06/03/2026

Law Guide Kannada

Online Guide

ಕಡ್ಡಾಯ ಸೇವಾ ಬಾಂಡ್ ಅವಧಿ ಮುಂದೂಡಿ, ಸೂಪರ್ ಸ್ಪೆಷಾಲಿಟಿ ಕೋರ್ಸ್ ಗೆ ಅನುವು ಮಾಡಿಕೊಡಿ – ಸುಪ್ರೀಂ ಸೂಚನೆ

ನವದೆಹಲಿ: ‘ಸರ್ಕಾರಿ ಕಡ್ಡಾಯ ಸೇವಾ ಬಾಂಡ್ ಅವಧಿಯನ್ನು ಮುಂದೂಡಿ ಈ ಮೂಲಕ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಸೂಪರ್ ಸ್ಪೆಷಾಲಿಟಿ ಕೋರ್ಸ್ ತೆಗೆದುಕೊಳ್ಳಲು ಅನುವು ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಶ್ಯಾಮ್ ಚಂದ್ರನ್ ಎಂಬುವವರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್. ಮಹಾದೇವನ್, ‘ಸೂಪರ್ ಸ್ಪೆಷಾಲಿಟಿ ಕೋರ್ಸ್ ಪೂರ್ಣಗೊಳಿಸುವ ಅಭ್ಯರ್ಥಿಗಳು ರಾಜ್ಯದಲ್ಲೇ ಸೇವೆ ಸಲ್ಲಿಸುವುದರಿಂದ ಹಲವು ಪ್ರಯೋಜನಗಳೂ ಆಗುತ್ತವೆ. ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವುದನ್ನು ಅನೇಕ ರಾಜ್ಯಗಳು ಕಡ್ಡಾಯಗೊಳಿಸಿವೆ. ‘ಸೇವಾ ಬಾಂಡ್ ಸಲ್ಲಿಸಿದ ಅಭ್ಯರ್ಥಿಗಳು ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಕೋರ್ಸ್ ಗಳಿಗೆ ಅರ್ಹತೆಯ ಆಧಾರದ ಮೇಲೆ ಪ್ರವೇಶ ಪಡೆದಾಗ, ಅವರು ಆ ಕೋರ್ಸ್ ಅನ್ನು ಪೂರ್ಣಗೊಳಿಸುವವರೆಗೆ ಬಾಂಡ್ ನಡಿ ಸೇವೆ ಸಲ್ಲಿಸುವುದನ್ನು ಮುಂದೂಡಲು ರಾಜ್ಯಗಳು ಕ್ರಮ ಕೈಗೊಳ್ಳಬೇಕು’ ಎಂದು ಸೂಚನೆ ನೀಡಿತು.

‘ಒಂದು ವೇಳೆ ಅಭ್ಯರ್ಥಿಯು ಮೊದಲು ಕಡ್ಡಾಯ ಸೇವೆಯನ್ನು ಪೂರ್ಣಗೊಳಿಸಿ, ಆನಂತರ ಸೂಪರ್ ಸ್ಪೆಷಾಲಿಟಿ ಕೋರ್ಸ್ ಗಳಾದ ಎಂಸಿಎಚ್ ಮತ್ತು ಡಿಎಂಗೆ ಅರ್ಜಿ ಸಲ್ಲಿಸಬೇಕೆಂಬ ನಿಯಮವಿದ್ದರೆ, ಅಂತಹ ಸಂದರ್ಭಗಳಲ್ಲಿ ಕೆಲವು ಅಭ್ಯರ್ಥಿಗಳು ವಯೋಮಿತಿ ಅಥವಾ ಇತರ ಕಾರಣಗಳಿಂದ ಆ ಕೋರ್ಸ್ಗಳಿಗೆ ಸೇರಲು ಅನರ್ಹರಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಆ ಕೋರ್ಸ್ ಅನ್ನು ಪೂರ್ಣಗೊಳಿಸುವವರೆಗೆ ಬಾಂಡ್ ನಡಿ ಸೇವೆ ಸಲ್ಲಿಸುವುದನ್ನು ಮುಂದೂಡಬೇಕು ಎಂದು ನ್ಯಾಯಪೀಠವು ತಿಳಿಸಿದೆ.

ಶ್ಯಾಮ್ ಚಂದ್ರನ್ ಅವರು ಹಿಮಾಚಲ ಪ್ರದೇಶ ರಾಜ್ಯದಲ್ಲಿ ತಮ್ಮ ಬಾಂಡ್ ಅವಧಿಯನ್ನು ಪೂರೈಸಲು ಕಡ್ಡಾಯ ಸೇವೆಗೆ ನಿಯೋಜನೆಗೊಳ್ಳುವ ಮೊದಲೇ ಡಿಎಂ/ಎಂಸಿಎಚ್ ಕೋರ್ಸ್ಗೆ ಆಯ್ಕೆಯಾಗಿದ್ದರು. ಸೂಪರ್ ಸ್ಪೆಷಾಲಿಟಿ ಕೋರ್ಸ್ಗಳಾದ ಡಿಎಂ/ಎಂಸಿಎಚ್ ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 9ನೇ ರ್ಯಾಂಕ್ ಪಡೆದಿದ್ದಾರೆ. ತಿರುವನಂತಪುರದ ಶ್ರೀ ಚಿತ್ರ ತಿರುನಾಳ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ ಆ್ಯಂಡ್ ಟೆಕ್ನಾಲಜಿಯಲ್ಲಿ ನಡೆಯುವ ಕೌನ್ಸೆಲಿಂಗ್ ಗೆ ಹಾಜರಾಗಬೇಕಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.