ಕೌಟುಂಬಿಕ ದೌರ್ಜನ್ಯ ತಡೆಗೆ ರಕ್ಷಣಾಧಿಕಾರಿಗಳು: 6 ವಾರಗಳಲ್ಲಿ ನೇಮಕಕ್ಕೆ ‘ಸುಪ್ರೀಂ ಕೋರ್ಟ್ ನಿರ್ದೇಶನ
ನವದೆಹಲಿ: ದೇಶಾದ್ಯಂತ ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ನಿಯಂತ್ರಣದ ಕುರಿತು ಕೈಗೊಂಡ ಕ್ರಮಗಳ ಕುರಿತು 6 ವಾರಗಳಲ್ಲಿ ವರದಿ ನೀಡುವಂತೆ ಸೂಚಿಸಿರುವ ಸುಪ್ರೀಂಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ 7 ಮಾರ್ಗಸೂಚಿಗಳನ್ನು ಹೊರಡಿಸಿದೆ.
ದೇಶಾದ್ಯಂತ ಕೌಟುಂಬಿಕ ಹಿಂಸಾಚಾರಕ್ಕೊಳಗಾದ ಸಂತ್ರಸ್ತರ ಸಹಾಯ ಮಾಡಲು ಮುಂದಾಗಿರುವ ಸುಪ್ರೀಂಕೋರ್ಟ್ ಈ ದಿಸೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಏಳು ನಿರ್ದೇಶನಗಳನ್ನು ಹೊರಡಿಸಿದೆ. ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಹಾಗೂ ಸತೀಶ್ ಚಂದ್ರ ನೇತೃತ್ವದ ನ್ಯಾಯಪೀಠವು ಮೇ 20ರಂದು ಕೌಟುಂಬಿಕ ಹಿಂಸಾಚಾರಕ್ಕೊಳಗಾದವರಿಗೆ ಸಹಾಯ ಮಾಡಲು ರಕ್ಷಣಾ ಅಧಿಕಾರಿಗಳನ್ನು ನೇಮಿಸುವಂತೆ ಸೂಚಿಸಿತ್ತು. ಆ ಆದೇಶದ ಪ್ರತಿಯ ವಿವರಗಳನ್ನು ಸುಪ್ರೀಂಕೋರ್ಟ್ ತನ್ನ ವೆಬ್ಸೈಟ್ ನಲ್ಲಿ ಪ್ರಕಟಿಸಿದೆ.
ಕೌಟುಂಬಿಕ ಹಿಂಸಾಚಾರ ಕಾಯ್ದೆಯ ನಿಬಂಧನೆಗಳನ್ನು ಜಾರಿ ಖಾತ್ರಿ ಮಾಡುವ ಉದ್ದೇಶದಿಂದ ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ನಿರ್ದೇಶನಗಳನ್ನು ಹೊರಡಿಸಲಾಗಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಈ ಕಾಯ್ದೆ ಜಾರಿಯಲ್ಲಿದ್ದರೂ, ಭಾರತದಾದ್ಯಂತ ಅದರ ಅನುಷ್ಠಾನವು ಸರಿಯಾದ ರೀತಿಯಲ್ಲಿ ಜಾರಿಯಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಗಮನಿಸಿದ ನಂತರ ಇಂತಹ ಕ್ರಮ ಕೈಗೊಳ್ಳಲಾಗಿದೆ.
ಕೌಟುಂಬಿಕ ದೌರ್ಜನ್ಯ ಪ್ರಕರಣಗಳನ್ನು ತಡೆಯಲು ರೂಪಿಸಲಾಗಿರುವ ನಿಯಮಗಳನ್ನು ಎಷ್ಟರ ಮಟ್ಟಿಗೆ ಜಾರಿಗೆ ತರಲಾಗಿದೆ ಎಂಬ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 6 ವಾರದೊಳಗೆ ವರದಿ ನೀಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಸುಪ್ರೀಂಕೋರ್ಟ್ ಕೊಟ್ಟ 7 ಮಾರ್ಗಸೂಚಿಗಳು ಹೀಗಿವೆ
1. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ರಕ್ಷಣಾ ಅಧಿಕಾರಿಗಳೆಂದು ಗುರುತಿಸಬೇಕು.
2. ಇಂದಿನಿಂದ ಆರು ವಾರಗಳ ಅವಧಿಯಲ್ಲಿ ಕೌಟುಂಬಿಕ ಹಿಂಸೆಗೊಳಗಾದವರಿಗೆ ರಕ್ಷಣಾ ಅಧಿಕಾರಿಗಳನ್ನು ನೇಮಿಸದ ಸ್ಥಳಗಳಲ್ಲಿ ಅಂತಹ ಪ್ರಕ್ರಿಯೆಯನ್ನು ಆಯಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕೈಗೊಳ್ಳಬೇಕು.
3. ಕೌಟುಂಬಿಕ ಹಿಂಸಾಚಾರ ಕಾಯ್ದೆಯ ಸೆಕ್ಷನ್ 11ರ ನಿಬಂಧನೆಗಳನ್ನು ವಿಶೇಷವಾಗಿ ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯಗಳು ಕ್ರಮ ಕೈಗೊಳ್ಳಬೇಕು.
4. ಕಾಯ್ದೆಯ 11ರ ನಿಬಂಧನೆಗಳು ಸರ್ಕಾರದ ಮೇಲೂ ಕರ್ತವ್ಯ ಹೇರಿರುವುದರಿಂದ ಈ ದಿಸೆಯಲ್ಲಿ ಸರ್ಕಾರಗಳು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಬೇಕು
5.ಕಾಯ್ದೆಯ ನಿಬಂಧನೆಗಳಡಿ ಸಂತ್ರಸ್ತ ಮಹಿಳೆ ಉಚಿತ ಕಾನೂನು ನೆರವು ಹಾಗೂ ಸಲಹೆ ಪಡೆಯಲು ಅರ್ಹರೆಂಬುದನ್ನು ಪಚುರಪಡಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದ ಕಾರ್ಯದರ್ಶಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
6. ಉಚಿತ ಕಾನೂನು ನೆರವು ಪಡೆಯಲು ಬಯಸುವ ಮಹಿಳೆಯರಿಗೆ ತ್ವರಿತಗತಿಯಲ್ಲಿ ಆ ಬಗ್ಗೆ ಕಾರ್ಯದರ್ಶಿಗಳು ಅಥವಾ ಕಾನೂನು ಸೇವಾ ಪ್ರಾಧಿಕಾರದ ಯಾರೇ ಅಧಿಕಾರಿ ಕ್ರಮ ಕೈಗೊಳ್ಳಬೇಕು.
7. ಸಂತ್ರಸ್ತ ವ್ಯಕ್ತಿ ಬಯಸಿದರೆ ಕಾಯ್ದೆಯ 10ನೇ ವಿಧಿಯಡಿ ನಮೂದಿಸಲ್ಪಟ್ಟ ಎನ್ಜಿಒಗಳು ಹಾಗೂ ಅಥವಾ ಸೊಸೈಟಿಗಳು ನಿಗದಿತ ನಮೂನೆಯಲ್ಲಿ ವರದಿ ದಾಖಲಿಸಿ ಹಿಂಸಾಚಾರ ನಡೆದ ವ್ಯಾಪ್ತಿಯ ಮ್ಯಾಜಿಸ್ಟ್ರೇಟರು ಹಾಗೂ ರಕ್ಷಣಾ ಅಧಿಕಾರಿಗಳಿಗೆ ಕಳುಹಿಸಬೇಕು. ಎನ್ಜಿಓಗಳು ನೋಂದ ವ್ಯಕ್ತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ಅದರ ಪ್ರತಿಯನ್ನು ರಕ್ಷಣಾ ಅಧಿಕಾರಿ ಅಥವಾ ಪೊಲೀಸ್ ಠಾಣೆಗೆ ಸಲ್ಲಿಸಬಹುದು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
