06/03/2026

Law Guide Kannada

Online Guide

ಮುರಿದು ಬಿದ್ದ ಸಂಬಂಧಕ್ಕೆ ಅತ್ಯಾಚಾರ ಅಪರಾಧದ ಲೇಪ: ಸುಪ್ರೀಂಕೋರ್ಟ್ ತೀವ್ರ ಕಳವಳ

ನವದೆಹಲಿ: ಮುರಿದುಬಿದ್ದ ಅಥವಾ ವಿಫಲವಾದ ಸಂಬಂಧಗಳಿಗೆ ಕೊನೆಗೊಂದು ದಿನ ಅತ್ಯಾಚಾರದಂತಹ ಅಪರಾಧದ ಬಣ್ಣ ಲೇಪಿಸುವ ಆತಂಕಕಾರಿ ಪ್ರವೃತ್ತಿ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.

ಅತ್ಯಾಚಾರ ಪ್ರಕರಣವೊಂದರ ಎಫ್ ಐಆರ್ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ. ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರಿದ್ದ ವಿಭಾಗೀಯ ನ್ಯಾಯಪೀಠವು, ಮುರಿದುಬಿದ್ದ ಸಂಬಂಧಕ್ಕೆ ಅಪರಾಧದ ಲೇಪ ನೀಡಿ ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯ ದುರುಪಯೋಗ ಮಾಡಲಾಗುತ್ತಿರುವುದು ಅತ್ಯಂತ ಕಳವಳಕಾರಿ ಮತ್ತು ಖಂಡನಾರ್ಹ ಆತಂಕ ವ್ಯಕ್ತಪಡಿಸಿದೆ.

2025ರ ಮಾರ್ಚ್ನಲ್ಲಿ ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡಿದ್ದು ಈ ವೇಳೆ ಅಸಮಾಧಾನ ವ್ಯಕ್ತಪಡಿಸಿದೆ.

ಮುರಿದುಬಿದ್ದ ಪ್ರತಿಯೊಂದು ಸಂಬಂಧವನ್ನು ಅತ್ಯಾಚಾರದ ಅಪರಾಧವಾಗಿ ಪರಿವರ್ತಿಸುವುದು ಸರಿಯಲ್ಲ. ಇದು ಇಂತಹ ಅಪರಾಧದ ಗಂಭೀರತೆಯನ್ನು ಲಘುವಾಗಿ ಕಾಣುವಂತೆ ಮಾಡುತ್ತದೆ. ಅಲ್ಲದೆ, ಆರೋಪಿಯ ಮೇಲೆ ಅಳಿಸಲಾಗದ ಕಳಂಕವನ್ನು ಉಂಟುಮಾಡುತ್ತದೆ’ ಎಂದು ನ್ಯಾಯಪೀಠ ತಮ್ಮ ಆದೇಶದಲ್ಲಿ ಉಲ್ಲೇಖಿಸಿದೆ.

ಅಲ್ಲದೆ ನಿಜವಾದ ಲೈಂಗಿಕ ದೌರ್ಜನ್ಯ, ಬಲವಂತ ನಡೆದಿರುವ ಅಥವಾ ಪರಸ್ಪರ ಸಮ್ಮತಿಯಿಲ್ಲದ ಪ್ರಕರಣಗಳಿಗೆ ಮಾತ್ರ ಅತ್ಯಾಚಾರದ ಅಪರಾಧವನ್ನು ಅನ್ವಯಿಸಬಹುದು ಎಂದು ನ್ಯಾಯಪೀಠ ತಿಳಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.