20/05/2025

Law Guide Kannada

Online Guide

ಪೋಕ್ಸೋ ಕಾಯ್ದೆ ನಿಯಮ ಮತ್ತಷ್ಟು ಬಿಗಿ: ಮಕ್ಕಳ ಅಶ್ಲೀಲ ಚಿತ್ರ ಸಂಗ್ರಹ, ವೀಕ್ಷಣೆ ಅಪರಾಧ – ಸುಪ್ರೀಂ ತೀರ್ಪು

ನವದೆಹಲಿ: ದೇಶದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು ಈ ಮಧ್ಯೆ ಇದೀಗ ಪೋಕ್ಸೋ ಕಾಯ್ದೆಯ ನಿಯಮಗಳನ್ನು ಸುಪ್ರೀಂ ಕೋರ್ಟ್ ಮತ್ತಷ್ಟು ಬಿಗಿಗೊಳಿಸಿದೆ. ಮಕ್ಕಳ ಲೈಂಗಿಕ ಚಿತ್ರಗಳನ್ನು ಮತ್ತು ದೃಶ್ಯಗಳ ಸಂಗ್ರಹಣೆ ಮತ್ತು ವೀಕ್ಷಣೆ ಮಾಡುವುದು ಫೋಕೋ ಕಾಯ್ದೆಯಡಿ ಅಪರಾಧ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ. ಬಿ ಪರ್ದಿವಾಲಾ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಜಸ್ಟ್ ರೈಟ್ ಫೋರ್ ಚಿನ್ ಅಲೈಯನ್ಸ್ ಗಿs ಎಸ್ ಹರೀಶ್ ಮತ್ತಿತರರು ಪ್ರಕರಣದಲ್ಲಿ ಈ ತೀರ್ಪು ನೀಡಲಾಗಿದೆ. ಮಕ್ಕಳ ಅಶ್ಲೀಲ ಚಿತ್ರವನ್ನು ಸಂಗ್ರಹಿಸುವುದು ಮತ್ತು ವೀಕ್ಷಿಸುವುದು ಪೋಕ್ಸೋ ಕಾಯ್ದೆ ಅಡಿ ಅಪರಾಧವಾಗುತ್ತದೆ. ಬೇರೆಯವರಿಗೆ ರವಾನಿಸದೇ ಇದ್ದರೂ ಅವುಗಳನ್ನು ಇಟ್ಟುಕೊಳ್ಳುವುದು ಅಪರಾಧ ಎಂದೇ ಪರಿಗಣಿಸಲಾಗುತ್ತದೆ ಎಂದು ಆದೇಶಿಸಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೋ) ಇದರ ಸೆಕ್ಷನ್ 15 ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಲು ಅಗತ್ಯವಿರುವ ಉದ್ದೇಶದ ತೀವ್ರತೆಯ ಬಗ್ಗೆ ನ್ಯಾಯಪೀಠ ತೀರ್ಪಿನಲ್ಲಿ ವಿವರಿಸಿದೆ. ಮಕ್ಕಳನ್ನು ಒಳಗೊಂಡಿರುವ ಅಶ್ಲೀಲ ಚಿತ್ರಗಳನ್ನು ಹಂಚುವ, ರವಾನಿಸುವ ಉದ್ದೇಶ ಇಟ್ಟುಕೊಂಡು ಅಥವಾ ವಾಣಿಜ್ಯ ಲಾಭ ಗಳಿಸುವ ಉದ್ದೇಶದೊಂದಿಗೆ ಡಿಜಿಟಲ್ ಸಾಧನಗಳಲ್ಲಿ ಅಂತಹ ಚಿತ್ರಗಳನ್ನು ವೀಕ್ಷಿಸುವುದು ಮತ್ತು ಸಂಗ್ರಹಿಸುವುದು ಅಪರಾಧ ಎಂದು ನ್ಯಾಯಪೀಠ ಹೇಳಿದೆ.

ಮಕ್ಕಳ ಲೈಂಗಿಕ ಚಿತ್ರಗಳನ್ನು ಮತ್ತು ದೃಶ್ಯಗಳನ್ನು ನ್ಯಾಯಾಲಯಕ್ಕೆ ಸಾಕ್ಷ್ಯವಾಗಿ ನೀಡುವ ಸಲುವಾಗಿ ಇಟ್ಟುಕೊಂಡಿದ್ದರೆ ಮತ್ತು ಅಂತವುಗಳ ಬಗ್ಗೆ ವರದಿ ಮಾಡುವ ಉದ್ದೇಶ ಇದ್ದರೆ ಅಪರಾಧದಿಂದ ವಿನಾಯಿತಿ ಇರುತ್ತದೆ. ಈ ಎರಡು ಪ್ರಸಂಗಗಳನ್ನು ಹೊರತುಪಡಿಸಿ ಯಾವುದೇ ರೂಪದಲ್ಲಿ ದೃಶ್ಯ ಮತ್ತು ಫೋಟೋಗಳನ್ನು ಇಟ್ಟುಕೊಳ್ಳುವುದು ಅಪರಾಧವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ

ಮಕ್ಕಳ ಅಶ್ಲೀಲ ಚಿತ್ರ ಸಂಗ್ರಹ, ವೀಕ್ಷಣೆ ಅಪರಾಧಕ್ಕೆ ಪೋಕ್ಸೋ ಕಾಯ್ದೆಯಡಿ ಶಿಕ್ಷೆ ಪ್ರಮಾಣ ಹೀಗಿದೆ…
ಪೋಕ್ಕೆ ಕಾಯ್ದೆಯ ಸೆಕ್ಷನ್ 15 ಅಡಿಯಲ್ಲಿ ಮಕ್ಕಳ ಲೈಂಗಿಕ ಚಿತ್ರ ದೃಶ್ಯಗಳನ್ನು ಇಟ್ಟುಕೊಳ್ಳುವುದು ಅಪರಾಧ. ಒಂದನೇ ಉಪ ಸೆಕ್ಷನ್ ಪ್ರಕಾರ, ಇಂತಹ ಚಿತ್ರಗಳು ದೃಶ್ಯಗಳನ್ನು ನಾಶಪಡಿಸಲು ವಿಫಲವಾಗಿದ್ದರೆ ಯಾ ಹಂಚಿಕೆ ಮಾಡುವ ಉದ್ದೇಶದಿಂದ ಇಟ್ಟುಕೊಂಡಿದ್ದರೆ ಅಥವಾ ಇಂತಹ ದೃಶ್ಯ ಇರುವ ಬಗ್ಗೆ ವರದಿ ಮಾಡುವಲ್ಲಿ ವಿಫಲವಾಗಿದ್ದರೆ ಆಗ ಅದು ಅಪರಾಧವಾಗುತ್ತದೆ.

ಪೋಕ್ಸೋ ಕಾಯ್ದೆಯ ಸೆಕ್ಷನ್ 15 ಉಪ ಸೆಕ್ಷನ್ 2ರ ಪ್ರಕಾರ, ಇಂತಹ ಚಿತ್ರಗಳು ದೃಶ್ಯಗಳನ್ನು ನ್ಯಾಯಾಲಯಕ್ಕೆ ಸಾಕ್ಷ್ಯ ನೀಡುವ ಸಲುವಾಗಿ ಅಥವಾ ವರದಿ ಮಾಡುವ ಉದ್ದೇಶಕ್ಕೆ ಹೊರತಾಗಿ ಸಂಗ್ರಹಿಸಿದ್ದರೆ ಅಪರಾಧವಾಗುತ್ತದೆ. ಗರಿಷ್ಟ ಮೂರು ವರ್ಷ ಜೈಲು ಶಿಕ್ಷೆ ಅಥವಾ ದಂಡ ಅಥವಾ ಆ ಎರಡನ್ನೂ ವಿಧಿಸಬಹುದಾಗಿದೆ.

ಪೋಕೊ ಕಾಯ್ದೆಯ ಸೆಕ್ಷನ್ 15 ಉಪ ಸೆಕ್ಷನ್ 3ರ ಪ್ರಕಾರ, ಇಂತಹ ಚಿತ್ರಗಳು ದೃಶ್ಯಗಳನ್ನು ವಾಣಿಜ್ಯ ಉದ್ದೇಶಕ್ಕೆ ಇಟ್ಟುಕೊಂಡಿದ್ದರೆ ಇದು ಅಪರಾಧ. ಇಂತಹ ಕೃತ್ಯಕ್ಕೆ ಮೊದಲ ಬಾರಿಯ ಅಪರಾಧಕ್ಕೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಆದರೆ, ಈ ದೃಶ್ಯಗಳನ್ನು ಲಾಭ ಗಳಿಸುವ ಉದ್ದೇಶಕ್ಕೆ ಇಟ್ಟುಕೊಳ್ಳಲಾಗಿತ್ತು ಎಂಬುದನ್ನು ಸೂಚಿಸುವ ಪೂರಕ ಸಂಗತಿಗಳು ಇರಬೇಕಾಗುತ್ತದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.