06/03/2026

Law Guide Kannada

Online Guide

ಅವಧಿ ಮುಗಿದರೂ ನಡೆಯದ ರಾಜ್ಯ ವಕೀಲರ ಪರಿಷತ್ ಚುನಾವಣೆ: ಸ್ಪಷ್ಟೀಕರಣಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಐದು ವರ್ಷಗಳ ಅವಧಿ 2023ರಲ್ಲಿ ಮುಕ್ತಾಯಗೊಂಡಿದ್ದರೂ ರಾಜ್ಯ ವಕೀಲರ ಪರಿಷತ್ತಿಗೆ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟಿಕರಣ ನೀಡುವಂತೆ ರಾಜ್ಯ ವಕೀಲರ ಪರಿಷತ್ತಿಗೆ ಕರ್ನಾಟಕ ಹೈಕೋರ್ಟ್ಲ್ಲಿ ಸೂಚನೆ ನೀಡಿದೆ.

ವಕೀಲರ ಪರಿಷತ್ತಿನ ಆಡಳಿತ ಮಂಡಳಿಗೆ ನಿಗದಿಪಡಿಸಿದ ಐದು ವರ್ಷಗಳ ಅವಧಿ 2023ರ ಜೂನ್ ನಲ್ಲೇ ಪೂರ್ಣಗೊಂಡಿದ್ದು, ಹೀಗಾಗಿ, ಹಾಲಿ ಆಡಳಿತ ಮಂಡಳಿಯನ್ನು ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸಲು ನಿರ್ದೇಶಿಸಬೇಕು ಎಂದು ಕೋರಿ ವಕೀಲ ರಹಮತುಲ್ಲಾ ಕೊತ್ವಾಲ್ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ವಕೀಲರಿಗೆ ಸಂಬಂಧಿಸಿದ ‘ವೃತ್ತಿ ಪ್ರಮಾಣ ಪತ್ರ” (COP) ವಿತರಣೆಗೆ ಸಂಬಂಧಿಸಿದ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇರುವುದೇ ಕರ್ನಾಟಕ ವಕೀಲರ ಪರಿಷತ್ (KSBC)ಗೆ ಚುನಾವಣೆ ನಡೆಸದಿರಲು ಕಾರಣವೇ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಭಾರತೀಯ ವಕೀಲರ ಪರಿಷತ್ (BCI) ಹಾಗೂ ವಕೀಲರ ಪರಿಷತ್ತಿಗೆ ಕರ್ನಾಟಕ ನಿರ್ದೇಶನ ನೀಡಿತು.

ಬಿಸಿಐ 2025ರ ಜುಲೈ 31ರಂದು ಹೊರಡಿಸಿರುವ ಸಂವಹನದಲ್ಲಿ ರಾಜ್ಯ ವಕೀಲರ ಪರಿಷತ್ ಚುನಾವಣೆಗೆ ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಲಾಗಿದೆ. ಹೀಗಿರುವಾಗ, ಸಿಒಪಿ ನೀಡುವ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಬಾಕಿ ಇರುವುದು ಚುನಾವಣೆ ನಡೆಸದಿರಲು ಒಂದು ಕಾರಣವೇ ಎಂಬ ಬಗ್ಗೆ, ಈ ನ್ಯಾಯಾಲಯಕ್ಕೆ ಸ್ಪಷ್ಟಿಕರಣ ಬೇಕಿದೆ ಎಂದು ನ್ಯಾಯಪೀಠ, ಪಕ್ಷಕಾರರಿಗೆ ತಾಕೀತು ಮಾಡಿತು.

ಇನ್ನು ಕೆಎಸ್ಬಿಸಿ ಪರ ವಾದ ಮಂಡಿಸಿದ ವಕೀಲರು, “ಸಿಒಪಿ ಸಂಬಂಧ ಸ್ವೀಕರಿಸಲಾಗಿರುವ ಅರ್ಜಿಗಳಲ್ಲಿ ಅಂದಾಜು 29 ಸಾವಿರ ಅರ್ಜಿಗಳು ಇನ್ನೂ ಪರಿಶೀಲನೆಯಲ್ಲಿದೆ. ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ” ಎಂದು ಮಾಹಿತಿ ನೀಡಿದರು. ಇದಕ್ಕೆ ಗರಂ ಆದ ನ್ಯಾಯಪೀಠ, ‘ಸುಮಾರು 29 ಸಾವಿರ ಅರ್ಜಿಗಳನ್ನು ಇನ್ನೂ ಪರಿಶೀಲಿಸಬೇಕಾಗಿದೆಯೇ? ಅದನ್ನು ಆಮೆಗತಿಯಲ್ಲಿ ಪೂರ್ಣಗೊಳಿಸುವಿರೇ ಅಥವಾ ಶರವೇಗದಲ್ಲಿ ಮಾಡುವಿರೇ? ಇದೊಂದು ನಿರಂತರ ಪ್ರಕ್ರಿಯೆಯಾಗಿರುತ್ತದೆ. ಈ ಕಾರಣಕ್ಕೆ ಚುನಾವಣೆ ನಡೆಸಬಾರದೇಕೆ” ಎಂದು ಪ್ರಶ್ನಿಸಿತು. ಈ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಬಿಸಿಐ ಪರ ವಕೀಲರು, ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇರುವ ಅರ್ಜಿಯ ಬಗ್ಗೆ ಪೀಠಕ್ಕೆ ತಿಳಿಸಿದರು.

ಕೆಎಸ್ಬಿಸಿ ಆಡಳಿತ ಮಂಡಳಿಯ ನಿಗದಿತ 5 ವರ್ಷದ ಅವಧಿ 2023ರ ಜೂನ್ನಲ್ಲೇ ಪೂರ್ಣಗೊಂಡಿದೆ. ಆದ್ದರಿಂದ, ವಕೀಲರ ಕಾಯ್ದೆ 1961ರ ಸೆಕ್ಷನ್ 8ರಡಿ ಕೆಎಸ್ಬಿಸಿಯಲ್ಲಿ ಕಾನೂನು, ಪಾರದರ್ಶಕತೆ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಕೂಡಲೇ ಚುನಾವಣೆ ನಡೆಸಬೇಕು. ಅದಕ್ಕೆ ವೇಳಾಪಟ್ಟಿಯನ್ನು ಪ್ರಕಟಿಸುವಂತೆ ಕೋರಿ 2025ರ ಜನವರಿ 7ರಂದು ನೀಡಿರುವ ಮನವಿಯನ್ನು ಪರಿಗಣಿಸುವಂತೆ ಬಿಸಿಐಗೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ. ಅವಧಿ ಮುಗಿದ ನಂತರ ಚುನಾವಣೆ ನಡೆಸುವ ಬದಲು ಹಾಲಿ ಆಡಳಿತ ಮಂಡಳಿಯ ಅವಧಿಯನ್ನು ಮುಂದುವರಿಸುವ ಏಕಪಕ್ಷೀಯ ನಿರ್ಧಾರವನ್ನು ಕೈಗೊಂಡಿದ್ದು, ಅದು ವಕೀಲರ ಕಾಯ್ದೆಗೆ ವಿರುದ್ಧವಾಗಿದೆ. ಆದ್ದರಿಂದ, ಹಾಲಿ ಆಡಳಿತ ಮಂಡಳಿಯನ್ನು ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸಲು ಬಿಸಿಐಗೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.