ಸುಳ್ಳು ಭರವಸೆ ನೀಡಿ ಅತ್ಯಾಚಾರ: ಮದುವೆಗೂ ಮುನ್ನ ಯಾರನ್ನೂ ಸುಲಭವಾಗಿ ನಂಬುವುದು ಸೂಕ್ತವಲ್ಲ- ಸುಪ್ರೀಂ ಕೋರ್ಟ್
ನವದೆಹಲಿ: ಮದುವೆಗೂ ಮುನ್ನ ದೈಹಿಕ ಸಂಬಂಧ ಬೆಳೆಸುವವರಿಗೆ ಸುಪ್ರೀಂಕೋರ್ಟ್ ಎಚ್ಚರಿಕೆಯ ಸಂದೇಶವೊಂದನ್ನ ನೀಡಿದೆ. ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಅತ್ಯಾಚಾರವೆಸಗಿದ ಆರೋಪದ ಪ್ರಕರಣವನ್ನ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ’ಯಾರನ್ನೂ ಸುಲಭವಾಗಿ ನಂಬಬೇಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಮದುವೆಯ ಸುಳ್ಳು ಭರವಸೆಯನ್ನು ನೀಡಿ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ವ್ಯಕ್ತಿಯೊಬ್ಬರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾ. ಬಿವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು, ಮದುವೆಗೆ ಮುನ್ನ ಹುಡುಗ ಮತ್ತು ಹುಡುಗಿ ಅಪರಿಚಿತರಂತೆ ಇದ್ದರೆ ಸೂಕ್ತ, ಯಾರು ಯಾರನ್ನೂ ಮದುವೆಗೆ ಮುನ್ನ ಸಂಪೂರ್ಣವಾಗಿ ನಂಬುವುದು ಸೂಕ್ತವಲ್ಲ. ಮದುವೆಗೂ ಮುನ್ನ ಸುಲಭವಾಗಿ ಯಾರನ್ನೂ ನಂಬಬೇಡಿ ಎಂದು ಸಲಹೆಯನ್ನು ನೀಡಿದೆ.
ಮದುವೆಯಾಗುವುದಾಗಿ ನಂಬಿಸಿದ್ದ ವ್ಯಕ್ತಿಯ ಜೊತೆ ಮಹಿಳೆ, ದುಬೈಗೆ ಜೊತೆಯಾಗಿ ತೆರಳಿದ್ದರು. ಈ ವೇಳೆ ಅಲ್ಲಿ ಆರೋಪಿ ಸ್ಥಾನದಲ್ಲಿ ಇರುವವನು ದೈಹಿಕ ಸಂಬಂಧ ಬೆಳೆಸಿದ್ದಾಗಿ, ಮಹಿಳೆ ಆರೋಪ ಮಾಡಿದ್ದರು. ನ್ಯಾಯಪೀಠದಲ್ಲಿ ಕುಳಿತಿರುವ ನಾವು, ಈಗಿನ ತಲೆಮಾರಿನವರು ಅಲ್ಲ ಎಂದು ನೀವು ಭಾವಿಸುವುದು ಬೇಡ ಎಂದು ದೂರುದಾರರಿಗೆ ಮತ್ತು ಆರೋಪಿಗೆ ನ್ಯಾಯಪೀಠ ಎಚ್ಚರಿಸಿತು.
ಮ್ಯಾಟ್ರಿಮೋನಿಯಲ್ ವೆಬ್’ಸೈಟ್ ಮೂಲಕ 2022ರಲ್ಲಿ ಇಬ್ಬರು ಪರಿಚಯವಾಗಿದ್ದವು, ನಂತರ ನಾನು ಭೇಟಿಯಾಗಿದ್ದೆ. ಆರೋಪಿಯು ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೆಹಲಿ ಮತ್ತು ದುಬೈನಲ್ಲಿ ಹಲವಾರು ಬಾರಿ ದೈಹಿಕ ಸಂಪರ್ಕವನ್ನು ಬೆಳೆಸಿಕೊಂಡಿದ್ದ. ಇದಲ್ಲದೇ, ಮಹಿಳೆಯ ಅನುಮತಿಯನ್ನು ಪಡೆಯದೇ, ಏಕಾಂತದ ವಿಡಿಯೋಗಳನ್ನು ಚಿತ್ರೀಕರಿಸಿದ್ದ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆಯನ್ನು ಹಾಕುತ್ತಿದ್ದ ಎಂದು ಮಹಿಳೆಯ ಆರೋಪಿಸಿದ್ದರು. ಅಲ್ಲದೆ 2024ರಲ್ಲಿ, ಪಂಜಾಬ್ ನಲ್ಲಿ ಆ ವ್ಯಕ್ತಿ ಇನ್ನೊಂದು ಮಹಿಳೆಗೂ ಇದೇ ರೀತಿ ಮಾಡಿದ್ದ ಎನ್ನುವುದು ಆರೋಪವಾಗಿದೆ.
ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ನ್ಯಾ. ಬಿವಿ ನಾಗರತ್ನ ಅವರು, ನ್ಯಾಯಪೀಠದಲ್ಲಿ ಕೂತಿರುವ ನಾವು ಹಿರಿಯರಾಗಿರಬಹುದು. ಆದರೆ, ಅರ್ಜಿಯ ವಿಚಾರಣೆಯ ವೇಳೆ, ಈಗಿನ ಕಾಲಘಟ್ಟಕ್ಕೆ ತಕ್ಕಂತೆ ನಾವೂ ಇರಬೇಕಾಗುತ್ತದೆ. ಸಂಬಂಧ ಎಷ್ಟೇ ಆಪ್ತವಾಗಿರಬಹುದು, ಮದುವೆಗೆ ಮುನ್ನ ದೈಹಿಕ ಸಂಬಂಧದಲ್ಲಿ ತೊಡಗಿಸಿಕೊಳ್ಳಲು ಹೇಗೆ ಒಬ್ಬರಿಗೊಬ್ಬರು ಒಪ್ಪಿಕೊಳ್ಳುತ್ತಾರೆ ಎನ್ನುವುದು ನಮಗೆ ಅರ್ಥವಾಗುತ್ತಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
” ಆರೋಪದಲ್ಲಿ ಯಾಕೋ ಅಷ್ಟಾಗಿ ಸತ್ಯ ಕಾಣುತ್ತಿಲ್ಲ, ಇಬ್ಬರು ಪರಸ್ಪರ ಒಪ್ಪಿಗೆಯಿಂದ ನಡೆದ ದೈಹಿಕ ಸಂಬಂಧದಂತೆ ಇದು ಕಾಣುತ್ತಿದೆ. ನಾವು ಹಳೆಯ ಮೈಂಡ್’ಸೆಟ್ ನವರಲ್ಲ. ಆದರೆ, ಮದುವೆಗೆ ಮುನ್ನ ಅಪರಿಚಿತರಂತೆ ಇದ್ದರೆ ಉತ್ತಮ. ವಿವಾಹಕ್ಕೆ ಮುನ್ನ ದೈಹಿಕ ಸಂಬಂಧದಲ್ಲಿ ತೊಡಗುವಾಗ ಎಚ್ಚರಿಕೆಯಿಂದ ಇರಬೇಕು. ನೀವು ತುಂಬಾ ಜಾಗರೂಕರಾಗಿರಬೇಕಿತ್ತು, ಯಾರನ್ನೂ ಸುಲಭವಾಗಿ ನಂಬಬಾರದು. ಪರಸ್ಪರ ಒಪ್ಪಿಗೆಯ ಸಂಬಂಧ ಮತ್ತು ಮದುವೆಯ ಸುಳ್ಳು ಭರವಸೆ ನಡುವೆ ಇರುವ ವ್ಯತ್ಯಾಸ ಬಹಳ ಸೂಕ್ಷ್ಮವಾದದ್ದು ಎಂದು ಸಲಹೆ ನೀಡಿದ ನ್ಯಾಯಪೀಠ, ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ (ಫೆ. 18) ಮುಂದೂಡಿಕೆ ಮಾಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
