada

Online Guide

ಅರ್ಜಿ ಸಲ್ಲಿಕೆ, ಮಾಹಿತಿ ಹಕ್ಕಿನ ದುರುಪಯೋಗ: RTI ಕಾರ್ಯಕರ್ತನಿಗೆ ಛೀಮಾರಿ ಹಾಕಿದ ಹೈಕೋರ್ಟ್

ಬೆಂಗಳೂರು: ರಾಜ್ಯದ 14 ಇಲಾಖೆಗಳಿಂದ ವಿವಿಧ ಮಾಹಿತಿ ಕೇಳಿ ಆರ್ ಟಿಐ ಕಾರ್ಯಕರ್ತರ ಸಲ್ಲಿಸಿದ್ದ 9646 ಮನವಿಗಳನ್ನು ವಜಾಗೊಳಿಸಿದ್ದ ರಾಜ್ಯ ಮಾಹಿತಿ ಆಯೋಗದ ಕ್ರಮವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್, ಈ ಮೂಲಕ ಮಾಹಿತಿ ಹಕ್ಕಿನ ದುರುಪಯೋಗ ಮಾಡಿಕೊಂಡ ಆರ್ ಟಿಐ ಕಾರ್ಯಕರ್ತನಿಗೆ ಚಳಿ ಬಿಡಿಸಿದೆ.

ಹುಬ್ಬಳ್ಳಿಯ ಆರ್ ಟಿಐ ಕಾರ್ಯಕರ್ತ ದಾವಲ್ ಸಾಬ್ ಎಂ ಮಿಯಾನ್ನವರ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ರಾಜ್ಯದ 14 ಇಲಾಖೆಗಳಿಗೆ ಸಂಬಂಧಪಟ್ಟಂತೆ ಮಾಹಿತಿ ಹಕ್ಕು, ಕಾಯ್ದೆ ಆರ್ಟಿಐ ಅಡಿ ಆರ್ ಟಿಐ ಕಾರ್ಯಕರ್ತ ದಾವಲ್ ಸಾಬ್ ಎಂ ಮಿಯಾನ್ನವರ್ ಅನವಶ್ಯಕವಾಗಿ ಹಾಗೂ ದುರುದ್ದೇಶ ಪೂರಿತ ವಿವರಣೆ ಕೇಳಿ ಸಲ್ಲಿಸಿದ್ದ 9,616 ಅರ್ಜಿಗಳನ್ನು ವಜಾ ಮಾಡಿದ ರಾಜ್ಯ ಮಾಹಿತಿ ಆಯೋಗದ ಕ್ರಮವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ.

ಆರ್ಟಿಐ ಕಾಯ್ದೆಯ ನಿಯಮಗಳನ್ನು ಅರ್ಜಿದಾರರು ದುರುಪಯೋಗ ಮಾಡಿಕೊಂಡಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಯಾವುದೇ ನ್ಯಾಯ ಸಮ್ಮತ ಕಾರಣಗಳಿಲ್ಲದೆ ಸಾವಿರಾರು ಅರ್ಜಿಗಳನ್ನು ವಿವಿಧ ಇಲಾಖೆಗಳಲ್ಲಿ ಸಲ್ಲಿಸಿರುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗ ಎಂದು ಅರ್ಜಿದಾರರ ನಡೆಯ ಬಗ್ಗೆ ಹೈಕೋರ್ಟ್ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

ಈ ಪ್ರಕರಣದಲ್ಲಿ ಆರ್ ಟಿಐ ಕಾಯ್ದೆಯ ಸ್ಪಷ್ಟ ದುರುಪಯೋಗವಾಗಿದೆ. ಈ ರೀತಿಯ ಪ್ರವೃತ್ತಿಯು ಸದುದ್ದೇಶದಿಂದ ಮಾಹಿತಿ ಕೇಳುವವರ ಅರ್ಜಿಗಳ ವಿಲೇವಾರಿಗೆ ವಿಳಂಬವಾಗುತ್ತಿದೆ. ನ್ಯಾಯಾಲಯದ ಶುಲ್ಕವನ್ನು ಪಾವತಿ ಮಾಡದೆ ಅರ್ಜಿಗಳನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಅಪಾಯಕಾರಿ ನಡೆಯ ಪೂರ್ವ ನಿದರ್ಶನ ವಾಗುತ್ತದೆ. ಇದರ ಜೊತೆಗೆ ಮಾಹಿತಿ ಹಕ್ಕು ಕಾಯ್ದೆಯ ದುರುಪಯೋಗಕ್ಕೆ ಸಹಕಾರ ನೀಡಿದಂತೆ ಆಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಿಸಿದೆ.

ಅರ್ಜಿ ಹಾಕುವಾಗ ಪಾವತಿಸಬೇಕಿದ್ದ ಬಾಕಿ ಇರುವ ಕೋರ್ಟ್ ಶುಲ್ಕ, 9,64,600 ಪಾವತಿಗೆ ಅರ್ಜಿದಾರರಿಗೆ ಸೂಚನೆ ನೀಡಿದ್ದು, ಅದನ್ನು ಅರ್ಜಿದಾರರಿಂದ ಪಡೆದುಕೊಳ್ಳಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ರಿಜಿಸ್ಟರ್ ಗೆ ಹೈಕೋರ್ಟ್ ಪೀಠ ನಿರ್ದೇಶನ ನೀಡಿದೆ.

ಪ್ರಕರಣದ ವಿವರ…
ಅರ್ಜಿದಾರರಾದ ದಾವಲ್ ಸಾಬ್ ಎಂ ಮಿಯಾನ್ನವರ್ ಅವರು, ರಾಜ್ಯದ 14 ಇಲಾಖೆಗಳಿಂದ ವಿವಿಧ ಮಾಹಿತಿ ಕೇಳಿ ಸಲ್ಲಿಸಿದ 9646 ಮನವಿಗಳನ್ನು ಸಲ್ಲಿಸಿದ್ದರು. ಈ ಅರ್ಜಿಗಳಿಗೆ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ನವಲಗುಂದದ ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದರು.

ಅಲ್ಲಿಯೂ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ರಾಜ್ಯ ಮಾಹಿತಿ ಆಯೋಗಕ್ಕೆ ಎರಡನೇ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿದಾರರ ಅರ್ಜಿಗಳ ಸಂಖ್ಯೆಯನ್ನು ಗಮನಿಸಿದ ರಾಜ್ಯ ಮಾಹಿತಿ ಆಯೋಗದ ಆಯುಕ್ತರು, ಪ್ರಕರಣದ ವಿಚಾರಣೆಗೆ ಪೂರ್ಣ ಪೀಠ ರಚಿಸಿದ್ದರು.

ಅರ್ಜಿದಾರರು ಅನಗತ್ಯ ಮಾಹಿತಿಯನ್ನು ಕೇಳಿ ಬೇಜವಾಬ್ದಾರಿತ ಮನವಿಗಳನ್ನು ಸಲ್ಲಿಸಿದ್ದಾರೆ. ಈ ಮೂಲಕ ಆರ್ಟಿಐ ಕಾಯ್ದೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 3737 ಅರ್ಜಿಗಳು. ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯಲ್ಲಿ 964 ಅರ್ಜಿಗಳು, ತೋಟಗಾರಿಕೆ ಇಲಾಖೆಗೆ 492 ಅರ್ಜಿಗಳು, ಸೇರಿದಂತೆ ಇನ್ನೂ ಹಲವು ಇಲಾಖೆಗಳಿಗೂ ಹತ್ತಾರು ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಪೂರ್ಣಪೀಠವು ವರದಿ ನೀಡಿತು.

ಅರ್ಜಿದಾರರು ಸದುದ್ದೇಶವಿಲ್ಲದ ವರ್ತನೆ ತೋರಿಸುತ್ತಿದ್ದು, ಇಂತಹ ಅರ್ಜಿಗಳಿಗೆ ಮಾನ್ಯತೆ ನೀಡಿದರೆ ಆಡಳಿತದ ದಕ್ಷತೆಗೆ ಧಕ್ಕೆ ತರಲಿದೆ ಮತ್ತು ಸಾರ್ವಜನಿಕ ಸಂಪನ್ಮೂಲಕ್ಕೆ ಹೊರೆ ಉಂಟಾಗುತ್ತದೆ ಎಂದು ಸುಪ್ರೀಂ ಕೋರ್ಟ್ ನ ವಿವಿಧ ಆದೇಶಗಳನ್ನು ಉಲ್ಲೇಖಿಸಿ ಅರ್ಜಿಯನ್ನು ವಜಾಗೊಳಿಸಿತ್ತು.
2023ರ ಸೆಪ್ಟೆಂಬರ್ನಲ್ಲಿ ಮಾಡಿದ ರಾಜ್ಯ ಮಾಹಿತಿ ಆಯೋಗದ ಈ ಆದೇಶವನ್ನು ಪ್ರಶ್ನಿಸಿ ದಾವಲ್ ಸಾಬ್ ಎಂ ನಿಯಾನ್ನವರ್ ಹೈಕೋರ್ಟಿಗೆ ಮೊರೆ ಹೋಗಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.