ಮಸೂದೆಗಳಿಗೆ ಅಂಗೀಕಾರ ಕುರಿತು ರಾಷ್ಟ್ರಪತಿ, ರಾಜ್ಯಪಾಲರಿಗೆ ಕಾಲಮಿತಿ ನಿಗದಿ ಸಾಧ್ಯವಿಲ್ಲ- ಸುಪ್ರೀಂ ಕೋರ್ಟ್
ನವದೆಹಲಿ, ನವೆಂಬರ್, 20,2025 (www.justkannada.in): ಮಸೂದೆಗಳನ್ನು ಅಂಗೀಕಾರ ಮಾಡುವ ಕುರಿತು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ನ್ಯಾಯಾಲಯ ಯಾವುದೇ ಕಾಲಮಿತಿ ನಿಗದಿಪಡಿಸುವುದಕ್ಕೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ತಮಿಳುನಾಡು ಮಸೂದೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ ತೀರ್ಪಿನ ನಂತರ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನದ 200 ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರ ಮುಂದೆ ಮಸೂದೆಯನ್ನು ಮಂಡಿಸುವಾಗ ಲಭ್ಯವಿರುವ ಆಯ್ಕೆಗಳ ಬಗ್ಗೆ ತನ್ನ ಅಭಿಪ್ರಾಯವನ್ನು ನೀಡುವಂತೆ ಸುಪ್ರೀಂ ಕೋರ್ಟ್ ಅನ್ನು ಕೇಳಿದ್ದರು.
ಸಂವಿಧಾನದ 143ನೇ ವಿಧಿಯ ಅನ್ವಯ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿದ ಉಲ್ಲೇಖಕ್ಕೆ ಉತ್ತರಿಸಿರುವ ಸುಪ್ರೀಂ ಕೋರ್ಟ್, ಸಂವಿಧಾನದ 200/201ನೇ ವಿಧಿಗಳ ಅಡಿಯಲ್ಲಿ ಮಸೂದೆಗಳಿಗೆ ಒಪ್ಪಿಗೆ ನೀಡುವ ಕುರಿತು ರಾಷ್ಟ್ರಪತಿ ಮತ್ತು ರಾಜ್ಯಪಾಲರ ನಿರ್ಧಾರಗಳಿಗೆ ನ್ಯಾಯಾಲಯ ಯಾವುದೇ ಸಮಯವನ್ನು ವಿಧಿಸಲು ಸಾಧ್ಯವಿಲ್ಲ. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ರಾಜ್ಯಪಾಲರಿಗೆ ಸಮಯದ ಮಿತಿಯನ್ನು ನಿಗದಿಪಡಿಸುವುದು ಸಂವಿಧಾನ ನೀಡಿರುವ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಸಿಜೆಐ ಬಿ.ಆರ್. ಗವಾಯಿ ನೇತೃತ್ವದ ಸಾಂವಿಧಾನಿಕ ಪೀಠವು, ಸಂವಿಧಾನದ 143 ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಲ್ಲೇಖಿಸಿದ 13 ಪ್ರಶ್ನೆಗಳಿಗೆ ಉತ್ತರಿಸಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಮಸೂದೆಗಳನ್ನು ಅಂಗೀಕಕರಿಸಲು ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ನ್ಯಾಯಾಲಯ ಸಮಯದ ಮಿತಿ ನಿಗದಿಪಡಿಸಲಾಗದು. ಕಾಲಮಿತಿಯನ್ನು ವಿಧಿಸುವುದು ಸಂವಿಧಾನಕ್ಕೆ ಖಂಡಿತವಾಗಿ ವಿರುದ್ಧವಾಗಿದೆ ಎಂದು ತಿಳಿಸಿದೆ.
ಆದರೆ, ರಾಜ್ಯಪಾಲರು ಮಸೂದೆಗಳ ಕುರಿತು ನಿರ್ಧಾರ ತೆಗೆದುಕೊಳ್ಳದೆ ಅನಿರ್ದಿಷ್ಟವಾಗಿ ವಿಳಂಬ ಮಾಡುವಂತಿಲ್ಲ. ಮಸೂದೆ ಕುರಿತು ಕಾಲಮಿತಿಯೊಳಗೆ ನಿರ್ಧರಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ. ರಾಜ್ಯಪಾಲರು ಅತಿಯಾದ ವಿಳಂಬ ಮಾಡಿದರೆ, ಯಾವುದೇ ಕಾರಣವಿಲ್ಲದೆ ತೀರ್ಮಾನವನ್ನು ತಡೆಯುತ್ತಿದ್ದರೆ, ಅದು ಶಾಸಕಾಂಗ ಪ್ರಕ್ರಿಯೆಯನ್ನು ಅಡ್ಡಿಪಡಿಸಿದರೆ, ನ್ಯಾಯಾಲಯ ಸೀಮಿತ ಹಸ್ತಕ್ಷೇಪ ಮಾಡಿ, ರಾಜ್ಯಪಾಲರು ಒಂದು ನಿಗದಿತ ಸಮಯದೊಳಗೆ ನಿರ್ಧಾರ ತೆಗೆದುಕೊಳ್ಳಬೇಕೆಂದು ಸೂಚಿಸಬಹುದು ಎಂದು ನ್ಯಾಯಪೀಠವು ಹೇಳಿದೆ.
ಏಪ್ರಿಲ್ 2025 ರಲ್ಲಿ, ಸುಪ್ರೀಂ ಕೋರ್ಟ್ನ ಇಬ್ಬರು ನ್ಯಾಯಮೂರ್ತಿಗಳ ಪೀಠವು, ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ತನ್ನ ಅಧಿಕಾರವನ್ನು ಬಳಸಿಕೊಂಡು, ವಿಧಾನಸಭೆಯು ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುವಲ್ಲಿ ವಿಳಂಬದ ಬಗ್ಗೆ ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್.ಎನ್. ರವಿ ನಡುವಿನ ಬಿಕ್ಕಟ್ಟನ್ನು ಪರಿಹರಿಸಿತ್ತು.
ತಮಿಳುನಾಡು ರಾಜ್ಯಪಾಲರ ಪ್ರಕರಣದಲ್ಲಿ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ಶಾಸಕಾಂಗವು ಅಂಗೀಕರಿಸಿದ ಮಸೂದೆಗಳನ್ನು ಅಂಗೀಕರಿಸಲು ಗಡುವನ್ನು ನಿಗದಿಪಡಿಸಿದ ದ್ವಿಸದಸ್ಯ ಪೀಠದ ತೀರ್ಪಿನ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಪ್ರೀಂ ಕೋರ್ಟ್ಗೆ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
