07/03/2026

Law Guide Kannada

Online Guide

ನ್ಯಾಯಾಧೀಶರ ವಿರುದ್ದ ಪುತ್ರಿ ಮೇಲೆಯೇ ಲೈಂಗಿಕ ದೌರ್ಜನ್ಯ ಆರೋಪ: ಪ್ರಕರಣ ರದ್ದತಿಗೆ ಸುಪ್ರೀಂ ನಕಾರ

ನವದೆಹಲಿ: ಸ್ವಂತ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿರುವ ನ್ಯಾಯಾಧೀಶರೊಬ್ಬರ ವಿರುದ್ಧ ದಾಖಲಾಗಿರುವ ಪ್ರಕರಣವನ್ನ ರದ್ದುಗೊಳಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್ ಪ್ರಕರಣ “ಆಘಾತಕಾರಿ” ಎಂದು ಕಳವಳ ವ್ಯಕ್ತಪಡಿಸಿದೆ.

ಬಾಂಬೆ ಹೈಕೋರ್ಟ್ ತನ್ನ ವಿರುದ್ಧದ ಆರೋಪಗಳನ್ನು ರದ್ದುಗೊಳಿಸಲು ನಿರಾಕರಿಸಿದ ಆದೇಶ ಪ್ರಶ್ನಿಸಿ ನ್ಯಾಯಾಧೀಶರೊಬ್ಬರು ಸಲ್ಲಿಸಿದ್ದ ವಿಶೇಷ ಅನುಮತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಮನಮೋಹನ್ ಅವರಿದ್ದ ಪೀಠವು ನ್ಯಾಯಾಧೀಶರ ವಿರುದ್ದದ ಕ್ರಿಮಿನಲ್ ಮೊಕದ್ದಮೆ ರದ್ದುಪಡಿಸಲು ನಿರಾಕರಿಸಿದೆ.

ಸ್ವಂತ ಪುತ್ರಿಯೇ ತಂದೆ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ನ್ಯಾಯಾಧೀಶರೂ ಆಗಿರುವ ತಂದೆಯ ವಿರುದ್ದದ ಕ್ರಿಮಿನಲ್ ಮೊಕದ್ದಮೆ ರದ್ದುಪಡಿಸಲು ನಿರಾಕರಿಸಿ ನ್ಯಾಯ ಪೀಠ ಈ ತೀರ್ಪು ಪ್ರಕಟಿಸಿದೆ.

ನ್ಯಾಯಾಧೀಶರ ಮಗಳು ಮಾಡಿರುವ ಆರೋಪಗಳು ಆಘಾತಕಾರಿಯಾಗಿದ್ದು, ಸ್ವತಃ ತಂದೆಯೇ ದೌರ್ಜನ್ಯ ಎಸಗಿರುವುದು ಗಂಭೀರ ಪ್ರಕರಣ ಎಂದು ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿದೆ. ಅಲ್ಲದೆ, ಕ್ರಿಮಿನಲ್ ವಿಚಾರಣೆಯಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿದೆ.

ನ್ಯಾಯಾಧೀಶರ ಪರ ವಾದ ಮಂಡಿಸಿದ ವಕೀಲರು, ಲೈಂಗಿಕ ದೌರ್ಜನ್ಯ ಆರೋಪದ ಈ ವಿಚಾರಣೆಯಿಂದ ಅವರ ವೃತ್ತಿ ಜೀವನ ಮತ್ತು ಬದುಕು ಹಾಳಾಗಿದೆ. ಪತ್ನಿಯೊಂದಿಗಿನ ದೀರ್ಘ ಕಾಲದ ವೈವಾಹಿಕ ವ್ಯಾಜ್ಯದ ಕಾರಣದಿಂದ ಈ ಆರೋಪ ಕೇಳಿ ಬರುತ್ತಿದೆ. ಇದೊಂದು ಸ್ಪಷ್ಟ ಪ್ರತಿದಾಳಿ. ತನ್ನ ಕಕ್ಷಿದಾರರಾದ ನ್ಯಾಯಾಧೀಶರ ತಂದೆ ಕೂಡ ಆತ್ಮಹತ್ಯೆ ಮಾಡಿಕೊಂಡರು ಎಂದು ವಾದಿಸಿದರು.

ಆದರೆ, ನ್ಯಾಯಧೀಶರ ಪುತ್ರಿ ತನ್ನ ಸ್ವಂತ ತಂದೆ ಮೇಲೆ ಮಾಡಿರುವ ಆರೋಪಗಳು ಗಂಭೀರವಾಗಿವೆ. ಹಾಗಾಗಿ, ಈ ಕ್ರಿಮಿನಲ್ ವಿಚಾರಣೆಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್ ನ್ಯಾಯಪೀಠವು, ಪುತ್ರ(ನ್ಯಾಯಾಧೀಶರನ) ಕೃತ್ಯದಿಂದ ಬೇಸತ್ತು ತಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದೂ ಅಭಿಪ್ರಾಯ ವ್ಯಕ್ತಪಡಿಸಿದೆ.

ಹಾಗೆಯೇ ವಾದ ಮುಂದುವರೆಸಿದ ನ್ಯಾಯಾಧೀಶರ ಪರ ವಕೀಲರು, ಮಹಾರಾಷ್ಟ್ರದ ಭಂಡಾರದಲ್ಲಿ ಜನವರಿ 21, 2019ರಂದು ಎಫ್ಐಆರ್ ದಾಖಲಾಗಿತ್ತು. ಆದರೆ, ಮೇ 2014 ಮತ್ತು 2018ರ ನಡುವೆ ಈ ಆರೋಪ ಮಾಡಲಾಗಿದೆ ಎಂದು ಹೇಳಿದರು.

ಪ್ರಕರಣದ ತ್ವರಿತ ವಿಚಾರಣೆ ನಡೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತು. ಈ ತೀರ್ಪಿನಿಂದಾಗಿ, ನ್ಯಾಯಾಧೀಶರು ಪೋಕ್ಸ್ ನ್ಯಾಯಾಲಯದಲ್ಲಿ ಆರೋಪಿಯಂತೆ ವಿಚಾರಣೆ ಎದುರಿಸಬೇಕಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.