ಸಾರ್ವಜನಿಕ ಸೇವಕರ ಕೃತ್ಯದ ವಿರುದ್ದ ಕ್ರಮ ಕೈಗೊಳ್ಳಲು ಪೂರ್ವಾನುಮತಿ ಕಡ್ಡಾಯ – ಸುಪ್ರೀಂಕೋರ್ಟ್

ನವದೆಹಲಿ: ಸಾರ್ವಜನಿಕ ಸೇವಕರು ಕರ್ತವ್ಯ ನಿರ್ವಹಣೆಯ ಅವಧಿಯಲ್ಲಿ ಎಸಗಿದ ಕೃತ್ಯಗಳ ವಿಚಾರವಾಗಿ ಕಾನೂನಿನ ಅಡಿ ಕ್ರಮ ಜರುಗಿಸಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿದ್ದರೆ ಮಾತ್ರ ಅಂತಹ ಪ್ರಕರಣಗಳನ್ನು ನ್ಯಾಯಾಲಯಗಳು ಪರಿಗಣನೆಗೆ ತೆಗೆದುಕೊಳ್ಳಬಹುದು. ಇಲ್ಲದಿದ್ದರೆ ಅಂತಹ ಪ್ರಕರಣಗಳನ್ನು ನ್ಯಾಯಾಲಯಗಳು ಪರಿಗಣನೆಗೆ ತೆಗೆದುಕೊಳ್ಳಲಾಗದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಎಸ್.ಸಿ. ಶರ್ಮಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ. ಪರಿಭಾವನೆಯ ಅನುಮತಿ ಎನ್ನುವ ಪರಿಕಲ್ಪನೆ ಈಗಿರುವ ಕಾನೂನಿನಲ್ಲಿ ಇನ್ನೂ ಸೇರ್ಪಡೆಯಾಗಿಲ್ಲ ಎಂಬುದನ್ನು ನ್ಯಾಯಪೀಠ ಸ್ಪಷ್ಟಪಡಿಸಿದೆ. ಸಕ್ಷಮ ಪ್ರಾಧಿಕಾರ ಅನುಮತಿ ನೀಡಲು ವಿಳಂಬ ಮಾಡಿದಲ್ಲಿ, ಪರಿಭಾವಿತ ಅನುಮತಿಯ ಮೊರೆ ಹೋಗಬಹುದು ಎಂಬ ವಾದವನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಎಸ್.ಸಿ. ಶರ್ಮ ಅವರು ಇರುವ ವಿಭಾಗೀಯ ಪೀಠವು ತಿರಸ್ಕರಿಸಿದೆ.
ಈ ಹಿಂದೆ ಸುಪ್ರೀಂ ಕೋರ್ಟ್ “ವಿನೀತ್ ನಾರಾಯಣ್ ಗಿs ಕೇಂದ್ರ ಸರ್ಕಾರ” ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠವು, ಈ ಪ್ರಕರಣದಲ್ಲಿ ಸಿಆರ್ಪಿಸಿಯ ಸೆಕ್ಷನ್ 197ರ ಬಗ್ಗೆ ಹೇಳಿರಲಿಲ್ಲ. ಅದು ಸಿಬಿಐ ಹಾಗೂ ಕೇಂದ್ರ ವಿಚಕ್ಷಣಾ ಆಯೋಗಕ್ಕೆ ಇರುವ ತನಿಖಾ ಅಧಿಕಾರ ಮತ್ತು ಪ್ರಕ್ರಿಯೆ ಬಗ್ಗೆ ಹೇಳಲಾಗಿದೆ ಎಂದು ನ್ಯಾಯಪೀಠ ಹೇಳಿದೆ.
“ವಿನೀತ್ ನಾರಾಯಣ್ Vs ಕೇಂದ್ರ ಸರ್ಕಾರ” ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಆಧರಿಸಿ ಉತ್ತರ ಪ್ರದೇಶ ಸರ್ಕಾರವು ಕಾನೂನಿನ ಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರವು 90 ದಿನಗಳ ಕಾಲಮಿತಿಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ವಾದಿಸಿತ್ತು. ಸಕ್ಷಮ ಪ್ರಾಧಿಕಾರವು ಈ ಕಾಲಮಿತಿಯಲ್ಲಿ ತೀರ್ಮಾನ ಕೈಗೊಳ್ಳದೇ ಇದ್ದ ಕಾರಣದಿಂದ ಪರಿಭಾವಿತ ಅನುಮತಿಯ ಆಧಾರದಲ್ಲಿ ಕಾನೂನು ಕ್ರಮಕ್ಕೆ ಮುಂದಾಗಿದ್ದು ಸರಿ ಎಂದು ಅದು ವಾದಿಸಿತ್ತು.
‘ಕಾನೂನಿನ ಕ್ರಮ ಜರುಗಿಸಲು ಅನುಮತಿ ನೀಡುವ ವಿಚಾರದಲ್ಲಿ ಕಾಲಮಿತಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅದರಲ್ಲಿ ಹೇಳಲಾಗಿದೆ ಎಂಬುದು ನಿಜ. ಆದರೆ ಕಾಲಮಿತಿಯಲ್ಲಿ ಅನುಮತಿ ನೀಡದೆ ಇದ್ದಾಗ ಅದು ಪರಿಭಾವಿತ ಅನುಮತಿಯಾಗುತ್ತದೆ ಎಂದು ಹೇಳುವ ಮಾತುಗಳು ಇಲ್ಲ’ ಎಂದು ಪೀಠವು ತಿಳಿಸಿದೆ.
ದೂರುದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು “ಸುಬ್ರಹ್ಮಣ್ಯನ್ ಸ್ವಾಮಿ ಗಿs ಮನಮೋಹನ್ ಸಿಂಗ್” ಪ್ರಕರಣ ಉಲ್ಲೇಖಿಸಿ ಸಕ್ಷಮ ಪ್ರಾಧಿಕಾರವು ಯಾವುದೇ ವಿಸೃತ ಅವಧಿಗೆ ಮೊದಲೇ ನಿರ್ಧಾರ ತೆಗೆದುಕೊಳ್ಳದೇ ಇದ್ದಲ್ಲಿ ಕಾನೂನಿನ ಕ್ರಮ ಕೈಗೊಳ್ಳುವ ಪ್ರಸ್ತಾವಕ್ಕೆ ಅನುಮತಿ ನೀಡಲಾಗಿದೆ ಎಂದು ಪರಿಭಾವಿಸಲಾಗುತ್ತದೆ ಎಂದು ವಾದ ಮಂಡಿಸಿದ್ದರು
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ