ರಾಜ್ಯ ಸರ್ಕಾರಕ್ಕೆ ಮೇಲುಗೈ: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಸಿಂಧುತ್ವ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು: ಸಣ್ಣ ಪ್ರಮಾಣದಲ್ಲಿ ಸಾಲ ಪಡೆದವರಿಗೆ ಕಿರುಕುಳ ನೀಡುವುದನ್ನು ತಪ್ಪಿಸುವುದಕ್ಕಾಗಿ ರಾಜ್ಯ ಸರ್ಕಾರ ಹೊರಡಿಸಿದ್ದ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಸುಗ್ರೀವಾಜ್ಞೆ 2025 (ಮೈಕ್ರೋ ಫೈನಾನ್ಸ್) ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಕರ್ನಾಟಕ ಹೈರ್ ಪರ್ಚೇಸ್ ಅಸೋಸಿಯೇಷನ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದ್ದು, ಇದರಿಂದ ಸಿದ್ದರಾಮಯ್ಯ ಸರ್ಕಾರ ಮೇಲುಗೈ ಸಾಧಿಸಿದೆ.
ಸುಗ್ರೀವಾಜ್ಞೆಯ ಸಿಂಧುತ್ವ ಮತ್ತು ಮೋಟಾರು ವಾಹನ/ಆಸ್ತಿ ಹಣಕಾಸು ಉದ್ಯಮವು ಸುಗ್ರೀವಾಜ್ಞೆಯಿಂದ ಹೊರಗಿವೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಲು ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ಕರ್ನಾಟಕ ಹೈರ್ ಪರ್ಚೇಸ್ ಅಸೋಶಿಯೇಶನ್ ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿ, ಸುಗ್ರೀವಾಜ್ಞೆಯನ್ನು ಎತ್ತಿಹಿಡಿದು ಆದೇಶಿಸಿದೆ.
ಸುಗ್ರೀವಾಜ್ಞೆ ಕೆಲವು ಸೆಕ್ಷನ್ಗಳು ಸಾಲದಾತರನ್ನು ತೊಂದರೆಗೆ ಸಿಲುಕಿಸಲಿದ್ದು, ಅವರ ಕಾನೂನುಬದ್ಧ ಹಕ್ಕುಗಳು ಹಾಗೂ ಆರ್ಥಿಕ ಹಿತಾಸಕ್ತಿಗಳನ್ನು ಉಲ್ಲಂಘಿಸಲಿವೆ. ಮೈಕ್ರೋ ಫೈನಾನ್ಸ್ ಎಂದರೆ ಏನು ಎಂಬುದನ್ನು ಸುಗ್ರೀವಾಜ್ಞೆಯಲ್ಲಿ ವ್ಯಾಖ್ಯಾನಿಸಿಲ್ಲ. ಆದ್ದರಿಂದ ಸುಗ್ರೀವಾಜ್ಞೆ ದುರುದ್ದೇಶಕ್ಕಾಗಿ ಬಳಸಿಕೊಳ್ಳುವುದಕ್ಕೆ ಅವಕಾಶವಿರಲಿದೆ. ಸುಗ್ರೀವಾಜ್ಞೆಯ ಸಂವಿಧಾನದ ಪರಿಚ್ಛೇದ 14, 19,21 ಮತ್ತು 300ಎ ಗಳನ್ನು ಉಲ್ಲಂಘಿಸಲಿದ್ದು, ತರಾತುರಿಯಲ್ಲಿ ಜಾರಿ ಮಾಡಲಾಗಿದೆ ಎಂದು ಕರ್ನಾಟಕ ಹೈಯರ್ ಪರ್ಚೇಸಿಂಗ್ ಅಸೋಸಿಯೇಷನ್ ಪರ ವಕೀಲರು ವಾದ ಮಂಡಿಸಿದ್ದರು.
ಅರ್ಜಿಯ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ”ಮೂರು ಲಕ್ಷ ವಾರ್ಷಿಕ ಆದಾಯ ಇರುವ ಕುಟುಂಬಗಳಿಗೆ ಯಾವುದೇ ಭದ್ರತೆ ಇಲ್ಲದ ಸಾಲ ನೀಡುವವರಿಗೆ ಸುಗ್ರೀವಾಜ್ಞೆ ಅನ್ವಯಿಸುತ್ತದೆ. ಹಾಲಿ ಪ್ರಕರಣದಲ್ಲಿ ಬಾಧಿತರು ಯಾರೂ ನ್ಯಾಯಾಲಯದ ಮುಂದೆ ಬಂದಿಲ್ಲ. ಅರ್ಜಿದಾರರು ಕಾಯಿದೆ ತಮಗೆ ಅನ್ವಯಿಸುತ್ತದೆಯೇ, ಇಲ್ಲವೇ ಎಂಬುದರ ಸ್ಪಷ್ಟನೆ ಕೋರಲು ನ್ಯಾಯಾಲಯದ ಮುಂದೆ ಬಂದಿದ್ದಾರೆ” ಎಂದಿದ್ದರು.
ಆದೇಶದ ವಿವರ ಹೀಗಿದೆ…
ಸಮಾಜದ ದುರ್ಬಲ ವರ್ಗವನ್ನು ವಸೂಲಾತಿ ಏಜೆಂಟರ ಕೈಯಿಂದ ರಕ್ಷಿಸಲು ಸುಗ್ರೀವಾಜ್ಞೆಯನ್ನು ಘೋಷಿಸಲಾಗಿದೆ. ಮಿತಿ ಮೀರಿದ ಬಡ್ಡಿ ಮತ್ತು ಅನೈತಿಕ ವಸೂಲಿ ವಿಧಾನಗಳು ಎಂಬ ಎರಡು ಅಂಶಗಳಲ್ಲಿ ಎಲ್ಲೆಡೆ ಆತ್ಮಹತ್ಯೆಗಳು ನಡೆಯುತ್ತಿರುವುದರಿಂದ ಇದರ ಜಾರಿ ಅಗತ್ಯ ಸಾರ್ವಜನಿಕ ವಲಯದಲ್ಲಿದೆ. ಆರ್ಥಿಕವಾಗಿ ದುರ್ಬಲ ಗುಂಪುಗಳು ಮತ್ತು ವ್ಯಕ್ತಿಗಳನ್ನು, ವಿಶೇಷವಾಗಿ ರೈತರು, ಮಹಿಳೆಯರು ಮತ್ತು ಮಹಿಳಾ ಸ್ವಸಹಾಯ ಗುಂಪುಗಳನ್ನು ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಲೇವಾದೇವಿ ಸಂಸ್ಥೆಗಳು ವಿಧಿಸುವ ಬಡ್ಡಿ ದರಗಳನ್ನು ಬಲವಂತದ ವಸೂಲಿ ಮಾಡುವುದನ್ನು ತಡೆಯುವುದೇ ಸುಗ್ರೀವಾಜ್ಞೆಯ ಪ್ರಮುಖ ಉದ್ದೇಶವಾಗಿದೆ. ಅಲ್ಲದೆ, ಸಾಲಗಾರ, ದುರ್ಬಲ ವರ್ಗಗಳು, ಸಾಲದಾತ ಹಾಗೂ ಸಾಲ ಎಂದರೇನು ಎಂಬ ಅಂಶವನ್ನು ಆದೇಶದಲ್ಲಿ ವ್ಯಾಖ್ಯಾನಿಸಲಾಗಿದೆ.
ಸುಗ್ರೀವಾಜ್ಞೆಯು ಅಸಮಂಜಸವಾಗಿದೆ ಎಂಬ ತೀರ್ಮಾನಕ್ಕೆ ಬಂದಲ್ಲಿ ಸಂವಿಧಾನದ 14 ನೇ ವಿಧಿಯ ಉಲ್ಲಂಘನೆಯಾಗುತ್ತದೆ. ಶಾಸಕಾಂಗ ಜಾರಿ ಮಾಡುವ ಸುಗ್ರೀವಾಜ್ಞೆ ದುರುದ್ದೇಶಪೂರಿತವಾಗಿ, ತರ್ಕಬದ್ಧವಾಗಿದ್ದಲ್ಲಿ ಮಾತ್ರ ಅಮಾನ್ಯಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಪ್ರಕರಣದಲ್ಲಿ ಅಂತಹ ಯಾವುದೇ ಅಂಶ ಕಂಡುಬಂದಿಲ್ಲ ಎಂದು ಪೀಠ ವಿವರಿಸಿದೆ. ರೈತರು, ಮಹಿಳೆಯರು, ಕಾರ್ಮಿಕರು, ಸಂಕಷ್ಟದಲ್ಲಿರುವ ಗುಂಪುಗಳು ಎಂಬ ದುರ್ಬಲರ ನೋವಿಗೆ ಪ್ರತಿಕ್ರಿಯೆಯಾಗಿ ಸುಗ್ರೀವಾಜ್ಞೆ ರೂಪಿಸಲಾಗಿದೆ. ಅಸಮಂಜಸ ಬಡ್ಡಿ ವಸೂಲಿ ವಿಧಾನಗಳಿಂದ ಆಗಾಗ್ಗೆ ಸಾಲಗಾರರನ್ನು ಹತಾಶೆ ಮತ್ತು ಸಾವಿನ ಪ್ರಪಾತಕ್ಕೆ ತಳ್ಳುವ ಸಾಲದಾತರಿಂದ ರಕ್ಷಿಸಲು ಜಾರಿ ಮಾಡಲಾಗಿದೆ ಎಂದಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ