ನ್ಯಾಯವ್ಯಾಪ್ತಿ ಇಲ್ಲ ಎಂದು ಪ್ರಕರಣ ಇತ್ಯರ್ಥಕ್ಕೆ ನಿರಾಕರಿಸಿದ ಮ್ಯಾಜಿಸ್ಟ್ರೇಟ್ ಗೆ ವಿವರಣೆ ಕೇಳಿದ ಸುಪ್ರೀಂ
ನವದೆಹಲಿ: ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಸಮಯದೊಳಗೆ ಪ್ರಕರಣವನ್ನು ಇತ್ಯರ್ಥ ಪಡಿಸಲು ಸಾಧ್ಯವಾಗದ ಕಾರಣ ಸದರಿ ಪ್ರಕರಣವನ್ನು ಮುಂದುವರಿಸಲು ನ್ಯಾಯವ್ಯಾಪ್ತಿಯನ್ನು ಕಳೆದುಕೊಂಡಿದ್ದೇನೆ. ಹಾಗಾಗಿ ಪ್ರಕರಣವನ್ನು ಮುಂದುವರಿಸಲಾಗುವುದಿಲ್ಲ ಎಂದು ಹೇಳಿ ಪ್ರಕರಣ ಇತ್ಯರ್ಥಕ್ಕೆ ನಿರಾಕರಿಸಿದ ಮಾಜಿಸ್ಟ್ರೇಟ್ ಗೆ ವಿವರಣೆ/ಸಮಜಾಯಿಷಿ ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಪಂಕಜ್ ಮಿಥಲ್ ಮತ್ತು ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರ ಪೀಠವು ಈ ನಿರ್ದೇಶನ ನೀಡಿದೆ. ಆರು ವಾರಗಳ ಅವಧಿಯಲ್ಲಿ ಪ್ರಕರಣವೊಂದನ್ನು ವಿಲೇವಾರಿ ಮಾಡಲು ಮ್ಯಾಜಿಸ್ಟ್ರೇಟ್ ಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಸದರಿ ನಿರ್ದೇಶನದನ್ವಯ ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಲು ಮ್ಯಾಜಿಸ್ಟ್ರೇಟ್ ರಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ಪ್ರಕರಣವನ್ನು ಮುಂದುವರಿಸಲು ತನಗೆ ನ್ಯಾಯ ವ್ಯಾಪ್ತಿ ಇಲ್ಲ ಎಂಬುದು ಮ್ಯಾಜಿಸ್ಟ್ರೇಟ್ ಅವರ ನಿಲುವಾಗಿತ್ತು. ಮ್ಯಾಜಿಸ್ಟ್ರೇಟ್ ರವರ ಈ ನಿಲುವಿನಿಂದ ಅಸಂತುಷ್ಟಗೊಂಡ ವಿಭಾಗೀಯ ನ್ಯಾಯಪೀಠವು ಜಿಲ್ಲಾ ನ್ಯಾಯಾಧೀಶರಿಗೆ ಸಂಬಂಧಪಟ್ಟ ನ್ಯಾಯಾಧೀಶರಿಂದ ವಿವರಣೆಯನ್ನು ಕೇಳಿ ಸುಪ್ರೀಂ ಕೋರ್ಟ್ಗೆ ವರದಿ ಮಾಡುವಂತೆ ನಿರ್ದೇಶಿಸಿತು. ಮ್ಯಾಜಿಸ್ಟ್ರೇಟ್ ಪ್ರಕರಣವನ್ನು ಇತ್ಯರ್ಥ ಪಡಿಸಲು ನಿರಾಕರಿಸಿದ ನಂತರ ಸುಪ್ರೀಂ ಕೋರ್ಟ್ ಈ ರೀತಿ ಅಭಿಪ್ರಾಯ ಪಟ್ಟಿದೆ.
”ಪ್ರಾಜ್ಯ ನ್ಯಾಯಾಧೀಶರು ಆದೇಶವನ್ನು ನೀಡಿದ ರೀತಿಯನ್ನು ಗಮನಿಸಿದಾಗ ನಮಗೆ ನೋವುಂಟಾಗಿದೆ. ಯಾವುದೇ ಕಾರಣಕ್ಕಾಗಿ, ನ್ಯಾಯಾಧೀಶರು ಈ ನ್ಯಾಯಾಲಯವು ನಿಗದಿಪಡಿಸಿದ ನಿಗದಿತ ಅವಧಿಯೊಳಗೆ ವಿಷಯವನ್ನು ವಿಲೇವಾರಿ ಮಾಡಲು ಸಾಧ್ಯವಾಗದಿದ್ದರೆ, ಅವರಿಗೆ ಲಭ್ಯವಿರುವ ಸೂಕ್ತ ಪರಿಹಾರವೆಂದರೆ ಸಮಯ ವಿಸ್ತರಣೆಯನ್ನು ಕೇಳುವುದು. ಆದರೆ ಅನುಮತಿಸಲಾದ ಸಮಯ ಕಳೆದುಹೋಗಿರುವುದರಿಂದ ಅವರು ವಿಷಯದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ನಿಗದಿಪಡಿಸಿದ ಸಮಯದೊಳಗೆ ಪ್ರಕರಣದ ಇತ್ಯರ್ಥ ಸಾಧ್ಯವಾಗದ ಕಾರಣ ಮ್ಯಾಜಿಸ್ಟ್ರೇಟ್ ಈ ಪ್ರಕರಣದ ವಿಲೇವಾರಿ ಬಗ್ಗೆ, ನ್ಯಾಯ ವ್ಯಾಪ್ತಿಯನ್ನು ಕಳೆದು ಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಮ್ಯಾಜಿಸ್ಟ್ರೇಟ್ ಅವರು ಈ ವಿಷಯದ ಬಗ್ಗೆ, ನ್ಯಾಯ ವ್ಯಾಪ್ತಿ ಇಲ್ಲವೆಂದು ಏಕೆ ಹೇಳಿದ್ದಾರೆ ಮತ್ತು ವಿಚಾರಣೆಯನ್ನು ಮುಂದುವರಿಸಲು ಅಸಾಧ್ಯ ಎಂಬ ನಿಲುವು ತಳೆಯಲು ಕಾರಣ ಮತ್ತು ಸಂದರ್ಭಗಳನ್ನು ತಿಳಿಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಏನಿದು ಪ್ರಕರಣ..
ಜನವರಿ 18, 2024 ರಂದು ಸುಪ್ರೀಂ ಕೋರ್ಟ್ ನೀಡಿದ ತನ್ನ ಆದೇಶದಲ್ಲಿ ಪರಗಣಾಸ್ ನ ದಕ್ಷಿಣ 24ರ ಅಲಿಫೋರ್ ನಲ್ಲಿರುವ 4ನೇ ನ್ಯಾಯಾಲಯದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರಿಗೆ ಆರು ವಾರಗಳ ಅವಧಿಯಲ್ಲಿ ಪ್ರಕರಣವನ್ನು ವಿಲೇವಾರಿ ಮಾಡುವಂತೆ ನಿರ್ದೇಶಿಸಿತು. ಸದರಿ ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್ ಸೂಚಿಸಿದ ಅವಧಿಯೊಳಗೆ ಪ್ರಕರಣವನ್ನು ವಿಲೇವಾರಿ ಮಾಡಲು ಸಾಧ್ಯವಾಗಲಿಲ್ಲ. ಮಾರ್ಚ್ 2024 ರಲ್ಲಿ ಮ್ಯಾಜಿಸ್ಟ್ರೇಟ್ ಆದೇಶವನ್ನು ಹೊರಡಿಸಿದರು. ನಿಗದಿತ ಸಮಯದೊಳಗೆ ವಿಷಯವನ್ನು ವಿಲೇವಾರಿ ಮಾಡಲು ಸಾಧ್ಯವಾಗದ ಕಾರಣ, ಪ್ರಕರಣವನ್ನು ಮುಂದುವರಿಸಲು ನ್ಯಾಯಾಲಯವು ಅಧಿಕಾರ ವ್ಯಾಪ್ತಿಯನ್ನು ಹೊಂದಿಲ್ಲ ಎಂದು ಮ್ಯಾಜಿಸ್ಟ್ರೇಟ್ ಹೇಳಿದ್ದರು.
ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ವಿಭಾಗೀಯ ನ್ಯಾಯಪೀಠವು, ಯಾವುದೇ ಕಾರಣಕ್ಕಾಗಿ, ನ್ಯಾಯಾಧೀಶರು ನಿಗದಿತ ಅವಧಿಯೊಳಗೆ ವಿಷಯವನ್ನು ವಿಲೇವಾರಿ ಮಾಡಲು ಸಾಧ್ಯವಾಗದಿದ್ದರೆ, ಅವರಿಗೆ ಲಭ್ಯವಿರುವ ಸೂಕ್ತ ಪರಿಹಾರವೆಂದರೆ ಸಮಯ ವಿಸ್ತರಣೆಯನ್ನು ಕೇಳುವುದು. ನಿರ್ಣಾಯಕವಾಗಿ, ಜಿಲ್ಲಾ ನ್ಯಾಯಾಧೀಶರಿಗೆ ಸಂಬಂಧಪಟ್ಟ ನ್ಯಾಯಾಧೀಶರಿಂದ ವಿವರಣೆಯನ್ನು ಪಡೆದು ಒಂದು ತಿಂಗಳೊಳಗೆ ಸುಪ್ರೀಂ ಕೋರ್ಟ್ಗೆ ವರದಿ ಮಾಡುವಂತೆ ನಿರ್ದೇಶಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
