ಮೂತ್ರ ವಿಸರ್ಜನೆ ಪ್ರಶ್ನಿಸಿದ್ದಕ್ಕೆ ವಕೀಲರ ಮೇಲೆ ಪೊಲೀಸ್ ಹಲ್ಲೆ: FIR
ಬೆಂಗಳೂರು: ಖಾಸಗಿ ಕಟ್ಟಡದ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದುದನ್ನು ಪ್ರಶ್ನಿಸಿದ ವಕೀಲರೊಬ್ಬರ ಮೇಲೆ ಪೊಲೀಸ್ ಸಿಬ್ಬಂದಿ ಹಾಗೂ ಮತ್ತಿಬ್ಬರು ಹಲ್ಲೆ ಮಾಡಿರುವ ಘಟನೆ ನಡೆದಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದೆ.
ಈ ಸಂಬಂಧ ವಕೀಲ ಆದರ್ಶ್ ಗಂಗಲ್ ಎಂಬವರು ದೂರು ನೀಡಿದ್ದು, ಪೊಲೀಸ್ ಸಿಬ್ಬಂದಿ ಸತೀಶ್ ಹಾಗೂ ಮತ್ತಿಬ್ಬರು ಅಪರಿಚಿತರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಫೆಬ್ರವರಿ 6ರಂದು ರಾತ್ರಿ ಬೆಂಗಳೂರಿನ ಚರ್ಚ್ ಸ್ಟ್ರೀಟ್ ಕಲ್ಪಕಾ ಆರ್ಕೇಡ್ ಬಳಿ ಘಟನೆ ನಡೆದಿದೆ.
ಘಟನೆ ಬಗ್ಗೆ ದೂರಿನಲ್ಲಿ ವಿವರಿಸಿರುವ ವಕೀಲ ಆದರ್ಶ್ ಗಂಗಲ್ ಅವರು, ಫೆ.6ರಂದು ‘ಕಲ್ಪಕಾ ಆರ್ಕೇಡ್ ನಲ್ಲಿರುವ ಕಚೇರಿಯಿಂದ ರಾತ್ರಿ ಕೆಲಸ ಮುಗಿಸಿಕೊಂಡು 9 ಗಂಟೆ ಸುಮಾರಿಗೆ ಮನೆಗೆ ತೆರಳುವ ವೇಳೆ ಕಟ್ಟಡದ ಪ್ಯಾಸೇಜ್ನಲ್ಲಿ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಇದನ್ನು ಕಂಡು ಮೂತ್ರ ವಿಸರ್ಜನೆ ಮಾಡದಂತೆ ಹೇಳಿದೆ. ಇದರಿಂದ ಕೋಪಗೊಂಡ ಸತೀಶ್ ಹಾಗೂ ಅಲ್ಲಿಯೇ ಮದ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ತನ್ನ ಮೇಲೆ ಹಲ್ಲೆ ನಡೆಸಿ ಪರಾರಿಯಾದರು” ಎಂದು ಆರೋಪಿಸಿದ್ದಾರೆ.
ಸತೀಶ್ ಎಂಬುವವರು ಪೊಲೀಸ್ ಸಮವಸ್ತ್ರದಲ್ಲಿದ್ದರು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದೂರುದಾರನ ಮೇಲೆ ಹಲ್ಲೆ ಮಾಡಿದವರ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
