05/03/2026

Law Guide Kannada

Online Guide

ಮದುವೆ ಭರವಸೆ, ದೈಹಿಕ ಸಂಪರ್ಕ ನಂತರ ವಂಚನೆ: ಆರೋಪಿಗಳ ಬಂಧನ ಕಡ್ಡಾಯವಲ್ಲ- ಹೈಕೋರ್ಟ್

ಬೆಂಗಳೂರು: ಮದುವೆಯ ಸುಳ್ಳು ಭರವಸೆ ಲೈಂಗಿಕ ಸಂಬಂಧ ಬೆಳೆಸಿದ ಬಳಿಕ ವಂಚಿಸಿದ ಪ್ರಕರಣ ಎದುರಿಸುತ್ತಿರುವ ಆರೋಪಿಗಳನ್ನು ಬಂಧಿಸುವುದು ಕಡ್ಡಾಯವಿಲ್ಲದಿದ್ದರೂ ಪೊಲೀಸರು ಮಾತ್ರ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತಿರುವ ಪ್ರಕರಣಗಳ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಅಲ್ಲದೆ ಇಂತಹ ಪ್ರಕರಣಗಳಲ್ಲಿ ಆರೋಪಿಗಳ ಬಂಧನ ಕಡ್ಡಾಯವಲ್ಲ. ಇಂತಹ ಬೆಳವಣಿಗೆ ನಿಲ್ಲಲು ಅಗತ್ಯ ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ.

ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ ನಂತರ ಮದುವೆಯಾಗದೆ ವಂಚಿಸಿದ ಆರೋಪ ಸಂಬಂಧ ಅತ್ಯಾಚಾರ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆಯಡಿ ತನ್ನ ವಿರುದ್ಧ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್ ಠಾಣಾ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ಹೊಕ್ಕಳ್ಳಿ ಗ್ರಾಮದ ನಿವಾಸಿ ಎಚ್.ಜಿ.ಗಂಗ (29) ಎಂಬಾತ ಹೈಕೋರ್ಟ್ ಮೆಟ್ಟಿಲೇರಿದ್ದ.

ಅರ್ಜಿಯು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಸಂಭೋಗ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಇಂತಹ ಪ್ರಕರಣದಲ್ಲಿ ಆರೋಪಿಗಳನ್ನು ಪೊಲೀಸರು ಏಕೆ ಬಂಧಿಸುತ್ತಿದ್ದಾರೆ? ಎಂಬುದು ಅರ್ಥವಾಗುತ್ತಿಲ್ಲ. ಆರೋಪಿಯನ್ನು ಬಂಧಿಸುವುದು ಕಡ್ಡಾಯವೇನಿಲ್ಲ. ಬಂಧನ ಮಾಡಬಾರದು ಎಂದು ಕೋರ್ಟ್ ಹೇಳುತ್ತಲೇ ಇದೆ. ಪೊಲೀಸರು ಮಾತ್ರ ಬಂಧನ ಮಾಡುತ್ತಲೇ ಇದ್ದಾರೆ ನ್ಯಾಯಪೀಠವು ಕಟು ಟೀಕೆ ವ್ಯಕ್ತಪಡಿಸಿದರು.

ಅರ್ಜಿದಾರರ ಪರ ವಾದಿಸಿದ ವಕೀಲರು, ಪ್ರಕರಣ ಸಂಬಂಧ ಅರ್ಜಿದಾರರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿದಾರರನ್ನು ಪೊಲೀಸರು ಬಂಧಿಸಿದ್ದಾರೆ. ಅಧೀನ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ದೂರು ದಾಖಲಿಸಲು ದೂರುದಾರೆ 1 ವರ್ಷ 3 ತಿಂಗಳು ವಿಳಂಬ ಮಾಡಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.