ರೌಡಿಶೀಟರ್ ಗಳಿಗೂ ಗೌರವದ ಬದುಕಿನ ಹಕ್ಕಿದೆ: ಠಾಣೆಗೆ ಕರೆಸುವಾಗ ನಿಯಮ ಪಾಲಿಸಿ- ಪೊಲೀಸರಿಗೆ ಹೈಕೋರ್ಟ್ ಸೂಚನೆ
ಬೆಂಗಳೂರು: ರೌಡಿಶೀಟರ್ ಗಳಿಗೂ ಗೌರವದಿಂದ ಘನತೆಯಿಂದ ಬದುಕುವ ಹಕ್ಕಿದೆ. ಅವರನ್ನು ಠಾಣೆಗೆ ಕರೆಸಲು ಪೂರ್ವಮಾಹಿತಿ ಅಗತ್ಯವಾಗಿ ನೀಡಿ. ಅವರಿಗೆ ತಮ್ಮ ಇತಿಹಾಸ ಮರೆತು ಬದಲಾಗಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ.
“ಸುನೀಲ್ ಕುಮಾರ್ ಆಲಿಯಾಸ್ ಸೈಲೆಂಟ್ ಸುನೀಲ್” ಪ್ರಕರಣದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಪೊಲೀಸರು ರೌಡಿ ಶೀಟರ್ ಗಳನ್ನು ಠಾಣೆಗೆ ಕರೆತರುವ ವಿಚಾರವಾಗಿ ರೌಡಿ ಶೀಟರ್ ಸುನಿಲ್ ಕುಮಾರ್ ಅಲಿಯಾಸ್ ಸೈಲೆಂಟ್ ಸುನಿಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ರೌಡಿಶೀಟರ್ ಗಳನ್ನು ಪೊಲೀಸ್ ಠಾಣೆಗೆ ಕರೆಸುವುದಕ್ಕೆ ಪ್ರಕ್ರಿಯೆ ನಿಗದಿಪಡಿಸಿ ಆದೇಶ ಹೊರಡಿಸಿದೆ.
ಅಲೋಕ್ ಕುಮಾರ್ ಹೆಚ್ಚುವರಿ ಆಯುಕ್ತರಾಗಿದ್ದಾಗ ರೌಡಿಶೀಟರ್ ಸುನೀಲ್ ಕುಮಾರ್ ಅಲಿಯಾಸ್ ಸೈಲೆಂಟ್ ಸುನೀಲ್ ಕರೆಸಿ ಎಚ್ಚರಿಸಿದ್ದರು. ಅಲೋಕ್ ಕುಮಾರ್ ವಾರ್ನಿಂಗ್ ನೀಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೀಗಾಗಿ ಸೈಲೆಂಟ್ ಸುನೀಲ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರ ನ್ಯಾಯಪೀಠವು, ರೌಡಿ ಶೀಟ್ ನಲ್ಲಿ ಹೆಸರಿದೆ ಎಂಬ ಮಾತ್ರಕ್ಕೆಪೊಲೀಸರು ರೌಡಿ ಶೀಟರ್ ಗಳನ್ನು ತಮಗಿಷ್ಟ ಬಂದಂತೆ ಠಾಣೆಗೆ ಕರೆತರಬಾರದು. ಅಗತ್ಯ ಇಲ್ಲದಿದ್ದರೂ ಠಾಣೆಯಲ್ಲಿ ಸುದೀರ್ಘ ಕಾಲ ಕಾಯಿಸಬಾರದು. ರೌಡಿ ಶೀಟರ್ ಗಳನ್ನು ಠಾಣೆಗೆ ಕರೆಸಲು ನಿಯಮ ಪಾಲಿಸಬೇಕು ಎಂದು ರಾಜ್ಯ ಪೊಲೀಸರಿಗೆ ಸೂಚನೆ ನೀಡಿದೆ.
ರಾಜಧಾನಿ ಬೆಂಗಳೂರಿನಲ್ಲಿ 6,500 ಕ್ಕೂ ಹೆಚ್ಚು ರೌಡಿ ಶೀಟರ್ ಗಳಿದ್ದಾರೆ. ಅವರಿಗೂ ಘನತೆಯಿಂದ ಬದುಕುವ ಹಕ್ಕಿದೆ ಮತ್ತು ಅವರಿಗೆ ತಮ್ಮ ಇತಿಹಾಸ ಮರೆತು ಬದಲಾಗಲು ಅವಕಾಶ ನೀಡಬೇಕು
ರೌಡಿಶೀಟರ್ ಗಳನ್ನು ಪೊಲೀಸ್ ಠಾಣೆಗೆ ಕರೆಸುವ ಅಗತ್ಯ ಬಿದ್ದರೆ, ಮೊದಲು ಅವರಿಗೆ ಎಸ್ಎಂಎಸ್ ಅಥವಾ ವಾಟ್ಸಾಪ್ ಮೂಲಕ ಪೊಲೀಸ್ ಠಾಣೆಗೆ ಬರುವಂತೆ ಸೂಚಿಸಬೇಕು. ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡದೇ ಇದ್ದರೆ, ಅಥವಾ ಠಾಣೆಗೆ ಬರದಿದ್ದಲ್ಲಿ ಮಾತ್ರ ಪೊಲೀಸರು ಅವರಿರುವ ಜಾಗ ಅಥವಾ ಮನೆಗೆ ಹೋಗಿ ಕರೆತರಬಹುದು ಎಂದು ಹೈಕೋರ್ಟ್ ಆದೇಶಿಸಿದೆ.
ತಮ್ಮ ದೂರವಾಣಿ ಸಂಖ್ಯೆಗಳನ್ನು ರೌಡಿಶೀಟರ್ ಗಳು ಪೊಲೀಸರಿಗೆ ನೀಡಿರಬೇಕು. ಅಗತ್ಯಬಿದ್ದಾಗ ಪೊಲೀಸರು ಮೊ ಬೈಲ್ ಎಸ್ಎಂಎಸ್ ಅಥವಾ ವಾಟ್ಸಾಪ್ ಮೂಲಕ ಸೂಚಿಸಿದರೆ, ಅವರ ಮುಂದೆ ಹಾಜರಾಗಬೇಕು. ಒಂದೊಮ್ಮೆ ಹಾಜರಾಗದಿದ್ದರೆ ಪೊಲೀಸರು ರೌಡಿಶೀಟರ್ ಗಳ ಮನೆ ಬಳಿ ಹೋಗಲು ಅಡ್ಡಿಯಿಲ್ಲ. ಹಾಗೆಯೇ, ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವವರಿಗೆ ಈ ಆದೇಶದ ರಕ್ಷಣೆ ಸಿಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
