07/03/2026

Law Guide Kannada

Online Guide

ಬೆಟ್ಟಿಂಗ್ ಉದ್ದೇಶವಿಲ್ಲದೆ ಇಸ್ಪೀಟ್ ಆಡುವುದು ನೈತಿಕವಾಗಿ ತಪ್ಪಲ್ಲ : ಸುಪ್ರೀಂ ಕೋರ್ಟ್

ನವದೆಹಲಿ: ಬೆಟ್ಟಿಂಗ್ ಹಾಗೂ ಜೂಜಿನ ಉದ್ದೇಶ ಇಲ್ಲದೆ, ಮನರಂಜನೆ ಮತ್ತು ವಿನೋದಕ್ಕಾಗಿ ಇಸ್ಪೀಟು ಆಡುವುದು ನೈತಿಕ ಅಧಃಪತನ ಅಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಸರ್ಕಾರಿ ಪಿಂಗಾಣಿ ಕಾರ್ಖಾನೆ ನೌಕರರ ವಸತಿ ಸಹಕಾರಿ ಸಂಘ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಗೆ ಆಯ್ಕೆಯಾಗಿದ್ದ ಹನುಮಂತರಾಯಪ್ಪ ವೈಎಸ್‌ ಎನ್ನುವವರು ಕೆಲವರೊಂದಿಗೆ ಇಸ್ಪೀಟ್‌ ಆಡುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಅವರಿಗೆ ಯಾವುದೇ ವಿಚಾರಣೆ ನಡೆಸದೆ 200 ರೂ. ದಂಡವನ್ನು ವಿಧಿಸಲಾಗಿತ್ತು. ಈ ಬೆನ್ನಲ್ಲೇ ಹನುಮಂತರಾಯಪ್ಪ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಹೀಗಾಗಿ ಅವರನ್ನು ನಿರ್ದೇಶಕರ ಮಂಡಳಿಯಿಂದ ವಜಾಗೊಳಿಸಬೇಕು ಎಂದು ಚುನಾವಣೆಯಲ್ಲಿ ಹನುಮಂತರಾಯಪ್ಪ ವಿರುದ್ಧ ಸೋತಿದ್ದ ಬಿ. ರಂಗನಾಥ್‌ ಆಗ್ರಹಿಸಿದ್ದರು.

ಅಲ್ಲದೇ , ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆಯ ಸೆಕ್ಷನ್ ಅಡಿ ಅವರ ಸದಸ್ಯತ್ವ ರದ್ದುಗೊಳಿಸಲಾಗಿತ್ತು. ಹೈಕೋರ್ಟ್ ಕೂಡ ಈ ತೀರ್ಪು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಹನುಮಂತರಾಯಪ್ಪ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್. ಕೋಟೀಶ್ವರ ಸಿಂಗ್ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದೆ. ಕರ್ನಾಟಕದ ‘ಸರ್ಕಾರಿ ಪಾಸಲನ್ ಕಾರ್ಖಾನೆ ನೌಕರರ ಗೃಹನಿರ್ಮಾಣ ಸಹಕಾರ ಸಂಘ’ದ ಆಡಳಿತ ಮಂಡಳಿಗೆ ಚುನಾಯಿತರಾಗಿದ್ದ ಹನುಮಂತರಾಯಪ್ಪ ವೈ.ಸಿ. ಅವರ ಆಯ್ಕೆಯನ್ನು ಕೋರ್ಟ್ ಮರುಸ್ಥಾಪಿಸಿದೆ.

ಹನುಮಂತರಾಯಪ್ಪ ಅವರು ಜೂಜಾಡುವ ಅಭ್ಯಾಸ ಬೆಳೆಸಿಕೊಂಡ ವ್ಯಕ್ತಿ ಅಲ್ಲ ಎಂದು ಪೀಠವು ಹೇಳಿದೆ. ‘ಇಸ್ಪೀಟು ಆಟದಲ್ಲಿ ಹಲವು ಬಗೆಗಳಿವೆ. ಆದರೆ, ಅಂತಹ ಪ್ರತಿಯೊಂದು ಬಗೆಯೂ, ಅದರಲ್ಲೂ ಮುಖ್ಯವಾಗಿ ಮನರಂಜನೆಗಾಗಿ ಹಾಗೂ ವಿನೋದಕ್ಕಾಗಿ ಆಡುವುದು, ನೈತಿಕವಾದ ಅಧಃಪತನಕ್ಕೆ ಒಯ್ಯುವಂಥದ್ದು ಎಂಬುದನ್ನು ಒಪ್ಪಿಕೊಳ್ಳುವುದು ಕಷ್ಟ. ವಾಸ್ತವದಲ್ಲಿ, ನಮ್ಮ ದೇಶದ ಹಲವು ಕಡೆಗಳಲ್ಲಿ ಜೂಜು ಅಥವಾ ಬೆಟ್ಟಿಂಗ್ನ ಲವಲೇಶವೂ ಇಲ್ಲದೆ ಇಸ್ಪೀಟು ಆಡುವುದು ಬಡವರ ಮನರಂಜನಾ ಮಾರ್ಗ ಎಂದು ಒಪ್ಪಿತವಾಗಿದೆ’ ಎಂದು ನ್ಯಾಯಪೀಠ ತಿಳಿಸಿದೆ.

ಹನುಮಂತರಾಯಪ್ಪ ಅವರು ಅತಿಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದರು, ಅವರ ಆಯ್ಕೆಯನ್ನು ರದ್ದುಪಡಿಸಿರುವುದು ಅವರು ಮಾಡಿದ್ದಾರೆ ಎನ್ನಲಾದ ತಪ್ಪಿಗೆ ಹೋಲಿಸಿದರೆ ಬಹಳ ಹೆಚ್ಚಿನ ಶಿಕ್ಷೆ ಎಂದು ಕೋರ್ಟ್ ಹೇಳಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.