07/03/2026

Law Guide Kannada

Online Guide

ಕಾರಣ ಇಲ್ಲದೆ ಪೊಲೀಸರು ಅನ್ಯರ ಕರೆ ವಿವರ ಪಡೆಯವುದು ಅಕ್ರಮ: ಇದು ‘ಗೌಪ್ಯತೆ ಹಕ್ಕಿನ ಉಲ್ಲಂಘನೆ- ಹೈಕೋರ್ಟ್

ಬೆಂಗಳೂರು: ವ್ಯಕ್ತಿಯ ಕರೆ ವಿವರ ದಾಖಲೆಗಳು (CDR ಗಳು) ಖಾಸಗಿಯಾಗಿದ್ದು, ಯಾವುದೇ ಕಾರಣ ಇಲ್ಲದೆ ಪೊಲೀಸರು ಇತರರ ದೂರವಾಣಿ ಕರೆಯ ವಿವರ ಪಡೆಯವುದು ಅಕ್ರಮ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಬ್ಯಾಟರಾಯನಪುರ ಪೊಲೀಸ್ ಠಾಣೆಯ ಸಬ್-ಇನ್ಸ್ಪೆಕ್ಟರ್ ವಿದ್ಯಾ ವಿಎಂ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್ ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

ಪೊಲೀಸರು ಅನಗತ್ಯವಾಗಿ ಕರೆ ವಿವರ ದಾಖಲೆ ಸಂಗ್ರಹಿಸುವಂತಿಲ್ಲ. ಪೊಲೀಸರು ತಮ್ಮ ಮನಬಂದಂತೆ ಅನಗತ್ಯವಾಗಿ ತಮಗೆ ಬೇಕಾದವರ ಸಿಡಿಆರ್ ಪಡೆಯುವ ಅಧಿಕಾರ ಚಲಾಯಿಸುತ್ತಾ ಹೋದರೆ ಅದು ಪೋಲೀಸ್ ರಾಜ್ಯವಾಗುತ್ತದೆ. ನಾನು ಪೊಲೀಸ್ ಅಧಿಕಾರಿಯಾಗಿದ್ದೇನೆ ಎಂದು ದುರಂಹಕಾರ ಮತ್ತು ದರ್ಪದಿಂದ ಯಾರದೋ ಮೊಬೈಲ್ ನ ಸಿಡಿಆರ್ ಪಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ದೂರವಾಣಿ ಕರೆಯ ವಿವರ(ಕಾಲ್ ಡೀಟೇಲ್ಸ್ ರಿಪೋರ್ಟ್)ಗಳನ್ನು ಕಾನೂನುಬದ್ದ ತನಿಖಾಧಿಕಾರಿಯಿಂದ ಮಾತ್ರ ಪಡೆಯಬಹುದು. ಇಲ್ಲದಿದ್ದರೆ ನಮ್ಮ ಸಮಾಜ ಪೊಲೀಸ್ ರಾಜ್ಯವಾಗಿ ಬದಲಾಗಬಹುದು ಎಂದು ಎಚ್ಚರಿಸಿದರು.

ವ್ಯಕ್ತಿಯ ಕರೆ ವಿವರ ದಾಖಲೆಗಳು ವೈಯಕ್ತಿಕ ಮತ್ತು ಖಾಸಗಿ ವಿವರಗಳಾಗಿವೆ ಮತ್ತು ಅನಗತ್ಯವಾಗಿ ಅಂತಹ ವಿವರಗಳನ್ನು ಸಂಗ್ರಹಿಸುವುದು ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. “ಕಾನೂನುಬದ್ಧ ತನಿಖೆಯ ಭಾಗವಲ್ಲದ ಸಿಡಿಆರ್ ಗಳನ್ನು ಪಡೆಯಲು ಪೊಲೀಸರಿಗೆ ಅವಕಾಶ ನೀಡಿದರೆ, ಅದು ಪೊಲೀಸ್ ರಾಜ್ಯಕ್ಕೆ ಕಾರಣವಾಗುತ್ತದೆ” ಎಂದು ನ್ಯಾಯಾಧೀಶರು ವಿಚಾರಣೆಯ ಸಮಯದಲ್ಲಿ ಹೇಳಿದೆ.

ಯಾವುದೇ ವ್ಯಕ್ತಿಯ ಸಿಡಿಆರ್ ಪಡೆಯುವ ಅಧಿಕಾರವನ್ನು ತನಿಖಾಧಿಕಾರಿಯು ಕಾನೂನುಬದ್ಧ ತನಿಖೆಯ ಸಮಯದಲ್ಲಿ ಮಾತ್ರ ಚಲಾಯಿಸಬೇಕು ಎಂದು ನ್ಯಾಯಾಲಯವು ಪೊಲೀಸ್ ಅಧಿಕಾರಿಯ ಅರ್ಜಿಯನ್ನು ವಜಾಗೊಳಿಸುವ ಮೊದಲು ಹೇಳಿದೆ.

ಏನಿದು ಪ್ರಕರಣ
ವಿದ್ಯಾ ವಿಎಂ ಮತ್ತು ಇತರ ಕೆಲವು ಸಹ-ಆರೋಪಿಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354(ಡಿ) (ಹಿಂಬಾಲಿಸುವುದು), 409 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ), 506 (ಕ್ರಿಮಿನಲ್ ಬೆದರಿಕೆ) ಮತ್ತು 509 (ಪದ, ಸನ್ನೆ, ನಮ್ರತೆಯನ್ನು ಅವಮಾನಿಸುವ ಉದ್ದೇಶದ ಕೃತ್ಯ) ಅಡಿಯಲ್ಲಿ ಕ್ರಿಮಿನಲ್ ಪ್ರಕರಣವನ್ನು ಎದುರಿಸುತ್ತಾರೆ, ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 66(ಡಿ) (ಕಂಪ್ಯೂಟರ್ ಸಂಪನ್ಮೂಲವನ್ನು ಬಳಸಿಕೊಂಡು ವಂಚಿಸುವುದು) ಮತ್ತು 66(ಇ) (ಗೌಪ್ಯತಾ ಉಲ್ಲಂಘನೆ) ಸೆಕ್ಷನ್ಗಳನ್ನು ಸಹ ಅನ್ವಯಿಸಲಾಗುತ್ತದೆ.

ವಿದ್ಯಾ ವಿಎಂ ಮೇಲೆ ಮಹಿಳೆಯೊಬ್ಬರ ಕರೆ ವಿವರ ದಾಖಲೆಗಳನ್ನು ಅಕ್ರಮವಾಗಿ ಪಡೆದ ಆರೋಪ ಹೊರಿಸಲಾಗಿತ್ತು ಎಂದು ವರದಿಯಾಗಿದೆ. ಪೊಲೀಸ್ ಅಧಿಕಾರಿಗಳು ತಮ್ಮ ಸಿಡಿಆರ್ಗಳನ್ನು ಅಕ್ರಮವಾಗಿ ಪಡೆದಿದ್ದಾರೆ. ಈ ಸಿಡಿಆರ್ಗಳನ್ನು ಸಹ-ಆರೋಪಿಗಳು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಅವರು ತಮ್ಮನ್ನು ತೊಂದರೆಗೊಳಿಸುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು.

ನಂತರ ಮಹಿಳೆಯು ವಿದ್ಯಾ ಮತ್ತು ಇತರರ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಡಿಸೆಂಬರ್ 2024 ರಲ್ಲಿ, ವಿಚಾರಣಾ ನ್ಯಾಯಾಲಯವು ಪ್ರಕರಣದಲ್ಲಿ ಆರೋಪಿಗಳಾಗಿದ್ದ ವಿದ್ಯಾ ಮತ್ತು ಇತರರಿಗೆ ಸಮನ್ಸ್ ಜಾರಿ ಮಾಡಿತು. ಅಂತಿಮವಾಗಿ ವಿದ್ಯಾ ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಲು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.