06/03/2026

Law Guide Kannada

Online Guide

ಧಾರ್ಮಿಕ ವಿಧಿವಿಧಾನಗಳು, ಶಾಸ್ತ್ರೋಕ್ತವಾಗಿ ನಡೆಯದ ‘ಮದುವೆ’ ಅಸಿಂಧು- ಸುಪ್ರೀಂಕೋರ್ಟ್

ನವದೆಹಲಿ: ಹಿಂದೂ ವಿವಾಹ ಕಾಯ್ದೆಯಡಿ ವಿವಾಹವು ಮಾನ್ಯವಾಗಬೇಕಾದರೆ ಕೇವಲ ಸರ್ಕಾರಿ ನೋಂದಣಿ ಪ್ರಮಾಣಪತ್ರವಿದ್ದರೆ ಸಾಲದು, ಬದಲಾಗಿ ಮದುವೆಯ ಧಾರ್ಮಿಕ ವಿಧಿವಿಧಾನಗಳು ಕಡ್ಡಾಯವಾಗಿ ನಡೆದಿರಬೇಕು. ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿಯದ ಮದುವೆ ಅಸಿಂಧು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಡಾಲಿ ರಾಣಿ v/s ಮನೀಶ್ ಕುಮಾರ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ಈ ತೀರ್ಪು ನೀಡಿದ್ದು, ಹಿಂದೂ ವಿವಾಹ ಕಾಯ್ದೆಯಡಿ ಮದುವೆಯು ಕೇವಲ ಒಂದು ವಾಣಿಜ್ಯ ಒಪ್ಪಂದ ಅಥವಾ ಹಾಡು-ಕುಣಿತದ ಕಾರ್ಯಕ್ರಮವಲ್ಲ, ಅದು ಒಂದು ಪವಿತ್ರ ಸಂಸ್ಕಾರ. ಕೇವಲ ನೋಂದಣಿ ಪ್ರಮಾಣಪತ್ರ ಹೊಂದಿದ್ದ ತಕ್ಷಣ ಒಬ್ಬ ಪುರುಷ ಮತ್ತು ಮಹಿಳೆ ಕಾನೂನಾತ್ಮಕವಾಗಿ ಗಂಡ-ಹೆಂಡತಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7 ರ ಪ್ರಕಾರ, ಮದುವೆಯು ಮಾನ್ಯವಾಗಬೇಕಾದರೆ ಸೂಕ್ತವಾದ ಆಚರಣೆಗಳು ಮತ್ತು ಶಾಸ್ತ್ರಗಳು (ಸಪ್ತಪದಿಯಂತಹ ವಿಧಿಗಳು) ನಡೆಯಲೇಬೇಕು. ಇವುಗಳು ನಡೆಯದಿದ್ದರೆ ಆ ಮದುವೆಯನ್ನು ‘ಸೋಲೆಮನೈಸ್ಡ್’ ಎಂದು ಕರೆಯಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಹಿಂದೂ ವಿವಾಹ ಕಾಯ್ದೆಯಡಿ ವಿವಾಹದ ಮಾನ್ಯತೆಗೆ ಕೇವಲ ಸರ್ಕಾರಿ ನೋಂದಣಿ ಪ್ರಮಾಣಪತ್ರವಿದ್ದರೆ ಸಾಲದು, ಬದಲಾಗಿ ಮದುವೆಯ ಧಾರ್ಮಿಕ ವಿಧಿವಿಧಾನಗಳು ಕಡ್ಡಾಯವಾಗಿ ನಡೆದಿರಬೇಕು. ಮದುವೆಯ ನೋಂದಣಿ (Section 8) ಕೇವಲ ಆ ಮದುವೆ ನಡೆದಿದೆ ಎಂಬುದಕ್ಕೆ ಪುರಾವೆಯಾಗಿ ಕೆಲಸ ಮಾಡುತ್ತದೆ. ಆದರೆ, ಮೂಲಭೂತವಾಗಿ ಮದುವೆಯೇ ನಡೆಯದಿದ್ದ ಪಕ್ಷದಲ್ಲಿ, ಆ ನೋಂದಣಿ ಪ್ರಮಾಣಪತ್ರಕ್ಕೆ ಯಾವುದೇ ಕಾನೂನು ಮಾನ್ಯತೆ ಇರುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ವೀಸಾ ಪಡೆಯಲು ಅಥವಾ ಇನ್ಯಾವುದೋ ಪ್ರಾಯೋಗಿಕ ಕಾರಣಗಳಿಗಾಗಿ ಮದುವೆಯಾಗದೆಯೇ ಪ್ರಮಾಣಪತ್ರ ಪಡೆಯುವ ಟ್ರೆಂಡ್ ಬಗ್ಗೆ ಆತಂಕ ವ್ಯಕ್ತಪಡಿಸಿರುವ ನ್ಯಾಯಪೀಠವು, ಮದುವೆ ಎಂಬುದು ಕೇವಲ ‘ಜಂಟಿ ಬ್ಯಾಂಕ್ ಖಾತೆ’ ಅಥವಾ ‘ವೀಸಾ’ ಪಡೆಯುವ ಮಾರ್ಗವಲ್ಲ, ಅದು ಭಾರತೀಯ ಸಮಾಜದ ಬುನಾದಿ. ಇತ್ತೀಚಿನ ದಿನಗಳಲ್ಲಿ ವೀಸಾ ಪಡೆಯಲು ಅಥವಾ ಕೆಲಸದ ಸೌಲಭ್ಯಗಳಿಗಾಗಿ ಮದುವೆ ಮಾಡಿಕೊಳ್ಳುವ ಮೊದಲೇ ನೋಂದಣಿ ಪ್ರಮಾಣಪತ್ರ ಪಡೆಯುವ ಪ್ರವೃತ್ತಿ ಹೆಚ್ಚುತ್ತಿದೆ. ಇಂತಹ ಅಭ್ಯಾಸಗಳು ಕಾನೂನುಬಾಹಿರ ಮತ್ತು ಅಪಾಯಕಾರಿ ಎಂದು ನ್ಯಾಯಪೀಠವು ಕಳವಳ ವ್ಯಕ್ತಪಡಿಸಿದೆ.

ಪ್ರಕರಣದ ವಿವರ…
ಇಬ್ಬರು ಪೈಲಟ್ ಗಳು ಖಾಸಗಿ ಸಂಸ್ಥೆಯೊಂದರಿಂದ ಮದುವೆ ಪ್ರಮಾಣಪತ್ರ ಪಡೆದಿದ್ದರು. ಈ ನಡುವೆ ಇವರ ಸಂಸಾರದಲ್ಲಿ ಬಿರುಕು ಉಂಟಾಗಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ವಾಸ್ತವದಲ್ಲಿ ಅವರ ನಡುವೆ ಯಾವುದೇ ಹಿಂದೂ ಸಂಪ್ರದಾಯದ ಮದುವೆ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ, ಸಂವಿಧಾನದ 142ನೇ ವಿಧಿಯಡಿ ತನ್ನ ವಿಶೇಷ ಅಧಿಕಾರ ಬಳಸಿ ಸುಪ್ರೀಂ ಕೋರ್ಟ್, “ಇಲ್ಲಿ ಮದುವೆಯೇ ನಡೆದಿಲ್ಲ ಎಂದು ಘೋಷಿಸಿ ಎಲ್ಲ ಪ್ರಕರಣಗಳನ್ನು ವಜಾಗೊಳಿಸಿ ತೀರ್ಪು ನೀಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.