ಅರ್ಚಕರು ದೇಗುಲದ ಆಸ್ತಿ ಮೇಲೆ ಹಕ್ಕು, ವಂಶಪಾರಂಪರ್ಯ ನಿರ್ವಹಣಾ ಹಕ್ಕು ಕೇಳಲು ಸಾಧ್ಯವಿಲ್ಲ- ಹೈಕೋರ್ಟ್
ಇಂದೋರ್: ಅರ್ಚಕರು ಕೇವಲ ದೇವರ ಸೇವಕರಷ್ಟೆ. ದೇವಾಲಯದ ಆಸ್ತಿ ಮೇಲೆ ಹಕ್ಕು, ವಂಶಪಾರಂಪರ್ಯ ನಿರ್ವಹಣಾ ಹಕ್ಕನ್ನು ಕೇಳುವಂತಿಲ್ಲ ಎಂದು ಹೈಕೋರ್ಟ್ ಮಧ್ಯ ಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ರಾಜ್ಯವು ಸಲ್ಲಿಸಿದ ದ್ವಿತೀಯ ಅಪೀಲನ್ನು ಅನುಮತಿಸಿದ ಹೈಕೋರ್ಟ್ ನ್ಯಾಯಮೂರ್ತಿ ಜಿ. ಎಸ್. ಅಹ್ಲುವಾಲಿಯಾ ಅವರಿದ್ದ ನ್ಯಾಯಪೀಠವು, ಮಂದಿರ ಶ್ರೀ ಗಣೇಶಜಿ ಸಂಬಂಧಿತ ಕೃಷಿ ಭೂಮಿಗಳ ಮೇಲೆ ಮೊಕದ್ದಮೆದಾರರ ವಂಶಪಾರಂಪರ್ಯ ನಿರ್ವಹಣಾ ಹಕ್ಕನ್ನು ಒಪ್ಪಿಕೊಂಡಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸಿ ತೀರ್ಪು ನೀಡಿತು.
ಮಧ್ಯ ಪ್ರದೇಶ ಹೈಕೋರ್ಟ್ (ಗ್ವಾಲಿಯರ್ ಪೀಠ) ಪೂಜಾರಿ/ಅರ್ಚಕರು ಅಥವಾ ನಿರ್ವಾಹಕರು ದೇವಾಲಯದ ಆಸ್ತಿಗಳ ಮೇಲೆ ಮಾಲೀಕತ್ವ ಅಥವಾ ವಂಶಪಾರಂಪರ್ಯ ನಿರ್ವಹಣಾ ಹಕ್ಕು ಹೇಳಿಕೊಳ್ಳಲು ಸಾಧ್ಯವಿಲ್ಲ. ದೇವತೆ ಒಂದು ನ್ಯಾಯಿಕ ವ್ಯಕ್ತಿ. ದೇವಸ್ಥಾನದ ಅರ್ಚಕರು ಕೇವಲ ದೇವರ ಸೇವಕರು. ದೇವಾಲಯದ ಆಸ್ತಿಗಳ ಮೇಲೆ ಮಾಲೀಕತ್ವವಾಗಲೀ ವಂಶಪಾರಂಪರ್ಯ ನಿರ್ವಹಣಾ ಹಕ್ಕನ್ನು ಕೇಳಿಕೊಳ್ಳಲು ಸಾಧ್ಯವಿಲ್ಲ. ಮುಜರಾಯಿ ಇಲಾಖೆಯ ಆಸ್ತಿಯಾಗಿ ದಾಖಲಾಗಿರುವ ದೇವಾಲಯದ ಭೂಮಿಗೆ ಕಲೆಕ್ಟರ್ ನಿರ್ವಾಹಕರಾಗಿ ಕಾರ್ಯನಿರ್ವಹಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಆಸ್ತಿ ದೇವತೆಗೆ ಸೇರಿದ್ದು, ಪೂಜಾರಿಗೆ ಸೇರಿಲ್ಲ. ದೇವಾಲಯ ದೇವತೆಗೆ ಸೇರಿದ್ದು, ನಿರ್ವಾಹಕ ಅಥವಾ ಪೂಜಾರಿಗೆ ಅಲ್ಲ, ಏಕೆಂದರೆ ಅವರು ದೇವರ ಸೇವಕರು ಮಾತ್ರ ಎಂದು ಪೀಠ ಗಮನಿಸಿತು.
ದೇವಾಲಯ ಮತ್ತು ಅದರ ಆಸ್ತಿಗಳು ಮುಜರಾಯಿ ಇಲಾಖೆಯ ಭಾಗವಾಗಿ ರಾಜ್ಯ ಸರ್ಕಾರದಲ್ಲಿ ವಹಿಸಲ್ಪಟ್ಟಿವೆ ಎಂದು ಗಮನಿಸಿ, ಕಲೆಕ್ಟರ್ ರಿಗೆ ನಿರ್ವಾಹಕರಾಗಿ ಕಾರ್ಯನಿರ್ವಹಿಸುವ ಅಧಿಕಾರವಿದ್ದು, ಅವರು ಪೂಜಾರಿಯನ್ನು (ವಂಶಪಾರಂಪರ್ಯ ಆಧಾರದ ಮೇಲೆ ಅಲ್ಲ) ನೇಮಿಸಬಹುದು ಎಂದು ತಿಳಿಸಿದೆ.
ಮೊಕದ್ದಮೆದಾರನ ಪೂರ್ವಜರು ಪೂಜಾರಿ ಅಥವಾ ನಿರ್ವಾಹಕರಾಗಿ ನೇಮಕಗೊಂಡಿದ್ದರೂ ಸಹ, ದೇವಾಲಯದ ಆಸ್ತಿಯನ್ನು ತಮ್ಮ ಖಾಸಗಿ ಆಸ್ತಿಯೆಂದು ಮೊಕದ್ದಮೆದಾರ ಹೇಳಿಕೊಳ್ಳಲು ಸಾಧ್ಯವಿಲ್ಲ. ಪೂಜಾರಿ/ನಿರ್ವಾಹಕರು ದೇವತೆಗೆ ಸೇರಿದ ಆಸ್ತಿಯ ಮಾಲೀಕರಲ್ಲ; ಅವರು ದೇವರ ಸೇವಕರಾಗಿ ದೇವಾಲಯದ ಆಸ್ತಿಯನ್ನು ದೇವರ ಹಿತಕ್ಕಾಗಿ ಸಂರಕ್ಷಿಸಬೇಕಾಗಿದೆ. ಬಾಲಚಂದ್ರ ರಾವ್ ದೇವಾಲಯ ಸುತ್ತಲಿನ ಭೂಮಿಯಿಂದ ಎಷ್ಟು ಆದಾಯ ಬಂದಿತು ಮತ್ತು ಅದರಲ್ಲಿ ಎಷ್ಟು ಹಣವನ್ನು ದೇವಾಲಯದ ನವೀಕರಣ, ನಿರ್ವಹಣೆ ಹಾಗೂ ಪ್ರಸಾದಕ್ಕೆ ಬಳಸಲಾಗಿದೆ ಎಂಬುದನ್ನು ತೋರಿಸಲು ಒಂದು ದಾಖಲೆ ಕೂಡ ಸಲ್ಲಿಸಿಲ್ಲ. ಇದರಿಂದ ಬಾಲಚಂದ್ರ ರಾವ್ ದೇವಾಲಯದ ಆದಾಯವನ್ನು ತನ್ನ ವೈಯಕ್ತಿಕ ಬಳಕೆಗೆ ದುರುಪಯೋಗಪಡಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು.
ದಾವೆಯ ಪ್ಯಾರಾ 4ರಲ್ಲಿ ದೇವಾಲಯವು ಬಾಲಚಂದ್ರ ರಾವ್ ಹಾಗೂ ಅವರ ಪೂರ್ವಜರ ಖಾಸಗಿ ಆಸ್ತಿಯಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಬಾಲಚಂದ್ರ ರಾವ್ ಅವರ ಹಿತಾಸಕ್ತಿ ದೇವರ ಹಿತಾಸಕ್ತಿಗೆ ವಿರುದ್ಧವಾಗಿದ್ದು, ವಿಚಾರಣಾ ನ್ಯಾಯಾಲಯಗಳು ಅವರಿಗೆ ಅಥವಾ ಅವರ ಉತ್ತರಾಧಿಕಾರಿಗಳಿಗೆ ದೇವಾಲಯದ ವ್ಯವಹಾರಗಳನ್ನು ನಿರ್ವಹಿಸಲು ಹಾಗೂ ಪೂಜೆ ಸಲ್ಲಿಸಲು ಅವಕಾಶ ನೀಡಬಾರದಿತ್ತು” ಎಂದು ನ್ಯಾಯಪೀಠ ತಿಳಿಸಿತು.
ಏನಿದು ಪ್ರಕರಣ
ಭಾಲಚಂದ್ರ ರಾವ್ ಎಂಬುವವರು ತಮ್ಮನ್ನು ದೇವಾಲಯದ ನಿರ್ವಾಹಕ ಮತ್ತು ಪೂಜಾರಿ ಎಂದು ಹೇಳಿಕೊಂಡು, ಶಡೋರಾ, ಪಿಪ್ರೌಲ್ ಮತ್ತು ನಾಗೌಖೇಡಿ ಗ್ರಾಮಗಳಲ್ಲಿ ಇರುವ ಕೃಷಿ ಭೂಮಿಗಳ ಮೇಲೆ ಹಕ್ಕು ಘೋಷಣೆ ಮತ್ತು ಶಾಶ್ವತ ತಡೆಯಾಜ್ಞೆ ಕೋರಿ ದಾವೆ ಹೂಡಿದ್ದರು.
ಸುಮಾರು 200 ವರ್ಷಗಳ ಹಿಂದೆ ಪೇಶ್ವಿ ನಾರೋ ಚಿಮ್ನಾಜಿ ಸುಬೇದಾರ್ ನಿರ್ಮಿಸಿದ ದೇವಾಲಯವನ್ನು ತನ್ನ ಪೂರ್ವಜರಿಗೆ ದಾನವಾಗಿ ನೀಡಲಾಗಿದ್ದು, ತಾವು ಪೀಳಿಗೆಯಿಂದ ನಿರ್ವಹಿಸುತ್ತಿದ್ದೇವೆ ಎಂದು ಭಾಲಚಂದ್ರ ರಾವ್ ಅವರು ವಾದಿಸಿದರು. ಆದರೆ ರಾಜ್ಯವು, ಆ ಭೂಮಿ “ಮೌಫಿ ಔಕಾಫ್ ಇಲಾಖೆ” ಆಸ್ತಿಯಾಗಿ ದಾಖಲಾಗಿದ್ದು, ಪೂಜಾರಿ ಕೇವಲ ನಿರ್ವಾಹಕರಾಗಿದ್ದು ಮಾಲೀಕತ್ವ ಹಕ್ಕಿಲ್ಲ ಎಂದು ವಾದಿಸಿತು.
ಪ್ರಮುಖ ಕಾನೂನು ಪ್ರಶ್ನೆಗಳ ಆಧಾರದ ಮೇಲೆ ಅಪೀಲನ್ನು ಸ್ವೀಕರಿಸಿದ ಹೈಕೋರ್ಟ್ ನ್ಯಾಯಪೀಠವು, ಪೂಜಾರಿಗೆ ವಂಶಪಾರಂಪರ್ಯ ಆಧಾರದ ನಿರ್ವಹಣಾ ಹಕ್ಕು ಇದೆ ಎಂದು ಕೆಳಗಿನ ನ್ಯಾಯಾಲಯಗಳು ಪರಿಗಣಿಸಿರುವುದು ತಪ್ಪೇ ಹಾಗೂ ದೇವಾಲಯದ ಆಸ್ತಿ ದೇವತೆಗೆ ಸೇರಿದೆ ಎಂಬುದನ್ನು ಗಮನಿಸದಿರುವುದೇ ಎಂಬುದನ್ನು ಪರಿಶೀಲಿಸಿತು.
ದೇವಾಲಯವನ್ನು ಮೊಕದ್ದಮೆದಾರರ ಪೂರ್ವಜರು ನಿರ್ಮಿಸಿದ್ದಾರೆ ಅಥವಾ ಅದು ಖಾಸಗಿ ದೇವಾಲಯ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲವೆಂದೂ ಗಮನಿಸಿದ ನ್ಯಾಯಪೀಠವು, ಅರ್ಚಕರು ದೇಗುಲದ ಆಸ್ತಿ ಮೇಲೆ ಹಕ್ಕು, ವಂಶಪಾರಂಪರ್ಯ ನಿರ್ವಹಣಾ ಹಕ್ಕು ಕೇಳಲು ಸಾಧ್ಯವಾಗದು ಎಂದು ತೀರ್ಪು ಪ್ರಕಟಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
