20/05/2025

Law Guide Kannada

Online Guide

ಲಿವ್ ಇನ್ ರಿಲೇಷನ್ ಗೆ ಒಪ್ಪಂದ ನೋಂದಣಿ ಕಡ್ಡಾಯ : ಹೈಕೋರ್ಟ್

ಜೈಪುರ: ಲಿವ್ ಇನ್ ರಿಲೇಷನ್ ನಲ್ಲಿರುವವರು, ಸಹ ಜೀವನದ ಸಂಗಾತಿಗಳು ತಮ್ಮ ನಡುವಿನ ಸಂಬಂಧದ ಕುರಿತು ಒಪ್ಪಂದ ಮಾಡಬೇಕು. ಆ ದಾಖಲೆಯನ್ನು ಕಡ್ಡಾಯವಾಗಿ ನೋಂದಾಯಿಸಬೇಕು ಎಂದು ರಾಜಸ್ತಾನ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ರಾಜಸ್ಥಾನ ಹೈಕೋರ್ಟ್ನ ನ್ಯಾಯಮೂರ್ತಿ ಅನೂಪ್ ಕುಮಾರ್ ದಂಡು ಅವರಿದ್ದ ನ್ಯಾಯಪೀಠವು ಈ ವಿಶಿಷ್ಟ ಹಾಗೂ ಗಮನ ಸೆಳೆಯುವ ತೀರ್ಪನ್ನು ನೀಡಿದ್ದು, ಸಹಜೀವನ ಸಂಬಂಧದಲ್ಲಿ ಇರುವವರು ತಮ್ಮ ಸಂಬಂಧದ ಕುರಿತು ಒಪ್ಪಂದ ಮಾಡಿಕೊಂಡು ಅದನ್ನು ಕಡ್ಡಾಯ ನೋಂದಾಯಿಸುವಂತೆ ಆದೇಶ ನೀಡಿದೆ. ಸಹಜ ಜೀವನದಲ್ಲಿರುವ ಜೋಡಿ ತಮ್ಮ ಸಂಬಂಧದಿಂದ ಹುಟ್ಟುವ ಮಕ್ಕಳ ಪಾಲನೆಗೆ ಯಾವ ಯೋಜನೆ ರೂಪಿಸಿಕೊಂಡಿದ್ದೇವೆ ಎಂಬುದನ್ನು ಮೊದಲೇ ಸ್ಪಷ್ಟಪಡಿಸಬೇಕಾದ ವ್ಯವಸ್ಥೆ ಜಾರಿಗೆ ಬರಬೇಕು. ಸಹಜೀವನ ನಡೆಸುತ್ತಿರುವ ಜೋಡಿ ತಮ್ಮ ಸಂಬಂಧದಿಂದ ಹುಟ್ಟುವ ಮಕ್ಕಳ ಪಾಲನೆಗಾಗಿ ರೂಪಿಸಿಕೊಂಡಿರುವ ಯೋಜನೆ ನಮೂದಿಸಬೇಕಾದಂತ ವ್ಯವಸ್ಥೆ ಜಾರಿಗೆ ಬರಬೇಕು ಎಂದು ನ್ಯಾಯಪೀಠ ತಿಳಿಸಿದೆ.

ಸಹ ಜೀವನದ ಸಂಗಾತಿಗಳು ತಮ್ಮ ನಡುವಿನ ಸಂಬಂಧದ ಕುರಿತು ಒಪ್ಪಂದ ಮಾಡಬೇಕು. ಆ ದಾಖಲೆಯನ್ನು ಕಡ್ಡಾಯವಾಗಿ ನೋಂದಾಯಿಸಬೇಕು ಎಂದು ಸರಕಾರಿ ಅಧಿಕಾರಿಗಳಿಗೆ ಸೂಚಿಸಿ ಆದೇಶ ಮಾಡಿದೆ. ಈ ದಾಖಲೆಯಲ್ಲಿ, ಹಣ ಸಂಪಾದಿಸದೆ ಇರುವ ತನ್ನ ಸ್ತ್ರೀ ಸಂಗಾತಿಗೆ ಜೀವನಾಂಶವನ್ನು ಹೇಗೆ ಪಾವತಿಸಬೇಕು ಎಂಬುದರ ಕುರಿತಂತೆಯೂ ವಿವರಗಳಿರಬೇಕು ಎಂದು ನ್ಯಾಯಪೀಠ ತಾಕೀತು ಮಾಡಿದೆ.

ಲಿವ್ ಇನ್ ಸಂಬಂಧ ಕುರಿತಾದ ದಾಖಲೆಗಳನ್ನು ಸಕ್ಷಮ ಪ್ರಾಧಿಕಾರ ಅಥವಾ ನ್ಯಾಯಮಂಡಳಿಯಲ್ಲಿ ನೋಂದಾಯಿಸಬೇಕು ಎಂದು ಆಶಯ ವ್ಯಕ್ತಪಡಿಸಿರುವ ಕೋರ್ಟ್, ತನ್ನ ಆದೇಶದ ಪ್ರತಿಯನ್ನು ಕೇಂದ್ರ ಮತ್ತು ರಾಜ್ಯದ ಸರಕಾರದ ಹಿರಿಯ ಅಧಿಕಾರಿಗಳಿಗೆ ಕಳಿಸುವಂತೆ ಸೂಚನೆ ನೀಡಿದೆ., ಈ ಕುರಿತಂತೆ ಮಾಡಲಾದ ಆದೇಶ ಪಾಲನೆ ವರದಿಯನ್ನು ಸಲ್ಲಿಸುವಂತೆ ನ್ಯಾಯಪೀಠ ಸೂಚಿಸಿದೆ.

ಈ ದಾಂಪತ್ಯದ ಪರಿಕಲ್ಪನೆಯನ್ನು ಸಮಾಜ ಅನೈತಿಕ ಎಂದು ಪರಿಗಣಿಸಿದೆ. ಸಾರ್ವಜನಿಕರು ಬಹುತೇಕವಾಗಿ ಅದನ್ನು ಸ್ವೀಕರಿಸದೆ ಇದ್ದರೂ ಕಾನೂನಿಯ ದೃಷ್ಟಿಯಲ್ಲಿ ಅದು ಕಾನೂನುಬಾಹಿರ ಎಂದು ಪರಿಗಣಿಸಲಾಗದು. ಲಿವಿ ಇನ್ ಸಂಬಂಧ ಕಾನೂನು ಬಾಹಿರವಲ್ಲ, ಅದಕ್ಕೆ ಕಾನೂನು ಸಮ್ಮತಿ ಇದೆ ಎಂಬುದನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದ್ದರೂ, ಸಮಾಜದ ದೃಷ್ಟಿಯಲ್ಲಿ ಈ ಸಂಬಂಧ ಈಗಲೂ ಸ್ವೀಕಾರಾರ್ಹವಲ್ಲ. ಹಾಗಾಗಿ, ಸಹಜೀವನ ಸಂಬಂಧದ ವಿಚಾರವಾಗಿ ಎದ್ದಿರುವ ಕೆಲ ಕಾನೂನು ಪ್ರಶ್ನೆಗಳ ಸಂಬಂಧ ಪ್ರಕರಣವನ್ನು ವಿಸ್ತ್ರತ ಪೀಠಕ್ಕೆ ವರ್ಗಾಯಿಸುವುದು ಸೂಕ್ತ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.

ಸಹಜೀವನ ಸಂಬಂಧಗಳಿಂದ ಜನಿಸಿದ ಅಪ್ರಾಪ್ತ ಮಕ್ಕಳನ್ನು ಅವರ ಪೋಷಕರು ವಿಶೇಷವಾಗಿ ತಂದೆ ಪೋಷಿಸಬೇಕು ಎಂದು ನಿರೀಕ್ಷಿಸಲಾಗುತ್ತದೆ. ಏಕೆಂದರೆ ಇಂತಹ ಸಂಬಂಧಗಳಿಂದ ಮಹಿಳೆಯರು ಹೆಚ್ಚಾಗಿ ತೊಂದರೆಗೀಡಾಗುತ್ತಾರೆ ಎಂಬುದನ್ನು ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.