20/05/2025

Law Guide Kannada

Online Guide

ಭ್ರಷ್ಟಾಚಾರ ಪ್ರಕರಣದಲ್ಲಿ ಪ್ರಾಥಮಿಕ ತನಿಖೆ ಕಡ್ಡಾಯವಲ್ಲ; ಸುಪ್ರೀಂ ಕೋರ್ಟ್‌ ಅಭಿಪ್ರಾಯ

ನವದೆಹಲಿ:  ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ದಾಖಲಾದ ಪ್ರತಿಯೊಂದು ಪ್ರಕರಣದಲ್ಲೂ ಪ್ರಾಥಮಿಕ ತನಿಖೆ ಕಡ್ಡಾಯವಲ್ಲ. ವಿವರವಾದ ಮತ್ತು ತಾರ್ಕಿಕವಾದ ಮಾಹಿತಿಯುಳ್ಳ ವರದಿಯು ಮೇಲಾಧಿಕಾರಿಗೆ ದೊರೆತಿದ್ದರೆ ಹಾಗೂ ಯಾವುದೇ ವ್ಯಕ್ತಿಯು ಅದನ್ನು ನೋಡಿದರೆ ಮೇಲ್ನೋಟಕ್ಕೆ ಅಪರಾಧ ನಡೆದಿದೆ ಎಂಬುದು ತಿಳಿಯುವಂತಿದ್ದರೆ ಪ್ರಾಥಮಿಕ ತನಿಖೆಯ ಅಗತ್ಯ ಇಲ್ಲ’ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಹೈಕೋರ್ಟ್‌ 2024ರ ಮಾರ್ಚ್‌ 4ರಂದು ನೀಡಿದ್ದ ತೀರ್ಪಿನ ವಿರುದ್ಧ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ನಿಶಾಂತ್‌ ಪಾಟೀಲ ನೇತೃತ್ವದಲ್ಲಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದೇ ವೇಳೆ ಲಲಿತಾ ಕುಮಾರಿ ವರ್ಸಸ್‌ ಉತ್ತರ ಪ್ರದೇಶ ಸರ್ಕಾರ (2014) ಪ್ರಕರಣದಲ್ಲಿ ಸಂವಿಧಾನ ಪೀಠ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಭ್ರಷ್ಟಾಚಾರ ಪ್ರಕರಣದಲ್ಲಿ ‘ಪ್ರಾಥಮಿಕ ತನಿಖೆ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದು ಪ್ರತಿಯೊಂದು ಪ್ರಕರಣದ ವಾಸ್ತವಾಂಶಗಳು ಮತ್ತು ಸನ್ನಿವೇಶಗಳಿಗೆ ಅನುಗುಣವಾಗಿ ಬದಲಾಗುತ್ತದೆ’ ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರಿನ ಬೆಸ್ಕಾಂನ ಉಪ ಮಹಾ ವ್ಯವಸ್ಥಾಪಕ (ವಿಜಿಲೆನ್ಸ್)/ಕಾರ್ಯನಿರ್ವಾಹಕ ಎಂಜಿನಿಯರ್ (ಎಲೆಕ್ಟ್ರಿಕಲ್) ಆಗಿದ್ದ ಪ್ರತಿವಾದಿ ಟಿ.ಎನ್. ಸುಧಾಕರ್ ರೆಡ್ಡಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 13(1)(ಬಿ), ಸೆಕ್ಷನ್ 12 ಮತ್ತು ಸೆಕ್ಷನ್ 13(2) ಅಡಿಯಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ದಾಖಲಿಸಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿತ್ತು.
ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಯು 2023ರ ಡಿಸೆಂಬರ್ 4ರಂದು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ರ ಅಡಿಯಲ್ಲಿ ನೇರವಾಗಿ ಎಫ್‌ಐಆರ್ ದಾಖಲಿಸುವ ಮೂಲಕ ಕಡ್ಡಾಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಹೈಕೋರ್ಟ್ ನೀಡಿದ್ದ ತೀರ್ಪು ದೋಷಪೂರಿತ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಸೆಕ್ಷನ್ 17 ಅನ್ವಯಿಸುವುದು ಪ್ರಕರಣದ ತನಿಖಾ ಪ್ರಕ್ರಿಯೆಗೆ ಹೊರತು ಪ್ರಾಥಮಿಕ ಹಂತದ ಎಫ್‌ಐಆರ್ ದಾಖಲಾತಿಗೆ ಅಲ್ಲ. ಎಫ್‌ಐಆರ್‌ಗಳು ಸಿಆರ್‌ಪಿಸಿಯ ನಿಯಮಗಳನ್ನು ಆಧರಿಸಿರುತ್ತವೆ. ಆದ್ದರಿಂದ, ಇದು ತನಿಖೆಗೆ ಮಾತ್ರ ಅನ್ವಯಿಸುತ್ತದೆ. ಇದು ಕಾನೂನು ಜಾರಿ ಏಜೆನ್ಸಿಗಳ ಮೂಲಭೂತ ಕರ್ತವ್ಯವಾದ ಎಫ್‌ಐಆರ್ ದಾಖಲೆಗೆ ತೊಂದರೆಯಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ನ್ಯಾಯಯುತ ತನಿಖೆ ಎಂಬುದನ್ನು ಆರೋಪಿಗಳಿಗೆ ಮಾತ್ರ ಸೀಮಿತ ಎಂದು ವ್ಯಾಖ್ಯಾನಿಸಲಾಗುವುದಿಲ್ಲ. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣದ ತನಿಖೆಗೆ ಅವಕಾಶ ಇದೆ ಎಂದಾದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಸಿಆರ್‌ಪಿಸಿ ನಿಯಮಗಳ ಅಡಿಯಲ್ಲಿ ತನಿಖೆಗೆ ಆದೇಶ ನೀಡಲು ಪೊಲೀಸ್ ವರಿಷ್ಠಾಧಿಕಾರಿಗೆ ಅಧಿಕಾರವಿದೆ ಎಂದು ನ್ಯಾಯಪೀಠ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.