ಸುಪ್ರೀಂನಲ್ಲಿ ಹೆಚ್ಚುತ್ತಿರುವ ಪ್ರಕರಣಗಳು: ನ್ಯಾಯಮೂರ್ತಿಗಳ ಕೊರತೆ ನೀಗಿಸಲು AI ನಿಂದ ಸಾಧ್ಯವಿಲ್ಲ- ನ್ಯಾ. ದೀಪಾಂಕರ್ ದತ್ತ
ನವದೆಹಲಿ: ಸುಪ್ರೀಕೋರ್ಟ್ ನಲ್ಲಿ ವೇಗವಾಗಿ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆಯ ಎದುರು ತೀವ್ರ ನ್ಯಾಯಮೂರ್ತಿಗಳ ಕೊರತೆಯನ್ನು ಯಾವುದೇ ಪ್ರಮಾಣದ ಕೃತಕ ಬುದ್ಧಿಮತ್ತೆ (ಎಐ) ಅಥವಾ ತಂತ್ರಜ್ಞಾನ ಹಸ್ತಕ್ಷೇಪದಿಂದ ಪೂರೈಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ದೀಪಾಂಕರ್ ದತ್ತ ಅಭಿಪ್ರಾಯಪಟ್ಟಿದ್ದಾರೆ.
ಸುಪ್ರೀಂ ಕೋರ್ಟ್ ಎದುರಿಸುತ್ತಿರುವ ವಿಚಾರಣಾ ಪ್ರಕರಣಗಳ ಸ್ಪೋಟ” ಕುರಿತು ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿ ದೀಪಾಂಕರ್ ದತ್ತ, ಕೃತಕ ಬುದ್ಧಿಮತ್ತೆ (ಎಐ) ಸಹಾಯ ಮಾಡಬಹುದು, ಆದರೆ ಸುಪ್ರೀಂ ಕೋರ್ಟ್ ನಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಭಾರವನ್ನು ಎದುರಿಸಲು ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಮೂರ್ತಿಗಳ ಅಗತ್ಯವಿದೆ. ಎಐಯನ್ನು ನಮ್ಮ ಪಾದಗಳ ಬಳಿ ಇರಿಸಬೇಕು. ಅದು ನಮ್ಮ ತಲೆಯ ಮೇಲೆ ಕುಳಿತುಕೊಳ್ಳಲು ಬಿಡಬಾರದು ಎಂದು ನುಡಿದರು.
ಸುಪ್ರೀಂ ಕೋರ್ಟ್ ಅಡ್ವಕೆಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್ ಆಯೋಜಿಸಿದ್ದ “ಕಾನೂನು, ವಕೀಲರು ಮತ್ತು ಎಐ: ಮುಂದಿನ ಗಡಿ” ಎಂಬ ಪ್ಯಾನಲ್ ಚರ್ಚೆಯಲ್ಲಿ ಮಾತನಾಡಿದ ನ್ಯಾಯಮೂರ್ತಿ ದೀಪಾಂಕರ್ ದತ್ತ, ”2018ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ 40,000 ಅರ್ಜಿಗಳು ದಾಖಲಾಗಿದ್ದವು. ಮಂಜೂರಾದ ನ್ಯಾಯಮೂರ್ತಿಗಳ ಸಂಖ್ಯೆ 31 ಆಗಿತ್ತು. 2019ರ ಮಧ್ಯಭಾಗದಲ್ಲಿ ಅದು 31ರಿಂದ 34ಕ್ಕೆ ಏರಿತು… ಈಗಲೂ 34ರಲ್ಲೇ ಇದೆ. ಏಳು ವರ್ಷಗಳ ನಂತರ 43,000 ದಾಖಲೆಗಳು 75,000ಕ್ಕೆ ಏರಿವೆ” ಎಂದು ಹೇಳಿದರು.
ಸುಪ್ರೀಂ ಕೋರ್ಟ್ ನಲ್ಲಿ ದಾಖಲಾಗುತ್ತಿರುವ ಅರ್ಜಿಗಳ ಸಂಖ್ಯೆ ಇತಿಹಾಸದಲ್ಲೇ ಕಾಣದಷ್ಟು ಹೆಚ್ಚಾಗಿದೆ. ಇದರಿಂದ ಸಂಸ್ಥೆಯ ಮೇಲೂ ಹಾಗೂ ನ್ಯಾಯಮೂರ್ತಿಗಳ ಮೇಲೂ ಭಾರೀ ಒತ್ತಡ ಉಂಟಾಗಿದೆ. ಈ ಸಮಸ್ಯೆ ನ್ಯಾಯಾಲಯದತ್ತ ಬರುತ್ತಿರುವ ಜನರಲ್ಲ, ಬದಲಾಗಿ ಬೇಡಿಕೆಯನ್ನು ಪೂರೈಸಲು ವಿಫಲವಾಗುತ್ತಿರುವ ವ್ಯವಸ್ಥೆಯ ಮಿತಿಗಳಲ್ಲಿದೆ ಎಂದು ದೀಪಾಂಕರ್ ದತ್ತ ಒತ್ತಿ ಹೇಳಿದರು.
ತೀರ್ಪು ನೀಡುವಲ್ಲಿ ಮಾನವೀಯ ಅಂಶಗಳ ಅನಿವಾರ್ಯತೆಯನ್ನು ವಿವರಿಸುತ್ತಾ, ನ್ಯಾಯಾಧೀಶರು ವಿಚಾರಣೆಯಲ್ಲಿ ಅಡಕವಾಗಿರುವ “ಮಾನವೀಯ ಅಂಶಗಳನ್ನು ” ಅಂದರೆ ಹಿಂಸೆ, ಲೋಭ, ಕಾಮ ಮತ್ತು ಕ್ರೋಧದ ಪ್ರೇರಣೆಗಳನ್ನು ಅಳೆಯಬೇಕಾಗುತ್ತದೆ. ನ್ಯಾಯಾಲಯ ಮತ್ತು ವಾದಿಗಳ ನಡುವಿನ ಮಾನವೀಯ ಸಂವಹನವನ್ನು ಎಐ ಬದಲಾಯಿಸಲಾರದು. ಎಐ ಕಾನೂನು ಸಂಶೋಧನೆ, ಪ್ರಕರಣ ಸಿದ್ಧತೆ ಹಾಗೂ ಇತರೆ ಸಹಾಯಕ ಕಾರ್ಯಗಳಲ್ಲಿ ಸಹಾಯ ಮಾಡಬಹುದು. ವಿವಾದಗಳ ಹಿನ್ನೆಲೆಯಲ್ಲಿರುವ ಮಾನವೀಯ ಅಂಶಗಳು ಮತ್ತು ಉದ್ದೇಶಗಳನ್ನು ಅಳೆಯುವ ನ್ಯಾಯಾಧೀಶೀಯ ಕರ್ತವ್ಯ ಸಂವಿಧಾನಾತ್ಮಕವಾಗಿದ್ದು, ಅದನ್ನು ಎಐಯಿಂದ ಬದಲಾಯಿಸಲು ಸಾಧ್ಯವಿಲ್ಲ ಎಂದು ನ್ಯಾ. ದೀಪಾಂಕರ್ ದತ್ತ ಸ್ಪಷ್ಟಪಡಿಸಿದರು.
ಎಐಯನ್ನು ಕಾನೂನು ಸಂಶೋಧನೆಗೆ ಅಥವಾ ನ್ಯಾಯಾಂಗ ಭಾಷೆಯನ್ನು ತಿದ್ದುವ ಮಟ್ಟಕ್ಕೆ ಮಾತ್ರ ಸೀಮಿತಗೊಳಿಸಬಹುದು. ಆದರೆ ತೀರ್ಪಿನ ಮೂಲ ವಿಶ್ಲೇಷಣಾತ್ಮಕ ಭಾಗದಲ್ಲಿ ನ್ಯಾಯಮೂರ್ತಿಗಳ ಮೇಲೆ ಅದು ಪ್ರಾಬಲ್ಯ ಸಾಧಿಸಬಾರದು. “ನೀವು ನಿಮ್ಮ ಕೈಯಿಂದ ಬರೆಯುವುದು ಅತ್ಯುತ್ತಮ ಉತ್ಪನ್ನ” ಎಂದು ದೀಪಾಂಕರ್ ದತ್ತ ತಿಳಿಸಿದರು.
ಎಐ ನೈತಿಕತೆಯ ಕುರಿತು ಮಾತನಾಡಿದ ನ್ಯಾಯಮೂರ್ತಿ ದತ್ತ, ರಾಜ ಮತ್ತು ಕೋತಿಯ ಉಪಮೆಯನ್ನು ಬಳಸಿ, ಎಐಯನ್ನು ಸೇವಕನಂತೆ ನಮ್ಮ ಪಾದಗಳ ಬಳಿ ಇರಿಸಬೇಕು, ಆದರೆ ನ್ಯಾಯವ್ಯವಹಾರಿಗಳ ತಲೆಯ ಮೇಲೆ ಕುಳಿತುಕೊಳ್ಳಲು ಬಿಡಬಾರದು ಎಂದು ಎಚ್ಚರಿಸಿದರು. ಸಾರ್ವಜನಿಕ ಎಐ ವೇದಿಕೆಗಳಾದ ChatGPT ಮುಂತಾದವುಗಳನ್ನು ಬೇಜವಾಬ್ದಾರಿಯಿಂದ ಬಳಸುವುದರ ವಿರುದ್ಧವೂ ಅವರು ಎಚ್ಚರಿಕೆ ನೀಡಿದರು. ಕರಡು ತೀರ್ಪುಗಳನ್ನು ಇಂತಹ ಉಪಕರಣಗಳಿಗೆ ಅಪ್ ಲೋಡ್ ಮಾಡುವುದರಿಂದ ಗುಪ್ತ ಮಾಹಿತಿಯು ಜಗತ್ತಿನೆಲ್ಲೆಡೆ ಹರಡುವ ಅಪಾಯವಿದೆ, ಏಕೆಂದರೆ ಯಂತ್ರವು ಪ್ರತಿಯೊಂದು ಇನ್ಪುಟ್ನಿಂದ ಕಲಿಯುತ್ತದೆ ಎಂದು ಹೇಳಿದರು.
ಭವಿಷ್ಯವಾಣಿ ತಂತ್ರಜ್ಞಾನಗಳ ಮಿತಿಗಳನ್ನು ವಿವರಿಸಲು ತಮ್ಮ ವೈಯಕ್ತಿಕ ಅನುಭವವೊಂದನ್ನು ಹಂಚಿಕೊಂಡ ನ್ಯಾಯಮೂರ್ತಿ ದೀಪಾಂಕರ್ ದತ್ತ ಅವರು ಎರಡು ಬಾರಿ ತೆರೆದ ನ್ಯಾಯಾಲಯದಲ್ಲಿ ಆದೇಶವನ್ನು ಉಚ್ಚರಿಸಿದ್ದರೂ, ಕಡತವನ್ನು ಮರುಪರಿಶೀಲಿಸಿದ ಬಳಿಕ ತಿದ್ದುಪಡಿ ಅಗತ್ಯವಿದೆ ಎಂಬುದನ್ನು ಅರಿತು ಸಹಿ ಮಾಡಲು ನಿರಾಕರಿಸಿದ್ದಾಗಿ ಹೇಳಿದರು.
ಸುಪ್ರೀಂ ಕೋರ್ಟ್ ಪೂರ್ವನಿದರ್ಶನಗಳ ಪ್ರಕಾರ, ಆದೇಶಕ್ಕೆ ಸಹಿ ಆಗುವವರೆಗೂ ನ್ಯಾಯಮೂರ್ತಿಗೆ ತನ್ನ ನಿರ್ಧಾರವನ್ನು ಬದಲಾಯಿಸುವ ಅವಕಾಶವಿದೆ. ಇಂತಹ ಸಹಜ ಅಂತರ್ದೃಷ್ಟಿಯ ತಿದ್ದುಪಡಿಯನ್ನೇ ಎಐ ಅನುಕರಿಸಲು ಕಷ್ಟಪಡಬಹುದು. ನ್ಯಾಯಾಧೀಶರು ವಿಚಾರಣೆಯಲ್ಲಿ ಅಡಕವಾಗಿರುವ “ಮಾನವೀಯ ಅಂಶಗಳನ್ನು ” ಅಂದರೆ ಹಿಂಸೆ, ಲೋಭ, ಕಾಮ ಮತ್ತು ಕ್ರೋಧದ ಪ್ರೇರಣೆಗಳನ್ನು ಅಳೆಯಬೇಕಾಗುತ್ತದೆ. ನ್ಯಾಯಾಲಯ ಮತ್ತು ವಾದಿಗಳ ನಡುವಿನ ಮಾನವೀಯ ಸಂವಹನವನ್ನು ಎಐ ಬದಲಾಯಿಸಲಾರದು ಎಂದು ನ್ಯಾ. ದತ್ತ ತಿಳಿಸಿದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
