20/03/2026

Law Guide Kannada

Online Guide

ಕ್ರಿಮಿನಲ್ ಪ್ರಕರಣಗಳ ಸೊತ್ತು ಬಿಡುಗಡೆವಿಚಾರ: ಜಡ್ಜ್ ಗಳು ಪಾಲಿಸಬೇಕಾದ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಕ್ರಿಮಿನಲ್ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ಸೊತ್ತುಗಳನ್ನು ಬಿಡುಗಡೆ ಮಾಡುವ ವಿಚಾರದಲ್ಲಿ ಮ್ಯಾಜಿಸ್ಟ್ರೇಟ್ ಗಳು ಯಾವ ನಿಯಮಗಳನ್ನ ಪಾಲಿಸಬೇಕು ಎಂಬ ಬಗ್ಗೆ ಕರ್ನಾಟಕ ಹೈ ಕೋರ್ಟ್ ಗೈಡ್ ಲೈನ್ ಗಳನ್ನು( ಮಾರ್ಗಸೂಚಿ) ಪ್ರಕಟಿಸಿದೆ.

ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಮಾರ್ಗಸೂಚಿಗಳನ್ನ ಪ್ರಕಟಿಸಿದ್ದು, ಈ ಮಾರ್ಗಸೂಚಿಗಳು ಕ್ರಿಮಿನಲ್ ಪ್ರಕ್ರಿಯ ಸಂಹಿತೆ ನ ಸೆಕ್ಷನ್ 451 ಮತ್ತು 457 ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ನ ಸೆಕ್ಷನ್ 497 ಅಡಿಯಲ್ಲಿ ಜಪ್ತಿ ಮಾಡಲಾದ ಆಸ್ತಿಗಳ ಬಿಡುಗಡೆಗೆ ಸಂಬಂಧಿಸಿದಂತೆ ಅನ್ವಯವಾಗುತ್ತವೆ. ಈ ಪ್ರಕರಣದಲ್ಲಿ ಕ್ರಿಮಿನಲ್ ರಿವಿಷನ್ ಅರ್ಜಿಯನ್ನು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಸೆಕ್ಷನ್ 397 ಅಡಿಯಲ್ಲಿ ಸಲ್ಲಿಸಲಾಗಿತ್ತು.

ರಾಜ್ಯ ಸರ್ಕಾರವು ನ್ಯಾಯಾಲಯದ ಅಧಿಕಾರಕ್ಕೆ ಹೊಂದುವಂತೆ ಜಪ್ತಿ ಮಾಡಲಾದ ಎಲ್ಲಾ ಸೊತ್ತುಗಳ ವಿಲೇವಾರಿ ಕುರಿತು ಅಗತ್ಯವಾದ ನಿಯಮಗಳನ್ನು ರೂಪಿಸುವುದು ಅಗತ್ಯವಾಗಿದೆ. ಇದರಲ್ಲಿ ಎಲೆಕ್ಟ್ರಾನಿಕ್ ಸಾಧನಗಳು, ಡಿಜಿಟಲ್ ಸಾಧನಗಳು, ವೈದ್ಯಕೀಯ ಮಾದರಿಗಳು. ಆಹಾರ ಪದಾರ್ಥಗಳು, ಅತ್ಯಂತ ಸುಲಭವಾಗಿ ಬೆಂಕಿ ಹಿಡಿಯುವ ಮಿಶ್ರಿತ ಪೆಟ್ರೋಲಿಯಂ ಉತ್ಪನ್ನಗಳು, ಬೇಗ ಹಾಳಾಗುವ ವಸ್ತುಗಳು, ಚಿನ್ನ-ಬೆಳ್ಳಿ ಮುಂತಾದ ಅಮೂಲ್ಯ ಲೋಹಗಳು ಸೇರಿದಂತೆ ಎಲ್ಲಾ ವಸ್ತುಗಳು ಸೇರಿವೆ ಎಂದು ನ್ಯಾಯಪೀಠ ತಿಳಿಸಿದೆ.

ಹೈಕೋರ್ಟ್ ಪ್ರಕಟಿಸಿರುವ ಮಾರ್ಗಸೂಚಿಗಳು ಈ ಕೆಳಕಂಡಂತಿದೆ
ಜಪ್ತಿ ಮಾಡಿದ ಸ್ವತ್ತುಗಳ ವಿವರಗಳನ್ನು ಜಪ್ತಿ ಮಹಜರ್ ನಲ್ಲಿ ಸ್ಪಷ್ಟವಾಗಿ ದಾಖಲಿಸಬೇಕು. ಇದರಿಂದ ಕ್ರಿಮಿನಲ್ ವಿಚಾರಣೆಯ ಎಲ್ಲಾ ಹಂತಗಳಲ್ಲಿ ಆಸ್ತಿಯನ್ನು ಗುರುತಿಸಲು ಸಾಧ್ಯವಾಗಬೇಕು. ಮಹಜರ್ ನಲ್ಲಿ ಸ್ವತ್ತುಗಳ ಸೀರಿಯಲ್ ನಂಬರ್, ತಯಾರಕರ ಹೆಸರು, ಮಾದರಿ, ವಿಶಿಷ್ಟ ಗುರುತುಗಳು, ಚಿನ್ನ-ಬೆಳ್ಳಿಯ ವಸ್ತುಗಳ ಮೇಲೆ ಹಾಲ್ ಮಾರ್ಕ್ ಇದ್ದರೆ ಅದನ್ನು ದಾಖಲಿಸಬೇಕು.

ಜಪ್ತಿ ಮಾಡಲಾದ ಸ್ವತ್ತುಗಳ ಅಂದಾಜು ಮೌಲ್ಯವನ್ನು ಕೂಡ ದಾಖಲಿಸಬೇಕು. ಅಗತ್ಯವಿದ್ದರೆ ನೋಂದಾಯಿತ ಮೌಲ್ಯ ನಿರ್ಧಾರಕರಿಂದ ಮೌಲ್ಯ ಅಂದಾಜು ಪಡೆಯಬೇಕು.
ಟ್ರಯಲ್ ಮ್ಯಾಜಿಸ್ಟ್ರೇಟ್ ಮಹಜರ್ ವಿವರಗಳನ್ನು ಪರಿಶೀಲಿಸಿ, ಜಪ್ತಿ ಮಾಡಿದ ವಸ್ತುಗಳನ್ನು ಸ್ವತಃ ಪರಿಶೀಲಿಸಿ, ಅವು ಮಹಜರ್ ಮತ್ತು ಪಿ.ಎಫ್. ಮೆಮೂದಲ್ಲಿರುವ ವಿವರಗಳಿಗೆ ಹೊಂದಿಕೆಯಾಗುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ತನಿಖಾ ಸಂಸ್ಥೆ ವಿಶೇಷ ಕಾರಣಗಳನ್ನು ತೋರಿಸದ ಹೊರತು ಜಪ್ತಿ ಮಾಡಿದ ವಸ್ತುಗಳನ್ನು ತಮ್ಮ ವಶದಲೇ ಇರಿಸಿಕೊಳ್ಳಲು ಅವಕಾಶ ಕೊಡಬಾರದು.

ವಸ್ತುಗಳನ್ನು ತನಿಖಾ ಸಂಸ್ಥೆಯ ವಶದಲ್ಲಿಡಲು ಅನುಮತಿ ನೀಡಿದರೆ, ಮ್ಯಾಜಿಸ್ಟ್ರೇಟ್ ಕೇವಲ “permitted to retain” ಎಂದು ಯಾಂತ್ರಿಕವಾಗಿ ಗುರುತು ಹಾಕದೆ, ಸ್ಪಷ್ಟ ಕಾರಣಗಳೊಂದಿಗೆ ಆದೇಶವನ್ನು ದಾಖಲಿಸಬೇಕು.

ಜಪ್ತಿ ಮಾಡಿದ ವಸ್ತುಗಳನ್ನು ಸಂರಕ್ಷಿಸಲು ಪೊಲೀಸ್ ಇಲಾಖೆಗೆ ಸೂಕ್ತ ಮೂಲಸೌಕರ್ಯವಿದೆಯೇ ಎಂಬುದನ್ನು ಮ್ಯಾಜಿಸ್ಟ್ರೇಟ್ ಖಚಿತಪಡಿಸಿಕೊಳ್ಳಬೇಕು. ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಿದರೆ ಅವುಗಳನ್ನು ಸರಿಯಾಗಿ ಮುಚ್ಚಿದ ಮತ್ತು ಸೀಲ್ ಮಾಡಿದ ಸ್ಥಿತಿಯಲ್ಲಿ ಕಳುಹಿಸಬೇಕು.

ತನಿಖೆಯ ನಂತರ ವಸ್ತುಗಳನ್ನು ಕಾಯ್ದಿರಿಸುವ ಅಗತ್ಯವಿಲ್ಲದಿದ್ದರೆ ನ್ಯಾಯಾಲಯವು ತಾತ್ಕಾಲಿಕ ವಿಲೇವಾರಿ ಬಗ್ಗೆ ಆದೇಶ ನೀಡಬಹುದು. ನಾರ್ಕೋಟಿಕ್ ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಪ್ರಕರಣಗಳಲ್ಲಿ, ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಪಾಲಿಸಬೇಕು. ವಾಹನ ಜಪ್ತಿ ಮಾಡಿದ ಪ್ರಕರಣಗಳಲ್ಲಿ ಕರ್ನಾಟಕ ಮೋಟಾರು ವಾಹನ ನಿಯಮಗಳು 2018 ರ ತಿದ್ದುಪಡಿ ನಿಯಮ 232-G ಪ್ರಕಾರ ಕ್ರಮ ಕೈಗೊಳ್ಳಬೇಕು.

ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಸಾಧನಗಳನ್ನು ವಾತಾವರಣದ ತೇವಾಂಶದಿಂದ ಹಾನಿಯಾಗದಂತೆ ಸಂರಕ್ಷಿಸಬೇಕು. ಸಿಡಿ, ಪೆನ್ಡ್ರೈವ್ ಮುಂತಾದ ಡೇಟಾ ಸಂಗ್ರಹ ಸಾಧನಗಳನ್ನು ಡೇಟಾ ಹಾನಿಯಾಗದಂತೆ ವಿಶೇಷ ಜಾಗ್ರತೆಯಿಂದ ಸಂರಕ್ಷಿಸಬೇಕು. ಚಿನ್ನ-ಬೆಳ್ಳಿ ಮುಂತಾದ ಅಮೂಲ್ಯ ವಸ್ತುಗಳನ್ನು ತನಿಖೆಗೆ ಅಗತ್ಯವಿಲ್ಲದಿದ್ದರೆ ಸಾಮಾನ್ಯವಾಗಿ ತನಿಖಾ ಸಂಸ್ಥೆಯ ವಶದಲ್ಲಿಡಬಾರದು. ಅಗತ್ಯವಿದ್ದರೆ ಫೋಟೋ ಅಥವಾ ವಿಡಿಯೋ ದಾಖಲಿಸಿ ವಾಪಸು ನೀಡಬಹುದು.

ಸ್ಫೋಟಕ ವಸ್ತುಗಳು, ಸುಲಭವಾಗಿ ಬೆಂಕಿ ಹಿಡಿಯುವ ಪದಾರ್ಥಗಳು (ಮಿಶ್ರಿತ ಪೆಟ್ರೋಲಿಯಂ ಉತ್ಪನ್ನಗಳು, ಗ್ಯಾಸ್ ಸಿಲಿಂಡರ್ಗಳು ಮುಂತಾದವು) ಸುರಕ್ಷಿತವಾಗಿ ಸಂರಕ್ಷಿಸುವಂತೆ ಮ್ಯಾಜಿಸ್ಟ್ರೇಟ್ ಕ್ರಮ ಕೈಗೊಳ್ಳಬೇಕು. ಬೇಗ ಹಾಳಾಗುವ ವಸ್ತುಗಳ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಅವುಗಳನ್ನು ಹರಾಜು ಮಾಡಿ ಹಣವನ್ನು esಛಿಡಿoತಿ ಚಿಛಿಛಿouಟಿಣ ನಲ್ಲಿ ಇಡಬಹುದು.

ಅವಶ್ಯಕತೆ ವಸ್ತುಗಳ ಕಾಯಿದೆ ಮುಂತಾದ ವಿಶೇಷ ಕಾಯ್ದೆಗಳ ಅಡಿಯಲ್ಲಿ ಜಪ್ತಿ ಮಾಡಿದ ವಸ್ತುಗಳ ಕುರಿತು ಆ ಕಾಯ್ದೆಗಳ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಜಪ್ತಿ ಮಾಡಿದ ನಗದು ಹಣದ ಪೋಟೋ ಅಥವಾ ವಿಡಿಯೋ ತೆಗೆದು. ನೋಟುಗಳ ಸೀರಿಯಲ್ ನಂಬರ್ಗಳನ್ನು ಮಹಜರ್ನಲ್ಲಿ ದಾಖಲಿಸಿ, ನಂತರ ಹಣವನ್ನು ಅರ್ಜಿದಾರರಿಗೆ ನೀಡಬೇಕು. ಅರ್ಜಿ ಸಲ್ಲಿಸದೆ ಇರುವ ಪ್ರಕರಣದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಠೇವಣಿ ಇಡಬೇಕು. ವಿಚಾರಣೆಯ ಅಂತ್ಯದಲ್ಲಿ ಜಯ ಸಾಧಿಸಿದ ಪಕ್ಷಕ್ಕೆ ಅದರ ಮೌಲ್ಯವನ್ನು ನೀಡಬೇಕು.

ನ್ಯಾಯಾಲಯವು ಈ ಮಾರ್ಗಸೂಚಿಗಳು ಸಂಪೂರ್ಣವಾದವುಗಳಲ್ಲ. ಮಾರ್ಗದರ್ಶನಕ್ಕಾಗಿ ನೀಡಿದ ಸೂಚನೆಗಳು ಮಾತ್ರ ಎಂದು ಸ್ಪಷ್ಟಪಡಿಸಿದೆ. ಅದರಂತೆ ಹೈಕೋರ್ಟ್ ಕ್ರಿಮಿನಲ್ ರಿವಿಷನ್ ಅರ್ಜಿಯನ್ನು ಅನುಮೋದಿಸಿ ಅಗತ್ಯ ನಿರ್ದೇಶನಗಳನ್ನು ನೀಡಿತು.

ಪ್ರಕರಣದ ವಿವರ
ಒಬ್ಬ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 380 ಮತ್ತು 457 ಅಡಿಯಲ್ಲಿ ದಾಖಲಾದ ಪ್ರಕರಣ ಇದಾಗಿದೆ. ದೂರು ನೀಡಿದ ಮಹಿಳೆ ನಾಲ್ಕು ವರ್ಷಗಳಿಂದ “ಗ್ಯಾಜೆಟ್ ಕ್ಲಬ್” ಎಂಬ ಮೊಬೈಲ್ ಫೋನ್ ಮತ್ತು ಅದರ ಉಪಕರಣಗಳು ಹಾಗೂ ಇತರೆ ಎಲೆಕ್ಟ್ರಾನಿಕ್ ಸಾಧನಗಳ ವ್ಯಾಪಾರ ಮಾಡುವ ಅಂಗಡಿಯಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. 2023ರ ಸೆಪ್ಟೆಂಬರ್ನಲ್ಲಿ ಅವರು ಎಂದಿನಂತೆ ಅಂಗಡಿಯನ್ನು ಮುಚ್ಚಿ ಮನೆಗೆ ಹೋದರು. ಮುಂದಿನ ದಿನ ಬೆಳಿಗ್ಗೆ ಅಂಗಡಿಯನ್ನು ತೆರೆಯಲು ಬಂದಾಗ ಮುಖ್ಯ ಬಾಗಿಲಿನ ಕಡ್ಡಿಯನ್ನು ಮುರಿದು ಕೆಲ ಅಪರಿಚಿತ ವ್ಯಕ್ತಿಗಳು ಮೊಬೈಲ್ ಫೋನ್ ಗಳು, ಲ್ಯಾಪ್ಟಾಪ್ ಗಳು, ಸ್ಮಾರ್ಟ್ ವಾಚ್ ಗಳು, ಅನಾಲಾಗ್ ಗಡಿಯಾರಗಳು ಸೇರಿದಂತೆ ಹಲವು ವಸ್ತುಗಳನ್ನು ಕಳವು ಮಾಡಿರುವುದು ಗಮನಕ್ಕೆ ಬಂತು.

ದೂರುದಾರ್ತಿ ಕಳವಾಗಿದ್ದ ವಸ್ತುಗಳ ವಿವರವಾದ ಪಟ್ಟಿಯನ್ನು ಸಲ್ಲಿಸಿದರು. ಅವುಗಳ ಒಟ್ಟು ಮೌಲ್ಯ ಸುಮಾರು 35 ಲಕ್ಷ ರೂಪಾಯಿನಿಂದ 40 ಲಕ್ಷ ರೂಪಾಯಿ ವರೆಗೆ ಎಂದು ಅಂದಾಜಿಸಲಾಯಿತು. ತನಿಖೆ ವೇಳೆ ಆರೋಪಿಗಳನ್ನು ಬಂಧಿಸಲಾಯಿತು ಮತ್ತು ಅವರ ವಶದಿಂದ ಹಲವು ವಸ್ತುಗಳನ್ನು ಜಪ್ತಿ ಮಾಡಲಾಯಿತು. ಜಪ್ತಿ ಮಾಡಲಾದ ವಸ್ತುಗಳ ಮಾಲೀಕರಾದ ಅರ್ಜಿದಾರರು ಆ ವಸ್ತುಗಳನ್ನು ತಾತ್ಕಾಲಿಕ ಕಸ್ಟಡಿಗೆ ಬಿಡುಗಡೆ ಮಾಡಲು ಅರ್ಜಿ ಸಲ್ಲಿಸಿದರು. ವಿಚಾರಣಾ ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿದ ಕಾರಣ ಅವರು ಹೈಕೋರ್ಟ್ ಮೆಟ್ಟಿಲೇರಿದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ ಹೊಸ ಮಾರ್ಗಸೂಚಿ ರೂಪಿಸಿದ್ದು, ರಾಜ್ಯ ಸರ್ಕಾರವು ಅಗತ್ಯ ನಿಯಮಗಳನ್ನು ರೂಪಿಸುವವರೆಗೆ, ಈ ನ್ಯಾಯಾಲಯ ನೀಡುವ ನಿರ್ದೇಶನಗಳು ಟ್ರಯಲ್ ಮ್ಯಾಜಿಸ್ಟ್ರೇಟ್ಗಳಿಗೆ ಮಾದರಿ ಮಾರ್ಗಸೂಚಿಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ಹೇಳಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.