ಸ್ತನ ಹಿಡಿಯುವುದು, ಲಾಡಿ ಬಿಚ್ಚುವುದು ಅತ್ಯಾಚಾರ ಯತ್ನವಲ್ಲವೆಂಬ ವಿವಾದಾತ್ಮಕ ತೀರ್ಪು ರದ್ದುಪಡಿಸಿದ ಸುಪ್ರೀಂ
ನವದೆಹಲಿ: ಹೆಣ್ಣು ಮಕ್ಕಳ ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರ ಯತ್ನವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ನೀಡಿದ್ದ ವಿವಾದಾತ್ಮಕ ತೀರ್ಪನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಾಲ್ಯ ಬಾಗ್ಚಿ ಹಾಗೂ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು, ಅಲಹಾಬಾದ್ ಹೈಕೋರ್ಟ್ ನೀಡಿದ್ದ ಈ ವಿವಾದಿತ ತೀರ್ಪನ್ನು ರದ್ದುಪಡಿಸಿದ್ದು, ಹೈಕೋರ್ಟ್ನ ನಿಲುವನ್ನು ತೀವ್ರವಾಗಿ ಖಂಡಿಸಿತು. ಇದು ‘ಅಮಾನವೀಯ ಮತ್ತು ಸಂವೇದನಾ ರಹಿತ’ ತೀರ್ಪು ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು, ಸ್ತನಗಳನ್ನು ಹಿಡಿಯುವುದು ಮತ್ತು ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರದ ಪ್ರಯತ್ನವೇ ಹೊರತು, ಕೇವಲ ಸಿದ್ಧತೆಯಲ್ಲ ಎಂದು ಸ್ಪಷ್ಟಪಡಿಸಿದೆ.
ಲೈಂಗಿಕ ಅಪರಾಧ ಪ್ರಕರಣಗಳ ನ್ಯಾಯದಾನವು ಕೇವಲ ಕಾನೂನಿನ ಚೌಕಟ್ಟಿಗೆ ಸೀಮಿತವಾಗಿರದೆ, ಅದು ಸಂವೇದನಾಶೀಲತೆ ಮತ್ತು ಸಹಾನುಭೂತಿಯಿಂದ ಕೂಡಿರಬೇಕು. ನ್ಯಾಯಾಲಯಗಳು ದೂರುದಾರರ ಅಥವಾ ಸಂತ್ರಸ್ತರ ದುರ್ಬಲತೆ ಮತ್ತು ಸೂಕ್ಷ್ಮತೆಗಳ ಬಗ್ಗೆ ‘ಅಸಡ್ಡೆ’ ತೋರಿದರೆ ಅಥವಾ ಅವುಗಳನ್ನು ಪರಿಗಣನೆಗೆ ತೆಗೆದುಕೊಳ್ಳದಿದ್ದರೆ, ಅಂತಹ ಸಂದರ್ಭಗಳಲ್ಲಿ ‘ಸಂಪೂರ್ಣ ನ್ಯಾಯ’ ನೀಡಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿತು.
ಕಾನೂನು ಪ್ರಕ್ರಿಯೆಯ ಪಾಲ್ಗೊಳ್ಳುವವರಾಗಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ಸಾಮಾನ್ಯ ನಾಗರಿಕರು ಎದುರಿಸಬೇಕಾದ ಕಾರ್ಯವಿಧಾನಗಳನ್ನು ರೂಪಿಸುವುದರಿಂದ ಹಿಡಿದು, ಯಾವುದೇ ಪ್ರಕರಣದಲ್ಲಿ ನೀಡುವ ಅಂತಿಮ ತೀರ್ಪಿನವರೆಗೆ ಕರುಣೆ, ಮಾನವೀಯತೆ ಮತ್ತು ತಿಳುವಳಿಕೆಯ ಮೌಲ್ಯಗಳನ್ನು ಪ್ರತಿಬಿಂಬಿಸಬೇಕು. ಒಂದು ನ್ಯಾಯ ಸಮ್ಮತ ಮತ್ತು ಪರಿಣಾಮಕಾರಿ ನ್ಯಾಯದಾನ ವ್ಯವಸ್ಥೆಯನ್ನು ನಿರ್ಮಿಸಲು ಇವು ಅತ್ಯಗತ್ಯ” ಎಂದು ನ್ಯಾಯಪೀಠ ತಿಳಿಸಿದೆ. “ನ್ಯಾಯಾಂಗದ ಸದಸ್ಯರ ಧೋರಣೆಯಲ್ಲಿ ಮತ್ತು ಅದರ ಜೊತೆಗಿನ ನ್ಯಾಯಾಲಯದ ಕಾರ್ಯವಿಧಾನಗಳಲ್ಲಿ ಅಂತರ್ಗತ ಸಂವೇದನಾಶೀಲತೆ ಮತ್ತು ವಿವೇಚನೆಯನ್ನು ಬೆಳೆಸಲು ಹಾಗೂ ಪೋಷಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇಬ್ಬರು ಆರೋಪಿಗಳ ವಿರುದ್ಧದ ಸಮನ್ಸ್ ಆದೇಶವನ್ನು ಮಾರ್ಪಡಿಸುವಾಗ ಅಲಹಾಬಾದ್ ಹೈಕೋರ್ಟ್ ಮಾರ್ಚ್ 17, 2025ರಂದು ವಿವಾದಾತ್ಮಕ ಅವಲೋಕನಗಳನ್ನು ಮಾಡಿ ತೀರ್ಪು ನೀಡಿತ್ತು. ವಿಚಾರಣಾ ನ್ಯಾಯಾಲಯವು ಹೊರಿಸಿದ್ದ ‘ಅತ್ಯಾಚಾರದ ಪ್ರಯತ್ನ’ ಎಂಬ ಗಂಭೀರ ಆರೋಪವನ್ನು ರದ್ದುಗೊಳಿಸಿದ್ದ ಅಲಹಾಬಾದ್ ಹೈಕೋರ್ಟ್, ಆರೋಪಿಗಳು ಮಗುವಿನ ಸ್ತನಗಳನ್ನು ಹಿಡಿದಿದ್ದು ಮತ್ತು ಪೈಜಾಮಾದ ಲಾಡಿ ಬಿಚ್ಚಿದ್ದು ಕೇವಲ ‘ಅತ್ಯಾಚಾರದ ಸಿದ್ಧತೆ’, ಅದು ‘ಅತ್ಯಾಚಾರದ ಯತ್ನ’ವಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಹೈಕೋರ್ಟ್ನ ಈ ಅವಲೋಕನದ ಕುರಿತು ದೇಶದಾದ್ಯಂತ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ನಂತರ, ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿತ್ತು. ಮಾರ್ಚ್ 26, 2025ರಂದು ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತ್ತು.
ಪ್ರಾಸಿಕ್ಯೂಷನ್ ಪ್ರಕಾರ, ಆರೋಪಿಗಳಾದ ಪವನ್ ಮತ್ತು ಆಕಾಶ್ ಮೊದಲು 11 ವರ್ಷದ ಬಾಲಕಿಯ ಸ್ತನಗಳನ್ನು ಹಿಡಿದಿದ್ದರು. ನಂತರ, ಅವರಲ್ಲಿ ಒಬ್ಬ ಆಕೆಯ ಪೈಜಾಮದ ದಾರವನ್ನು ಎಳೆದು ಚರಂಡಿಯ ಕಡೆಗೆ ಅಥವಾ ಮೋರಿಯ ಅಡಿಗೆ ಎಳೆಯಲು ಪ್ರಯತ್ನಿಸಿದ್ದ. ನಂತರ ಇಬ್ಬರೂ ಬಾಲಕಿ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದರು. ಈ ವೇಳೆ ದಾರಿ ಹೋಕರು ಅಲ್ಲಿಗೆ ಬಂದಿದ್ದರಿಂದ ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದರು. ಇದರಿಂದ ಬಾಲಕಿಯು ಹೆಚ್ಚಿನ ಅಪಾಯದಿಂದ ಪಾರಾಗಿದ್ದಳು.
ಪೋಕ್ಸೊ ಕಾಯ್ದೆಯಡಿ ಇದನ್ನು ಅತ್ಯಾಚಾರದ ಯತ್ನ ಅಥವಾ ಪೆನೆಟ್ರೇಟಿವ್ ಲೈಂಗಿಕ ದೌರ್ಜನ್ಯದ ಯತ್ನ ಎಂದು ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯವು, ಪೋಕ್ಸೊ ಕಾಯ್ದೆಯ ಸೆಕ್ಷನ್ 18ರ ಜೊತೆಗೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಕ್ರಮ ಜರುಗಿಸಿತ್ತು. ಈ ನಿಬಂಧನೆಗಳ ಅಡಿಯಲ್ಲಿ ಆರೋಪಿಗಳ ವಿರುದ್ದ ಸಮನ್ಸ್ ಆದೇಶವನ್ನು ಹೊರಡಿಸಿತ್ತು.
ಆದರೆ ಅಲಹಾಬಾದ್ ಹೈಕೋರ್ಟ್ ಇಬ್ಬರು ಆರೋಪಿಗಳ ಮೇಲಿನ ಆರೋಪಗಳನ್ನು ಮಾರ್ಪಡಿಸಿ, ಅವರನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354-B (ಬಟ್ಟೆ ಕಳಚುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲದ ಬಳಕೆ) ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 9/10 (ತೀವ್ರತರದ ಲೈಂಗಿಕ ದೌರ್ಜನ್ಯ) ಎಂಬ ಕಡಿಮೆ ತೀವ್ರತೆಯ ಸೆಕ್ಷನ್ಗಳ ಅಡಿಯಲ್ಲಿ ವಿಚಾರಣೆ ನಡೆಸುವಂತೆ ನಿರ್ದೇಶಿಸಿತ್ತು.
ವಿಚಾರಣಾ ನ್ಯಾಯಾಲಯವು ಹೊರಿಸಿದ್ದ ‘ಅತ್ಯಾಚಾರದ ಪ್ರಯತ್ನ’ ಎಂಬ ಗಂಭೀರ ಆರೋಪವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಆರೋಪಿಗಳು ಮಗುವಿನ ಸ್ತನಗಳನ್ನು ಹಿಡಿದಿದ್ದು ಮತ್ತು ಪೈಜಾಮಾದ ಲಾಡಿ ಬಿಚ್ಚಿದ್ದು ಕೇವಲ ‘ಅತ್ಯಾಚಾರದ ಸಿದ್ಧತೆ’, ಅದು ‘ಅತ್ಯಾಚಾರದ ಯತ್ನ’ವಲ್ಲ ಎಂದು ಅಭಿಪ್ರಾಯಪಟ್ಟಿತ್ತು.
“ಆರೋಪಿಗಳಾದ ಪವನ್ ಮತ್ತು ಆಕಾಶ್ ಸಂತ್ರಸ್ತೆಯ ಸ್ತನಗಳನ್ನು ಹಿಡಿದಿದ್ದರು. ಆಕಾಶ್ ಸಂತ್ರಸ್ತೆಯ ಪೈಜಾಮವನ್ನು ಕೆಳಕ್ಕೆ ಎಳೆಯಲು ಯತ್ನಿಸಿದ್ದ. ಅದಕ್ಕಾಗಿ ಅದರ ಲಾಡಿ ಬಿಚ್ಚಿದ್ದ. ಬಾಲಕಿಯನ್ನು ಚರಂಡಿಗೆ ಎಳೆಯಲು ಯತ್ನಿಸಿದ್ದ ಎಂಬ ಆರೋಪಗಳಿವೆ. ಆದರೆ, ಸಾಕ್ಷಿಗಳು (ದಾರಿ ಹೋಕರು) ಮಧ್ಯಪ್ರವೇಶಿಸಿದ ಕಾರಣ ಅವರು ಸಂತ್ರಸ್ತೆಯನ್ನು ಬಿಟ್ಟು ಸ್ಥಳದಿಂದ ಓಡಿ ಹೋಗಿದ್ದಾರೆ. ಈ ಸಂಗತಿಗಳು ಆರೋಪಿಗಳು ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡಲು ನಿರ್ಧರಿಸಿದ್ದರು ಎಂದು ತೀರ್ಮಾನಿಸಲು ಸಾಕಾಗುವುದಿಲ್ಲ, ಏಕೆಂದರೆ ಈ ಅಂಶಗಳನ್ನು ಹೊರತುಪಡಿಸಿ ಅತ್ಯಾಚಾರ ಮಾಡುವ ಅವರ ಉದ್ದೇಶವನ್ನು ಸಾಬೀತುಪಡಿಸಲು ಬೇರೆ ಯಾವುದೇ ಕೃತ್ಯಗಳು ಕಂಡುಬಂದಿಲ್ಲ” ಎಂದು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ ಮಿಶ್ರಾ ಅಭಿಪ್ರಾಯಪಟ್ಟಿದ್ದರು.
“ಆರೋಪಿಗಳು ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗುವ ದೃಢ ಉದ್ದೇಶ ಹೊಂದಿದ್ದರು ಎಂದು ಸೂಚಿಸಲು ಯಾವುದೇ ದಾಖಲೆಗಳು ಲಭ್ಯವಿಲ್ಲ” ಎಂದು ನ್ಯಾಯಮೂರ್ತಿ ಮಿಶ್ರಾ ಹೇಳಿದ್ದರು. ಅಷ್ಟೇ ಅಲ್ಲದೆ, “ಆರೋಪಿ ಆಕಾಶ್ ಅಪ್ರಾಪ್ತ ಸಂತ್ರಸ್ತೆಯ ಪೈಜಾಮದ ಲಾಡಿ ಬಿಚ್ಚಿ ಅದನ್ನು ಎಳೆಯಲು ಸಡಿಲಗೊಳಿಸಿಕೊಂಡಿದ್ದ ಎನ್ನಲಾಗಿದೆ. ಈ ಬಗ್ಗೆ ದೂರಿನಲ್ಲಾಗಲಿ ಅಥವಾ ಸಾಕ್ಷಿಗಳ ಹೇಳಿಕೆಯಲ್ಲಾಗಲಿ ಯಾವುದೇ ಆರೋಪವಿಲ್ಲ” ಎಂದು ಹೇಳಿದ್ದರು.
ಈ ಸಂಬಂಧ ಸ್ವಯಂ ಪ್ರೇರಿತ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠವು ಇದೀಗ ಅಲಹಾಬಾದ್ ಹೈಕೋರ್ಟ್ ನೀಡಿದ್ದ ವಿವಾದಾತ್ಮಕ ತೀರ್ಪನ್ನು ರದ್ದುಪಡಿಸಿ ತೀರ್ಪು ನೀಡಿದ್ದು, ಲೈಂಗಿಕ ದೌರ್ಜನ್ಯ ಮತ್ತು ಇತರ ಸೂಕ್ಷ್ಮ ಪ್ರಕರಣಗಳ ಸಂದರ್ಭದಲ್ಲಿ ‘ನ್ಯಾಯಾಧೀಶರು ಮತ್ತು ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಸಂವೇದನಾಶೀಲತೆ ಹಾಗೂ ಸಹಾನುಭೂತಿಯನ್ನು ಬೆಳೆಸುವ ಕುರಿತು ಮಾರ್ಗಸೂಚಿಗಳನ್ನು ಸಿದ್ಧಪಡಿಸಲು’ ತಜ್ಞರ ಸಮಿತಿಯನ್ನು ರಚಿಸುವಂತೆ ಭೋಪಾಲ್ನಲ್ಲಿರುವ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ (ಎನ್ಜೆಎ) ಗೆ ಸುಪ್ರೀಂ ಕೋರ್ಟ್ ವಿನಂತಿಸಿದೆ.
ಅಲ್ಲದೆ, ಲೈಂಗಿಕ ಅಪರಾಧಗಳು ಮತ್ತು ಅದೇ ರೀತಿಯ ಸೂಕ್ಷ್ಮ ಘಟನೆಗಳಲ್ಲಿ ಭಾಗಿಯಾದ ಅಸಹಾಯಕ ಸಂತ್ರಸ್ತರು, ದೂರುದಾರರು ಮತ್ತು ಸಾಕ್ಷಿಗಳ ಪ್ರಕರಣಗಳನ್ನು ನಿರ್ವಹಿಸುವಾಗ, ‘ನ್ಯಾಯಾಧೀಶರು ಮತ್ತು ನ್ಯಾಯಾಂಗ ವ್ಯವಸ್ಥೆಯು ಅನುಸರಿಸಬೇಕಾದ ಧೋರಣೆಯ ಕುರಿತಾದ ಕರಡು ಮಾರ್ಗಸೂಚಿಗಳನ್ನು’ ಸಿದ್ಧಪಡಿಸುವಂತೆಯೂ ಸಮಿತಿಗೆ ಸೂಚಿಸಿದೆ. ಅಲ್ಲದೆ, ಸಮಿತಿಯು ತನ್ನ ವರದಿಯನ್ನು “ಆದ್ಯತೆಯ ಮೇರೆಗೆ ಮೂರು ತಿಂಗಳ ಒಳಗಾಗಿ” ಸಲ್ಲಿಸಬೇಕು ಎಂದು ಸೂಚಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
