ಆರುಂಧತಿ ರಾಯ್ ಅವರ ಪುಸ್ತಕ ಮಾರಾಟ, ಪ್ರಸಾರ ನಿಷೇಧಕ್ಕೆ ಸುಪ್ರೀಂ ನಕಾರ: ಅರ್ಜಿ ವಜಾ
ನವದೆಹಲಿ: ಪ್ರಸಿದ್ಧ ಲೇಖಕಿ ಆರುಂಧತಿ ರಾಯ್ ಅವರ ‘ಮದರ್ ಮೇರಿ ಕಮ್ಸ್ ಟು ಮಿ’ ಪುಸ್ತಕದ ಮಾರಾಟ, ಪ್ರಸಾರ ಮತ್ತು ಪ್ರದರ್ಶನವನ್ನು ನಿಷೇಧ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್, ಆರುಂಧತಿ ರಾಯ್ ಅವರು ಪುಸ್ತಕದಲ್ಲಿ ತಂಬಾಕು ಉತ್ಪನ್ನದ ಪ್ರಚಾರ ಮಾಡಿಲ್ಲ ಎಂದು ತಿಳಿಸಿದೆ.
ಲೇಖಕಿ ಆರುಂಧತಿ ರಾಯ್ ಅವರು ತಮ್ಮ ಪುಸ್ತಕದ ಮುಖಪುಟದಲ್ಲಿ ‘ಬೀಡಿ’ ಅಥವಾ ‘ಸಿಗರೇಟ್’ ಸೇದುತ್ತಿರುವ ಚಿತ್ರವನ್ನು ಪ್ರಕಟಿಸಿಕೊಂಡಿದ್ದು ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ರಾಜಸಿಂಹನ್ ಎಂಬುವರು ಕೇರಳ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಜಸಿಂಹನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಈ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ ಮಾಲ್ಯ ಬಾಗ್ಚಿ ಅವರಿದ್ದ ನ್ಯಾಯಪೀಠವು ಈ ಅರ್ಜಿಯನ್ನು ವಜಾಗೊಳಿಸಿದೆ.
ಲೇಖಕಿ ಆರುಂಧತಿ ರಾಯ್ ‘ಸಿಗರೇಟ್ ಬೀಡಿಯನ್ನು ಪ್ರಚಾರ ಮಾಡಿಲ್ಲ. ಅಲ್ಲದೆ ಪುಸ್ತಕದ ಚಿತ್ರವು ನಗರದ ಯಾವುದೇ ಹೋರ್ಡಿಂಗ್ ನಲ್ಲಿ ಇಲ್ಲ. ಪುಸ್ತಕವನ್ನು ತೆಗೆದುಕೊಂಡು ಓದುವವರು ಮಾತ್ರ ಅದನ್ನು ನೋಡುತ್ತಾರೆ’ ಎಂದು ನ್ಯಾಯಪೀಠ ಗಮನಿಸಿತು.
ಈ ಹಿನ್ನೆಲೆಯಲ್ಲಿ ಲೇಖಕರು ಮತ್ತು ಪ್ರಕಾಶಕ ಸಂಸ್ಥೆ ಪೆಂಗ್ವಿನ್ ಹಮಿಶ್ ಹ್ಯಾಮಿಲ್ಟನ್, ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ-2003ರ ಕಲಂ 5 ಅನ್ನು ಉಲ್ಲಂಘಿಸಿಲ್ಲ ಮತ್ತು ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್ ನಿರ್ಧಾರ ಸರಿಯಾಗಿದೆ . ಹೀಗಾಗಿ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸೂಕ್ತ ಕಾರಣವಿಲ್ಲ ಎಂದು ನ್ಯಾಯಪೀಠ ತಿಳಿಸಿತು. ಇದು ಲೇಖಕಿ ಅರುಂಧತಿ ರಾಯ್ ಅವರ ಆತ್ಮಚರಿತ್ರೆಯ ಪುಸ್ತಕವಾಗಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
