ಕ್ರಯ ಜಮೀನು ಉಳಿಸಲಾಗದು: ಲೈಸನ್ಸ್ ಮಂಜೂರು ರದ್ದುಗೊಳಿಸಿ ಆದೇಶಿಸಿದ ಹೈಕೋರ್ಟ್

ಬೆಂಗಳೂರು: ವಸತಿ ಸಂಕೀರ್ಣ ನಿರ್ಮಾಣಕ್ಕಾಗಿ ಒಮ್ಮೆ ಇಡೀ ಪ್ರದೇಶದ ಮಾರಾಟದ ಕುರಿತು ಕ್ರಯಪತ್ರ ಕಾರ್ಯಗತಗೊಳಿಸಿದ ನಂತರ ಭೂ ಮಾಲೀಕರು ಅದರಲ್ಲಿ ಯಾವುದೇ ಭಾಗವನ್ನು ಉಳಿಸಿಕೊಳ್ಳಲಾಗುವುದಿಲ್ಲ ಎಂದು ಹೇಳಿದ ಹೈಕೋರ್ಟ್, ವಸತಿ ಸಂಕೀರ್ಣ ನಿರ್ಮಾಣಕ್ಕೆ ಬಿಬಿಎಂಪಿಯು ವ್ಯಕ್ತಿಯೊಬ್ಬರಿಗೆ ಲೈಸನ್ಸ್ ಮಂಜೂರು ಮಾಡಿದ್ದನ್ನು ರದ್ದುಗೊಳಿಸಿದೆ.
ಕೀರ್ತಿ ಹಾರ್ಮೋನಿ ಅಪಾರ್ಟ್ಮೆಂಟ್ ಓನರ್ಸ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ನ್ಯಾಯಪೀಠವು, ವಸತಿ ಸಂಕೀರ್ಣ ನಿರ್ಮಾಣಕ್ಕೆ ಬಿಬಿಎಂಪಿ ಹನುಮಂತರೆಡ್ಡಿ ಎಂಬುವರಿಗೆ ಮಂಜೂರು ಮಾಡಿದ್ದ ಲೈಸನ್ಸ್ ರದ್ದುಗೊಳಿಸಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯ ಪೀಠ, ವಸತಿ ಸಂಕೀರ್ಣ ದಲ್ಲಿ ಫ್ಲ್ಯಾಟ್ ಖರೀದಿಗೆ ಒಪ್ಪಿರುವ ವ್ಯಕ್ತಿಗಳ ಸಮ್ಮತಿ ಇಲ್ಲದೆ ಕರ್ನಾಟಕ ಓನರ್ಶಿಪ್ ಫ್ಲ್ಯಾಟ್ಸ್ (ನಿರ್ಮಾಣ, ಮಾರಾಟ, ನಿರ್ವಹಣೆ ಮತ್ತು ಹಸ್ತಾಂತರ ನಿಯಂತ್ರಣ) ಕಾಯ್ದೆಯ 1972ರಡಿ ನಿರ್ಮಾಣ ಕಾರ್ಯದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗದು. 2007ರ ಮಾ.29ರಂದು ಬಿಡಿಎ ಅನುಮೋದನೆ ನೀಡಿರುವ ಯೋಜನೆಯಂತೆ ರಸ್ತೆಗೆ ಹೊಂದಿಕೊಂಡ ಜಾಗದಲ್ಲಿ ಮಳೆನೀರು ಕೊಯ್ದು ಹಾಗೂ ಎಸ್ಟಿಪಿ ನಿರ್ಮಾಣ ಮಾಡಬೇಕು. ಆದರೆ, ಬಿಲ್ಡರ್ ಅದನ್ನು ಬದಲಾವಣೆ ಮಾಡಲಲಾಗುವುದಿಲ್ಲ ಎಂದು ತಿಳಿಸಿದೆ.
ಒಂದು ವೇಳೆ ಯೋಜನಾ ಪ್ರಾಧಿಕಾರ ಮಳೆನೀರು ಕೊಯ್ಲು ಮತ್ತು ಎಸ್ಟಿಪಿ ಜಾಗ ಬದಲಾವಣೆಗೆ ಒಪ್ಪಿಕೊಂಡರೂ ವಸತಿ ಸಂಕೀರ್ಣದಲ್ಲಿ ಫ್ಯಾಟ್ ಖರೀದಿ ಮಾಡಲು ಒಪ್ಪಿಕೊಂಡಿರುವವರ ಸಮ್ಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದಿರುವ ನ್ಯಾಯಪೀಠ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಾಲಯ, ಹಿಂದಿನ ಭೂ ಮಾಲೀಕರು ಒಟ್ಟು ಕ್ರಯಪತ್ರ ಮಾಡಿಕೊಂಡ ಜಾಗದಲ್ಲಿ 1104.40 ಚದರ ಅಡಿ ಜಾಗವನ್ನು ತಮ್ಮಲ್ಲೇ ಉಳಿಸಿಕೊಳ್ಳುವುದಾಗಿ ತಿಳಿಸಿದ್ದ ಮನವಿಯನ್ನು ಬಿಬಿಎಂಪಿ ಪುರಸ್ಕರಿಸಿ ನಕ್ಷೆ ಅನುಮೋದನೆ ನೀಡಬಾರದಿತ್ತು ಎಂದು ಅಭಿಪ್ರಾಯಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ