19/05/2025

Law Guide Kannada

Online Guide

KSBC ಅಧ್ಯಕ್ಷರ ನಾಮನಿರ್ದೇಶನ ಕ್ರಮ ಪ್ರಶ್ನಿಸಿ ಅರ್ಜಿ: ಹೈಕೋರ್ಟ್ ನೋಟಿಸ್

ಬೆಂಗಳೂರು, ಮಾರ್ಚ್,28,2025 (www.justkannada.in): ಕರ್ನಾಟಕ ರಾಜ್ಯ ವಕೀಲರ ಪರಿಷತ್ತು (ಕೆಎಸ್ಬಿಸಿ) ಅಧ್ಯಕ್ಷರಾಗಿ ಎಸ್.ಎಸ್. ಮಿತ್ತಲಕೋಡ್ ಅವರನ್ನು ನಾಮನಿರ್ದೇಶನ ಮಾಡಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಬಿಸಿಐ, ಕೆಎಸ್ಬಿಸಿಗೆ ಕರ್ನಾಟಕ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ.
KSBC ಅಧ್ಯಕ್ಷರಾಗಿ ಎಸ್.ಎಸ್. ಮಿತ್ತಲಕೋಡ್ ನೇಮಕಾತಿ ಕುರಿತ ಐಬಿಸಿ ಮಾಡಿರುವ ಆದೇಶ ರದ್ದು ಕೋರಿ ಕೆಎಸ್ ಬಿಸಿ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಕೋಟೇಶ್ವರ್ ರಾವ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಏಪ್ರಿಲ್ 4ಕ್ಕೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ಹಿರಿಯ ವಕೀಲ ಎಸ್.ಎಸ್. ಯಡ್ರಾಮಿ ವಾದ ಮಂಡಿಸಿದ್ದು, ಎಸ್.ಎಸ್. ಮಿತ್ತಲಕೋಡ್ ಅವರನ್ನು ರಾಜ್ಯ ವಕೀಲರ ಪರಿಷತ್ ಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಹೊರಡಿಸಿರುವ ಅಧಿಸೂಚನೆ ಕಾನೂನು ಬಾಹಿರ. ಇದು ಬಾರ್ ಕೌನ್ಸಿಲ್ ನಿಮಗಳಿಗೆ ವಿರುದ್ಧವಾಗಿದ್ದು, ಈ ಹುದ್ದೆಗೆ ತಕ್ಷಣ ಚುನಾವಣೆ ನಡೆಸುವ ಮೂಲಕ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಕೋರಿದರು.

ಇನ್ನು ಕೆಎಸ್ಬಿಸಿ ಮತ್ತು ಮಿತ್ತಲಕೋಡ್ ಪರ ವಕೀಲ ಟಿ.ವಿ. ವಿವೇಕಾನಂದ ಅವರಿಗೆ ನೋಟೀಸ್ ಪಡೆಯಲು ನ್ಯಾಯಪೀಠ ನಿರ್ದೇಶಿಸಿತು. ಐಬಿಸಿ ಪರ ಅನುಭಾ ಶ್ರೀವಾಸ್ತವ ನೋಟೀಸ್ ಪಡೆದಿದ್ದು, ಆಕ್ಷೇಪಣೆಗೆ 10 ದಿನಗಳ ಕಾಲಾವಕಾಶ ಕೋರಿದರು.

ಪ್ರಕರಣದ ಹಿನ್ನೆಲೆ…
2024ರ ಮೇನಲ್ಲಿ ಕೆಎಸ್ಬಿಸಿ ಅಧ್ಯಕ್ಷರಾದ ವಿಶಾಲ್ ರಘು ಮತ್ತು ಉಪಾಧ್ಯಕ್ಷ ವಿನಯ್ ಮಂಗಳೇಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇವರಿಂದ ತೆರವಾದ ಈ ಸ್ಥಾನಕ್ಕೆ 2024ರ ಜುಲೈ 23ರಂದು ಚುನಾವಣೆ ನಿಗದಿ ಮಾಡಲಾಗಿತ್ತು. ಮೇ 31ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಈ ಮಧ್ಯೆ, ಬಿಸಿಐ ಅಧ್ಯಕ್ಷರ ನೇಮಕಾತಿ ಮಾಡಿರುವುದು ಕಾನೂನುಬಾಹಿರ ಎಂದು ಅರ್ಜಿದಾರರು ವಾದಿಸಿದರು. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಹೊಸತಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಕೂಡಲೇ ಚುನಾವಣೆಗಳನ್ನು ನಡೆಸಲು ನಿರ್ದೇಶನ ಕೊಡಬೇಕು ಹಾಗೂ ವಕೀಲರ ಕಾಯ್ದೆಯ ಸೆಕ್ಷನ್ 8ಎ ಪ್ರಕಾರ ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಕಾಲಾವಧಿ ವಿಸ್ತರಿಸಿದ ಹೊರತಾಗಿಯೂ ಕೆಎಸ್ಬಿಸಿಯು ಇಲ್ಲಿಯವರೆಗೆ ಪ್ರಾಕ್ಟಿಸ್ ಮಾಡದ ವಕೀಲರು ಮತ್ತು ಅವರ ಸರ್ಟಿಫಿಕೇಟ್ ಗಳನ್ನು ಪರಿಶೀಲಿಸಲು ಕೆಎಸ್ ಬಿಸಿ ವಿಫಲವಾದ ಹಿನ್ನೆಲೆಯಲ್ಲಿ ನಿಕಟಪೂರ್ವ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕೆ ಎಸ್.ಎಸ್. ಮಿತ್ತಲಕೋಡ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.