06/03/2026

Law Guide Kannada

Online Guide

ಸುಪ್ರೀಂಕೋರ್ಟ್ ನಲ್ಲಿ ವಾದ ಮಾಡಿ ಗೆದ್ದ ವಿದ್ಯಾರ್ಥಿ: ಐತಿಹಾಸಿಕ ತೀರ್ಪು ಪ್ರಕಟ

ನವದೆಹಲಿ: ದ್ವಿತೀಯಪಿಯುಸಿಯ ವಿದ್ಯಾರ್ಥಿಯೋರ್ವ ಸುಪ್ರೀಂಕೋರ್ಟ್ ನಲ್ಲಿ ವಾದ ಮಾಡಿ ಗೆದ್ದು ಎಲ್ಲರ ಗಮನ ಸೆಳೆದಿದ್ದಾನೆ. ವೈದ್ಯನಾಗಬೇಕು ಎಂಬ ಕನಸು ಹೊತ್ತಿದ್ದ ಈ ವಿದ್ಯಾರ್ಥಿಯ ವಾದ ಆಲಿಸಿದ ಸರ್ವೋಚ್ಛ ನ್ಯಾಯಾಲಯವು ಇದೀಗ ದೇಶದಾದ್ಯಂತ ಇಡಬ್ಲ್ಯೂಎಸ್ ವರ್ಗದ ವಿದ್ಯಾರ್ಥಿಗಳಿಗೆ ಆಶಾಕಿರಣವಾದ ಐತಿಹಾಸಿಕ ತೀರ್ಪನ್ನ ಪ್ರಕಟಿಸಿದೆ.

ಹೌದು, ಇಡಬ್ಲ್ಯೂಎಸ್ (EWS) ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಳಲ್ಲೂ ತಾತ್ಕಾಲಿಕ ಎಂಬಿಬಿಎಸ್ ಪ್ರವೇಶಕ್ಕೆ ಅವಕಾಶ ನೀಡುವಂತೆ ತೀರ್ಪು ಹೊರಡಿಸಿದೆ. ಮಧ್ಯಪ್ರದೇಶದ ಜಬಲ್ಪುರದ 19 ವರ್ಷದ ಅಥರ್ವ ಚತುರ್ವೇದಿ ಎಂಬ ದ್ವಿತೀಯ ಪಿಯುಸಿಯ ವಿದ್ಯಾರ್ಥಿ ಸುಪ್ರೀಂಕೋರ್ಟ್ ನಲ್ಲಿ ವಾದ ಮಾಡಿ ಕಾನೂನು ಜಯ ಗಳಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಸುಪ್ರೀಮಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠ ವಿಚಾರಣೆ ಮುಗಿಸಿ ಎದ್ದೇಳಲು ಸಜ್ಜಾಗುತ್ತಿದ್ದ ವೇಳೆ ಇನ್ನೂ ಹತ್ತು ನಿಮಿಷ ನೀಡಿ ಎಂದು ವಿನಂತಿಸಿದ ಧ್ವನಿಯೊಂದು ಕೇಳಿಬಂತು. ಈ ಧ್ವನಿ ಯಾರದ್ದೋ ಹಿರಿಯ ವಕೀಲರದ್ದಲ್ಲ, ಸಂವಿಧಾನ ತಜ್ಞರದ್ದಲ್ಲ. ವಿದ್ಯಾರ್ಥಿ ಅಥರ್ವನದ್ದು.

ವೈದ್ಯನಾಗಬೇಕು ಎಂಬ ಕನಸಿಗಾಗಿ ಆತ ನ್ಯಾಯಾಲಯದ ಮುಂದೆ ನಿಂತಿದ್ದ ಅಥರ್ವ ಹತ್ತು ನಿಮಿಷಗಳ ಕಾಲ ವಾದ ಮಾಡಿದ್ದು ಹತ್ತು ನಿಮಿಷಗಳ ನಂತರ, ತೀರ್ಪು ಅವರ ಪರವಾಗಿ ಬಂದಿತು. ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ತನ್ನ ಅಸಾಧಾರಣ ಅಧಿಕಾರವನ್ನು ಬಳಸಿಕೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠವು, ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ಮಧ್ಯಪ್ರದೇಶ ಸರ್ಕಾರಕ್ಕೆ ಆರ್ಥಿಕವಾಗಿ ದುರ್ಬಲ ವರ್ಗದ ನೀಟ್ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ತಾತ್ಕಾಲಿಕ ಎಂಬಿಬಿಎಸ್ ಪ್ರವೇಶವನ್ನು ನೀಡುವಂತೆ ನಿರ್ದೇಶನ ನೀಡಿತು.

ಸಾಮಾನ್ಯ ವಿದ್ಯಾರ್ಥಿಯಾಗಿದ್ದ ಅಥರ್ವ ಚತುರ್ವೇದಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಎರಡರಲ್ಲೂ ಉತ್ತೀರ್ಣನಾಗಿದ್ದರೂ, ಆತ ಜೀವಶಾಸ್ತ್ರವನ್ನು ಆರಿಸಿಕೊಂಡರು. ನೀಟ್ ಪರೀಕ್ಷೆಯಲ್ಲಿ ಒಂದಲ್ಲ, ಎರಡು ಬಾರಿ ಉತ್ತೀರ್ಣರಾದರು. ಅವರು 530 ಅಂಕಗಳನ್ನು ಗಳಿಸಿದರು. ಆದರೆ ಇಡಬ್ಲ್ಯೂಎಸ್ ಕೋಟಾದಡಿಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಎಂಬಿಬಿಎಸ್ ಸೀಟು ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಏಕೆಂದರೆ ರಾಜ್ಯವು ಅಲ್ಲಿ ಮೀಸಲಾತಿಯನ್ನು ವಿಸ್ತರಿಸುವ ನೀತಿಯನ್ನು ಜಾರಿಗೆ ತಂದಿರಲಿಲ್ಲ.

ಇದೀಗ ಸುಪ್ರೀಂಕೋರ್ಟ್ ವಿದ್ಯಾರ್ಥಿಯ ವಾದ ಆಲಿಸಿ ಇಡಬ್ಲ್ಯೂಎಸ್ ಮೀಸಲಾತಿ ಸಂವಿಧಾನಬದ್ಧವಾಗಿದೆ. ಸರ್ಕಾರಿ ಕಾಲೇಜುಗಳಿಗೆ ಮಾತ್ರ ಸೀಮಿತವಾಗದೆ, ನೀತಿ ಜಾರಿಗೆ ಸಂಬಂಧಿಸಿದ ಅನಿಶ್ಚಿತತೆ ವಿದ್ಯಾರ್ಥಿಗಳ ಭವಿಷ್ಯವನ್ನು ಹಾನಿಗೊಳಿಸಬಾರದು. ಅರ್ಹತೆ ಪಡೆದ ವಿದ್ಯಾರ್ಥಿಗೆ ಆಡಳಿತಾತ್ಮಕ ಲೋಪದಿಂದ ಅವಕಾಶ ತಪ್ಪಬಾರದು ಎಂದು ಹೇಳಿದೆ.

ವಕೀಲರಾಗಿರುವ ಅಥರ್ವನ ತಂದೆ ಮನೋಜ್ ಚತುರ್ವೇದಿ ಅವರು ಎಂದಿಗೂ ಸುಪ್ರೀಂ ಕೋರ್ಟ್ ನಲ್ಲಿ ಪ್ರಾಕ್ಟೀಸ್ ಮಾಡಿರಲಿಲ್ಲ. ನನ್ನ ಮಗ ಕಾನೂನು ಓದಿಲ್ಲ. ಆದರೆ, ಅವನು ಎಲ್ಲವನ್ನೂ ಕಲಿತಿದ್ದ. ಎಷ್ಟು ಮಾತನಾಡಬೇಕು, ಯಾವಾಗ ಮೌನವಾಗಿರಬೇಕು ಎಂಬುದು. ವಾಸ್ತವವಾಗಿ, ಅರ್ಜಿಗಳನ್ನು ಸ್ಕ್ಯಾನ್ ಮಾಡುವುದು ಮತ್ತು ಅಪ್ ಲೋಡ್ ಮಾಡುವುದು ಹೇಗೆ ಎಂದು ಅವನು ನನಗೆ ಕಲಿಸಿದ್ದ ಎಂದು ಅವರು ಹೇಳಿದರು.

ಅಂದ ಹಾಗೆ, ಈ ತೀರ್ಪು ಕೇವಲ ಅಥರ್ವನಿಗಷ್ಟೇ ಅಲ್ಲ, ದೇಶದಾದ್ಯಂತ ಇಡಬ್ಲ್ಯೂಎಸ್ ವರ್ಗದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದೆ. ಇಡಬ್ಲ್ಯೂಎಸ್ ಎಂದರೆ, ಭಾರತದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಸಾಮಾನ್ಯ ವರ್ಗದ ಕುಟುಂಬಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 10 ಮೀಸಲಾತಿ ನೀಡಲು ಈ ವರ್ಗವನ್ನು ಪರಿಚಯಿಸಲಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.