ಕೋರ್ಟ್ ಸಮನ್ಸ್ ಗೆ ಫೋರ್ಜರಿ ಸಹಿ ಮಾಡಿದ್ದ ಪೊಲೀಸ್ ಸಿಬ್ಬಂದಿಗೆ ಶಿಕ್ಷೆ ಪ್ರಕಟ

ಚಿಕ್ಕಮಗಳೂರು: ನ್ಯಾಯಾಲಯದ ಕಲಾಪಕ್ಕೆ ಹಾಜರಾಗುವಂತೆ ಕೋರ್ಟ್ ಹೊರಡಿಸಿದ್ದ ಸಮನ್ಸ್ ಗೆ ಫೊರ್ಜರಿಯಾಗಿ ಸಹಿ ಮಾಡಿ ವಾಪಸ್ ಕಳುಹಿಸಿದ್ದ ಪೊಲೀಸ್ ಸಿಬ್ಬಂದಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಚಿಕ್ಕಮಗಳೂರಿನಲ್ಲಿ ಈ ಘಟನೆ ನಡೆದಿದ್ದು, 2011ರಲ್ಲಿ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಟಿ.ಬಿ. ಶಶಿಧರ್ ಶಿಕ್ಷೆಗೊಳಗಾದ ಆರೋಪಿ ಪೊಲೀಸ್ ಸಿಬ್ಬಂದಿ.
2008ರಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಚಿಕ್ಕಮಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2011ರಲ್ಲಿ ತರೀಕೆರೆಯ ಸಿಪಿಐಗಳಾಗಿದ್ದ ಕಾಂತರೆಡ್ಡಿ, ಧರ್ಮರಾಜ್ ಮತ್ತು ಅಜ್ಜಂಪುರದ ವೈದ್ಯರೊಬ್ಬರಿಗೆ ಸಮನ್ಸ್ ಜಾರಿಗೊಳಿಸಿತ್ತು. ಆದರೆ ಆರೋಪಿ ಕಾನ್ಸ್ ಟೇಬಲ್ ಟಿಬಿ ಶಶಿಧರ್ ಈ ಸಮನ್ಸ್ ಅನ್ನು ಜಾರಿ ಮಾಡದೆ ತಾನೇ ಫೋರ್ಜರಿ ಸಹಿ ಮಾಡಿ ನ್ಯಾಯಾಲಯಕ್ಕೆ ಹಿಂತಿರುಗಿಸಿದ್ದರು.
ಬಳಿಕ ಕೋರ್ಟ್ ಈ ವ್ಯಕ್ತಿಗಳ ವಿರುದ್ಧ ವಾರೆಂಟ್ ಜಾರಿಗೊಳಿಸಿತ್ತು. ವಾರೆಂಟ್ ಜಾರಿಯಾದ ಹಿನ್ನೆಲೆಯಲ್ಲಿ ಈ ಮೂವರು ನ್ಯಾಯಾಲಯಕ್ಕೆ ಹಾಜರಾಗಿ ತಮಗೆ ಸಮನ್ಸ್ ತಲುಪಿಲ್ಲ ಎಂದು ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.
ಈ ನಡುವೆ ಸಮನ್ಸ್ ಜಾರಿಯ ಬಗ್ಗೆ ನ್ಯಾಯಾಲಯ ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದು, ಪೊಲೀಸ್ ಸಿಬ್ಬಂದಿ ಶಶಿಧರ್ ತಾನೇ ಆ ಸಮನ್ಸ್ಗೆ ಸಹಿ ಹಾಕಿ ಹಿಂತಿರುಗಿಸಿದ್ದ ವಿಚಾರ ಬೆಳಕಿಗೆ ಬಂದಿದೆ. ಆರೋಪಿ ಸಿಬ್ಬಂದಿ ವಿರುದ್ಧ ಸೆಕ್ಷನ್ 469ರ ಅಡಿ ಪ್ರಕರಣ ದಾಖಲಿಸಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.
ಸಂಪೂರ್ಣ ಸಾಕ್ಷಿ ವಿಚಾರಣೆ ನಡೆಸಿದ ತರೀಕೆರೆ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಎಂ.ಡಿ. ಪವಿತ್ರ ಅವರು ಆರೋಪಿ ಪೊಲೀಸ್ ಸಿಬ್ಬಂದಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ