19/03/2026

Law Guide Kannada

Online Guide

ಕೆನೆಪದರ ವ್ಯಾಪ್ತಿಗೆ ಆದಾಯವೊಂದೇ ಆಧಾರವಲ್ಲ, ಪೋಷಕರ ಹುದ್ದೆಯೂ ಮುಖ್ಯ – ಸುಪ್ರೀಂಕೋರ್ಟ್

ನವದೆಹಲಿ: ‘ಹಿಂದುಳಿದ ವರ್ಗಗಳ (ಒಬಿಸಿ) ಅಭ್ಯರ್ಥಿಗಳು ಕೆನೆಪದರ ವ್ಯಾಪ್ತಿಯಲ್ಲಿ ಬರುತ್ತಾರೋ ಇಲ್ಲವೋ ಎನ್ನುವುದನ್ನ ತೀರ್ಮಾನಿಸಲು ಅವರ ಪೋಷಕರ ಆದಾಯವೊಂದೇ ಆಧಾರವಲ್ಲ, ಪೋಷಕರ ಹುದ್ದೆಯೂ ಮುಖ್ಯವಾಗುತ್ತದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಪೋಷಕರು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ನೌಕರಿಯಲ್ಲಿದ್ದಾರೆ, ಬ್ಯಾಂಕುಗಳು ಅಥವಾ ಖಾಸಗಿ ವಲಯದ ಉದ್ಯೋಗದಲ್ಲಿದ್ದಾರೆ ಎನ್ನುವ ಕಾರಣಕ್ಕೆ ಹಿಂದುಳಿದ ವರ್ಗಗಳಿಗೆ ಸೇರಿದ ಕೆಲವು ಯುಪಿಎಸ್ಸಿ ಆಕಾಂಕ್ಷಿಗಳನ್ನು ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯವು ಕೆನೆಪದರಕ್ಕೆ ಸೇರಿಸಿ ನೇಮಕಾತಿಯಲ್ಲಿ ಮೀಸಲಾತಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಆಕಾಂಕ್ಷಿಗಳು ದೆಹಲಿ, ಮದ್ರಾಸ್ ಮತ್ತು ಕೇರಳ ಹೈಕೋರ್ಟ್ಗಳ ಮೆಟ್ಟಿಲೇರಿದ್ದರು.

ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯಗಳಲ್ಲಿ ಆಕಾಂಕ್ಷಿಗಳ ಪರವಾಗಿಯೇ ತೀರ್ಪು ಬಂದಿತ್ತು. ಈ ತೀರ್ಪುಗಳನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆರ್. ಮಹಾದೇವನ್ ಅವರ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಿ, ಕೇಂದ್ರದ ಮೇಲ್ಮನವಿಯನ್ನು ವಜಾ ಮಾಡಿತು. ಅಲ್ಲದೆ ‘ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದ ಅಭ್ಯರ್ಥಿಯೊಬ್ಬರು ಕೆನೆಪದರದ ವ್ಯಾಪ್ತಿಯಲ್ಲಿ ಬರುತ್ತಾರೋ ಅಥವಾ ಇಲ್ಲವೋ ಎನ್ನುವುದನ್ನು ಆ ಅಭ್ಯರ್ಥಿಯ ಪೋಷಕರ ಆದಾಯವೊಂದನ್ನೇ ಆಧರಿಸಿ ನಿರ್ಧರಿಸಲು ಸಾಧ್ಯವಿಲ್ಲ. ಪೋಷಕರು ಯಾವ ಹುದ್ದೆಯಲ್ಲಿದ್ದಾರೆ ಎನ್ನುವುದೂ ಮುಖ್ಯವಾಗುತ್ತದೆ’ ಎಂದು ಸ್ಪಷ್ಟಪಡಿಸಿತು.

1993ರ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯದ ಟಿಪ್ಪಣಿಯನ್ನು (ಒಬಿಸಿಗಳಿಗೆ ಮೀಸಲಾತಿ ನೀಡುವ ಬಗ್ಗೆ ಇದ್ದ ಟಿಪ್ಪಣಿ) ಓದಿದರೂ 2004ರ ಅಕ್ಟೋಬರ್ 14ರಂದು ಇದೇ ಸಚಿವಾಲಯ ನೀಡಿದ ಸ್ಪಷ್ಟಿಕರಣ ಪತ್ರವನ್ನು ಓದಿದರೂ ಸಂಬಳದಿಂದ ಬರುವ ಆದಾಯವನ್ನು ಮಾತ್ರವೇ ಆಧಾರವಾಗಿಟ್ಟುಕೊಂಡು ಅಭ್ಯರ್ಥಿಯೊಬ್ಬರನ್ನು ಕೆನೆಪದರದಲ್ಲಿ ಇರಿಸುವುದು ಅಥವಾ ಹೊರಗಿಡುವುದನ್ನು ನಿರ್ಧರಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿತು.

ಸರ್ಕಾರಿ ಉದ್ಯೋಗದಲ್ಲಿ ಸಿಗುವ ಬಡ್ತಿ ಅದರಿಂದ ಏರಿಕೆಯಾಗುವ ಸಂಬಳವು ಜೀವನಮಟ್ಟವನ್ನು ಸುಧಾರಿಸುತ್ತದೆಯಷ್ಟೆ. ಮಂಡಲ್ ಆಯೋಗದ ವರದಿಗೆ ಸಂಬಂಧಿಸಿದ ಇಂದ್ರಾ ಸಾಕ್ಷಿ ಪ್ರಕರಣದ ತೀರ್ಪಿನ ಸಾಂವಿಧಾನಿಕವಾದ ಉದ್ದೇಶವನ್ನೇ ಬುಡಮೇಲು ಮಾಡುವಂತೆ ಸಂಬಳದಿಂದ ಬರುವ ಆದಾಯವೊಂದನ್ನೇ ಕೆನೆಪದರಕ್ಕೆ ಆಧಾರವಾಗಿ ಇಟ್ಟುಕೊಳ್ಳಬಾರದು. ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿ ಇರುವವರನ್ನು ಮತ್ತು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ಉದ್ಯೋಗದಲ್ಲಿ ಇರುವವರನ್ನು ಸರ್ಕಾರಿ ನೌಕರರಿಗೆ ಹೋಲಿಸಿ ನೋಡುವುದು ತಾರತಮ್ಯವಾಗುತ್ತದೆ. ಈ ಮೂಲಕ ಅವರ ಮಕ್ಕಳಿಗೆ ಮೀಸಲಾತಿ ನೀಡಬೇಕೆ ಬೇಡವೇ ಎನ್ನುವುದನ್ನು ನಿರ್ಧರಿಸುವುದು ನ್ಯಾಯಯುತವಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಹಿಂದುಳಿದ ವರ್ಗಗಳಿಗೆ ನೀಡಲಾಗುವ ಮೀಸಲಾತಿ ಸೌಲಭ್ಯವನ್ನು ಇದೇ ಸಮುದಾಯದ ಸಾಮಾಜಿಕವಾಗಿ ಮೇಲುಸ್ತರದಲ್ಲಿದ್ದವರು ಬಳಸಿಕೊಳ್ಳಬಾರದು ಎನ್ನುವ ಉದ್ದೇಶದಿಂದ ಕೆನೆಪದರವನ್ನು ಸೃಷ್ಟಿಸಲಾಗಿದೆ. ಒಂದೇ ಸಮುದಾಯದ ಸಮಾನ ಸ್ಥಾನಮಾನಗಳನ್ನು ಹೊಂದಿದ ಜನರ ಮಧ್ಯೆ ಕೃತಕವಾದ ತಾರತಮ್ಯವನ್ನು ಸೃಷ್ಟಿಸಲು ಕೆನೆಪದರವನ್ನು ಸೃಷ್ಟಿಸಲಾಗಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.