1990ರಲ್ಲಿ ಲಂಚ ಪಡೆದಿದ್ದ ಕೇಸ್: ಮಾಜಿ ಅಬಕಾರಿ ಕಾನ್ಸ್ ಟೆಬಲ್ ಶಿಕ್ಷೆ ಕಡಿತಗೊಳಿಸಿದ ಸುಪ್ರೀಂ
ನವದೆಹಲಿ: 1990 ರಲ್ಲಿ ಅಬಕಾರಿ ದಾಳಿಯ ಸಂದರ್ಭದಲ್ಲಿ 500 ರೂಪಾಯಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಬಕಾರಿ ಕಾನ್ ಸ್ಟೆಬಲ್ ಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್ ಆದರೆ ಶಿಕ್ಷೆಯ ಪ್ರಮಾಣವನ್ನ ಕಡಿತಗೊಳಿಸಿ ತೀರ್ಪು ನೀಡಿದೆ.
ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾದ ಲಂಚ ಪ್ರಕರಣದಲ್ಲಿ ಉತ್ತರಾಖಂಡದ ಮಾಜಿ ಅಬಕಾರಿ ಕಾನ್ ಸ್ಟೆಬಲ್ ರಾಜ್ ಬಹದ್ದೂರ್ ಸಿಂಗ್ ತಮಗೆ ವಿಧಿಸಲಾದ ಶಿಕ್ಷೆಯನ್ನು ರದ್ದುಪಡಿಸುವಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಂಕಜ್ ಮಿಥಲ್ ಮತ್ತು ಪ್ರಸನ್ನ ವರಾಳೆ ಅವರಿದ್ದ ಪೀಠ, ಅರ್ಜಿದಾರರ ಅಪರಾಧಿಯ ವಯಸ್ಸು ಪರಿಗಣಿಸಿ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಿದೆ. ಕಸ್ಟಡಿ ಸಮಯವನ್ನು ಶಿಕ್ಷೆಯಾಗಿ ಪರಿಗಣಿಸುವಂತೆ ಸೂಚಿಸಿದೆ.
ಏನಿದು ಪ್ರಕರಣ
1990 ರ ಜೂನ್ 16 ರಂದು ನಡೆದ ಪ್ರಕರಣ ಇದಾಗಿದೆ. ಉಧಮ್ ಸಿಂಗ್ ನಗರ ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ಆರೋಪಿ ರಾಜ್ ಬಹದ್ದೂರ್ ಸಿಂಗ್ ಕಾನ್ ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ನಿಷೇಧಿತ ಮದ್ಯ ತಯಾರಿಕೆಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಕಾಶ್ಮೀರ್ ಸಿಂಗ್ ನೀಡಿದ ದೂರಿನ ಅನ್ವಯ ಪ್ರಾಸಿಕ್ಯೂಷನ್ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು.
ಪ್ರಾಸಿಕ್ಯೂಷನ್ ಪ್ರಕಾರ, 1990 ರ ಜೂನ್ 16 ರಂದು ಗ್ರಾಮದಲ್ಲಿ ದಾಳಿ ನಡೆಸಿದ ವೇಳೆ ಆರೋಪಿಗಳು ದೂರುದಾರರಿಂದ ಕೆಲವು ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿ, ಅಕ್ರಮ ಹಣವಾಗಿ ರೂ. 500 ಕ್ಕೆ ಬೇಡಿಕೆ ಇಟ್ಟರು. ಮೊತ್ತವನ್ನು ಪಾವತಿಸದಿದ್ದರೆ, ನ್ಯಾಯಾಲಯಕ್ಕೆ ಚಲನ್ ಕಳುಹಿಸುವುದಾಗಿ ಬೆದರಿಕೆಯನ್ನೂ ಹಾಕಿದ್ದರು. 1990 ರ ಜೂನ್ 18 ರಂದು ಪ್ರಕರಣದ ಕುರಿತು ಇಲಾಖೆಯ ವಿಜಿಲೆನ್ಸ್ ವಿಭಾಗಕ್ಕೆ ದೂರು ನೀಡಲಾಗಿತ್ತು.
ದೂರಿನ ಮೇರೆಗೆ ಖಾಸಗಿ ರೆಸ್ಟೋರೆಂಟ್ನಲ್ಲಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಲಾಗಿತ್ತು. ದೂರುದಾರರಿಗೆ ಫಿನಾಲ್ಮಲೀನ್ ಬೆರೆಸಿದ ತಲಾ 100 ರೂ.ಗಳ ಐದು ಕರೆನ್ಸಿ ” ನೀಡಿ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಸೆರೆಹಿಡಿಯಲಾಗಿತ್ತು. ತನಿಖೆಯ ನಂತರ ಭ್ರಷ್ಟಾಚಾರ ತಡೆ ಕಾಯ್ಕೆಯ ಸೆಕ್ಷನ್ 7 ಮತ್ತು 13(1) (ಡಿ) ಜೊತೆಗೆ ಸೆಕ್ಷನ್ 13(2) ರ ಅಡಿಯಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಲಾಗಿತ್ತು.
2006 ರಲ್ಲಿ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿ, ಕಾಯ್ದೆಯ ಸೆಕ್ಷನ್ 7 ರ ಅಡಿಯಲ್ಲಿ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಸೆಕ್ಷನ್ 13 (2) ರ ಅಡಿಯಲ್ಲಿ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಉತ್ತರಾಖಂಡ ಹೈಕೋರ್ಟ್ 2012 ರಲ್ಲಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು.
ಇದನ್ನು ಪ್ರಶ್ನಿಸಿ ರಾಜ್ ಬಹದ್ದೂರ್ ಸಿಂಗ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್ ಮುಂದೆ ವೈಯಕ್ತಿಕ ದ್ವೇಷದಿಂದಾಗಿ ಮತ್ತು ತಮ್ಮ ಅಕ್ರಮ ಮದ್ಯ ವ್ಯವಹಾರಕ್ಕಾಗಿ ಕ್ರಮ ಕೈಗೊಳ್ಳುವುದನ್ನು ತಪ್ಪಿಸಲು ತಮ್ಮನ್ನು ತಪ್ಪಾಗಿ ಆರೋಪಿಸಿದ್ದಾರೆ ಎಂದು ವಾದ ಮಂಡಿಸಲಾಗಿತ್ತು.
ಸಾಕ್ಷ್ಯಗಳಲ್ಲಿ ವಿರೋಧಾಭಾಸಗಳಿವೆ ಹಾಗೂ ದೂರುದಾರರು ಮತ್ತು ಪೊಲೀಸರು ಬೇಕಂತಲೇ ಬಲೆ ಹೆಣೆದಿದ್ದಾರೆ ಎಂದೂ ಪ್ರತಿ ಆರೋಪವನ್ನು ಮಾಡಲಾಗಿತ್ತು. ವಾದ ಪ್ರತಿವಾದವನ್ನು ಆಲಿಸಿರುವ ಸುಪ್ರೀಂ ಕೋರ್ಟ್ ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿದ್ದ ಉತ್ತರಾಖಂಡ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದು ಅಪರಾಧಿಯ ಶಿಕ್ಷೆಯ ಪ್ರಮಾಣ ಕಡಿತಗೊಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
