07/03/2026

Law Guide Kannada

Online Guide

ಅಕ್ರಮ ಕಂಡು ಬಂದ್ರೆ ಸಂಪೂರ್ಣ ಪ್ರಕ್ರಿಯೆಯೇ ರದ್ದು – ಸುಪ್ರೀಂ ವಾರ್ನಿಂಗ್

ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವೇಳೆ ಭಾರತೀಯ ಚುನಾವಣಾ ಆಯೋಗ ಅಳವಡಿಸಿಕೊಂಡ ವಿಧಾನದಲ್ಲಿ ಯಾವುದೇ ಅಕ್ರಮ ಕಂಡುಬಂದರೆ, ಇಡೀ ಪ್ರಕ್ರಿಯೆಯನ್ನೇ ರದ್ದುಗೊಳಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಖಡಕ್ ವಾರ್ನಿಂಗ್ ನೀಡಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜೊಯ್ಮಲ್ಯ ಬಾಗ್ನಿ ಅವರಿದ್ದ ಪೀಠ ಈ ಎಚ್ಚರಿಕೆ ನೀಡಿದೆ. ಅಲ್ಲದೆ ಈ ಪ್ರಕ್ರಿಯೆಯ ಕುರಿತು ಅರೆಬರೆ ಅಭಿಪ್ರಾಯಗಳನ್ನು ನೀಡುವುದಿಲ್ಲ ಎಂದ ನ್ಯಾಯಪೀಠ ಬಿಹಾರದ ಎಸ್ ಐಆರ್ ನ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಅಂತಿಮ ವಿಚಾರಣೆಯನ್ನು ಅಕ್ಟೋಬರ್ 7ರಂದು ನಡೆಸುವುದಾಗಿ ತಿಳಿಸಿದೆ.

ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಆಧಾರ್ ಕಾರ್ಡ್ ಅನ್ನು 12ನೇ ದಾಖಲೆಯಾಗಿ ಸೇರಿಸಲು ಮತ್ತು ಆಧಾರ್ ಅನ್ನು ಗುರುತಿನ ಪುರಾವೆಯಾಗಿ ಮಾತ್ರ ಬಳಸಬಹುದು ಎಂದು ಸೆಪ್ಟೆಂಬರ್ 8 ರಂದು ಹೊರಡಿಸಿದ ಆದೇಶವನ್ನು ಮಾರ್ಪಡಿಸಲು ನ್ಯಾಯಪೀಠ ನಿರಾಕರಿಸಿತು. ಜತೆಗೆ, ಈ ಆದೇಶ ಹಿಂಪಡೆಯಬೇಕು ಎಂದು ಕೋರಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿರುವ ಅರ್ಜಿಯ ಸಂಬಂಧ ನೋಟಿಸ್ ಜಾರಿ ಮಾಡಿತು.

ಹಾಗೆಯೇ ಬಿಹಾರದ ಎಸ್ಐಆರ್ ಕುರಿತ ನಮ್ಮ ತೀರ್ಪು ಇಡೀ ದೇಶಕ್ಕೆ (ಪ್ಯಾನ್ ಇಂಡಿಯಾ) ಅನ್ವಯಿಸುತ್ತದೆ. ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಸುವುದರಿಂದ ಚುನಾವಣಾ ಆಯೋಗವನ್ನು ತಡೆಯಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿ ಅಕ್ಟೋಬರ್ 7ರ ವಿಚಾರಣೆಯ ಸಂದರ್ಭದಲ್ಲಿ ನಿರ್ದಿಷ್ಟವಾಗಿ ಬಿಹಾರದ ಎಸ್ ಐಆರ್ ಹಾಗೂ ದೇಶದಾದ್ಯಂತದ ಎಸ್ಐಆರ್ ಕುರಿತು ವಾದಿಸಲು ಅರ್ಜಿದಾರರಿಗೆ ಪೀಠ ಅನುಮತಿ ನೀಡಿತು.
‘ನಮ್ಮ ನಿರ್ದೇಶನವು ಕೇವಲ ಮಧ್ಯಂತರ ಸ್ವರೂಪದ್ದಾಗಿದೆ. ಪುರಾವೆಯಾಗಿ ದಾಖಲೆಯ ಸಿಂಧುತ್ವದ ವಿಷಯವನ್ನು ಎಸ್ಐಆರ್ಗೆ ಸಂಬಂಧಿಸಿದ ವಿಷಯದಲ್ಲಿ ಇನ್ನಷ್ಟೇ ನಿರ್ಧರಿಸಬೇಕಾಗಿದೆ’ ಎಂದು ನ್ಯಾಯಪೀಠ ತಿಳಿಸಿದೆ.

ಚಾಲನಾ ಪರವಾನಗಿಗಳನ್ನ ನಕಲಿ ಮಾಡಬಹುದು, ಪಡಿತರ ಚೀಟಿಗಳನ್ನ ನಕಲಿ ಮಾಡಬಹುದು. ಹಲವಾರು ದಾಖಲೆಗಳನ್ನ ನಕಲಿ ಮಾಡಬಹುದು. ಕಾನೂನು ಅನುಮತಿಸುವ ಮಟ್ಟಿಗೆ ಆಧಾರ್ ಅನ್ನು ಬಳಸಿಕೊಳ್ಳಬೇಕು ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.