19/05/2025

Law Guide Kannada

Online Guide

ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಕೇಸ್: 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, 85 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್

ಕೊಯಮತ್ತೂರು: ತಮಿಳುನಾಡಿನಲ್ಲಿ ಬಾರಿ ಚರ್ಚಿತವಾಗಿದ್ದ ಆರು ವರ್ಷಗಳ ಹಿಂದೆ ನಡೆದಿದ್ದ ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಮತ್ತು ಸುಲಿಗೆ ಪ್ರಕರಣದಲ್ಲಿ ಬಂಧಿತರಾಗಿದ್ದ 9 ಆರೋಪಿಗಳನ್ನು ಅಪರಾಧಿಗಳು ಎಂದು ಮಹಿಳಾ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಎಲ್ಲಾ ಅಪರಾಧಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ.

ರಿಶ್ವನಾಥ ಅಲಿಯಾಸ್ ಎನ್. ಶಬರಿರಾಜನ್, ಕೆ. ತಿರುನಾವುಕ್ಕರಸು, ಎಂ. ಸತೀಶ್, ಟಿ. ವಸಂತಕುಮಾರ್, ಆರ್. ಮಣಿವಣ್ಣನ್ ಅಲಿಯಾಸ್ ಮಣಿ, ಪಿ. ಬಾಬು ಅಲಿಯಾಸ್ ಬೈಕ್ ಬಾಬು, ಕೆ. ಅರುಳನಾಥಂ, ಟಿ. ಹಾರೊನಿಮಸ್ ಪೌಲ್ ಹಾಗೂ ಎಂ. ಅರುಣಕುಮಾರ್ ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಇವರೆಲ್ಲರೂ 30ರಿಂದ 39 ವರ್ಷದವರಾಗಿದ್ದಾರೆ. ಶಿಕ್ಷೆ ಪ್ರಕಟ ಹಿನ್ನೆಲೆಯಲ್ಲಿ ಸೇಲಂ ಜೈಲಿನಲ್ಲಿದ್ದ ಇವರನ್ನು ಭಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತರಲಾಯಿತು.

ನ್ಯಾಯಾಧೀಶೆ ಆರ್. ನಂದಿನಿ ದೇವಿ ಅವರು 9 ಅಪರಾಧಿಗಳಿಗೂ ಜೀವಾವಧಿ ಶಿಕ್ಷೆಯ ಜತೆಗೆ, ಎಂಟು ಸಂತ್ರಸ್ತರಿಗೆ ₹85 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿ ತೀರ್ಪು ಪ್ರಕಟಿಸಿದ್ದಾರೆ.

ಏನಿದು ಪ್ರಕರಣ
2016ರಿಂದ 2018ರ ಅವಧಿಯಲ್ಲಿ ಕಾಲೇಜು ಹುಡುಗಿಯರು ಸೇರಿದಂತೆ ಎಂಟು ಮಂದಿಗೆ ಲೈಂಗಿಕ ಕಿರುಕುಳ ನೀಡಿ, ಅದನ್ನು ವಿಡಿಯೊ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಈ ಪ್ರಕರಣ 2019ರಲ್ಲಿ ಬೆಳಕಿಗೆ ಬಂದಿತ್ತು. ಸಂತ್ರಸ್ತೆಯರಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ತಮಿಳುನಾಡಿನಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ರಾಜ್ಯ ಪೊಲೀಸರು ಆರಂಭದಲ್ಲಿ ತನಿಖೆ ನಡೆಸಿದರಾದರೂ, ನಂತರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು.

ಇನ್ನು ತೀರ್ಪು ಪ್ರಕಟವಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಬಿಐ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸುರೇಂದ್ರ ಮೋಹನ್, ‘ಬಂಧಿತರ ಮೇಲಿದ್ದ ಕ್ರಿಮಿನಲ್ ಪಿತೂರಿ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಸಾಮೂಹಿಕ ಅತ್ಯಾಚಾರ ಮತ್ತು ಸುಲಿಗೆ ಆರೋಪಗಳು ಸಾಬೀತಾಗಿದ್ದು, ಸಾಯುವವರೆಗೂ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ತಿಳಿಸಿದರು.

‘ಪೊಲ್ಲಾಚಿ ಪ್ರಕರಣವು ತಮಿಳುನಾಡು ಸಧನದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಜೀವಾವಧಿ ಶಿಕ್ಷೆಯ ಐದು ಬಗೆಯಲ್ಲಿ ಎರಡನೇ ಆರೋಪಿ ಕೆ. ತಿರುನಾವುಕ್ಕರಸುಗೆ ಗರಿಷ್ಠ ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಒಬ್ಬ ಸಾಕ್ಷಿಯೂ ತನ್ನ ಹೇಳಿಕೆಯನ್ನು ಬದಲಿಸಲಿಲ್ಲ. ಜತೆಗೆ ಸಂತ್ರಸ್ತರ ಗುರುತನ್ನು ಬಹಿರಂಗಪಡಿಸಲಿಲ್ಲ’ ಎಂದಿದ್ದಾರೆ.

‘ಪ್ರಕರಣದಲ್ಲಿ ಒಟ್ಟು 48 ಸಾಕ್ಷಿಗಳಿದ್ದರು. ಸಂತ್ರಸ್ತ ಮಹಿಳೆಯರು ಚಿಕ್ಕ ವಯಸ್ಸಿನವರು ಮತ್ತು ವಯಸ್ಸಾದ ಪಾಲಕರನ್ನು ಗಮದಲ್ಲಿಟ್ಟುಕೊಂಡು ಖುದ್ದು ಹಾಜರಿಯಿಂದ ಅವರಿಗೆ ವಿನಾಯಿತಿ ನೀಡಲಾಗಿತ್ತು. ಎಲೆಕ್ಟ್ರಾನಿಕ್ ಸಾಕ್ಷಿಗಳ ಮೂಲಕ ಪ್ರಕರಣವನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲಾಯಿತು. ತನಿಖೆಯಲ್ಲಿ ಸಿಬಿಐ ಯಾವ ಪ್ರಯತ್ನವೂ ವ್ಯರ್ಥವಾಗಲಿಲ್ಲ. ಕೊನೆಗೂ ನ್ಯಾಯ ದೊರಕಿತು’ ಎಂದು ದಿಶಾ ತಿಳಿಸಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.