05/03/2026

Law Guide Kannada

Online Guide

ಸ್ವಂತ ಸಹೋದರನ ವಿರುದ್ದವೇ ‘ಫೇಕ್ ಕೇಸ್’ ದಾಖಲು: ನ್ಯಾಯಾಂಗ ಅಧಿಕಾರಿಗೆ ಸುಪ್ರೀಂ ತರಾಟೆ, ಛೀಮಾರಿ

ನವದೆಹಲಿ: ಅಡ್ಡದಾರಿಯಲ್ಲಿ ಸ್ವಂತ ಸಹೋದರನ ವಿರುದ್ಧವೇ ನಕಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ ನ್ಯಾಯಾಂಗ ಅಧಿಕಾರಿಗೆ ತರಾಟೆ ತೆಗೆದುಕೊಂಡು ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್, ಇದು ನ್ಯಾಯಾಂಗ ಕಚೇರಿಯ ಅತ್ಯಂತ ಘೋರ ದುರುಪಯೋಗ ಎಂದು ಕಟುವಾಗಿ ಟೀಕಿಸಿದೆ.

ಪೊಲೀಸ್ ದೂರು ದಾಖಲಿಸುವ ಬದಲು ಮ್ಯಾಜಿಸ್ಟ್ರೇಟ್ ಮಾರ್ಗದ ಮೂಲಕ ತನ್ನ ಸಹೋದರನ ವಿರುದ್ಧವೇ ನಕಲಿ ಪ್ರಕರಣ ದಾಖಲಿಸಿದ್ದಕ್ಕಾಗಿ ಪಶ್ಚಿಮ ಬಂಗಾಳದ ನ್ಯಾಯಾಂಗ ಅಧಿಕಾರಿ ನಡೆಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ರಾ ಅವರಿದ್ದ ನ್ಯಾಯಪೀಠವು ಖಂಡಿಸಿತು. ಈ ಕ್ರಮವನ್ನು “ನ್ಯಾಯಾಂಗ ಕಚೇರಿಯ ಅತ್ಯಂತ ಘೋರ ದುರುಪಯೋಗ”.ನ್ಯಾಯಾಧೀಶರನ್ನು ಮನೆಗೆ ಕಳುಹಿಸಬೇಕು ಎಂದು ಗರಂ ಆಗಿದ್ದು ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತು.

ಅಲ್ಲದೆ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನ್ಯಾಯಪೀಠವು ನಿರಾಕರಿಸಿತು. ಹಾಗೆಯೇ ನ್ಯಾಯಾಂಗ ಅಧಿಕಾರಿಯ ಮೇಲ್ಮನವಿಯನ್ನು ತಿರಸ್ಕರಿಸಿತು. ಅಂತಿಮವಾಗಿ, ನ್ಯಾಯಾಂಗ ಅಧಿಕಾರಿ ತಮ್ಮ ಮೇಲ್ಮನವಿಯನ್ನು ಹಿಂಪಡೆಯಲು ನಿರ್ಧರಿಸಿದರು.

ಏನಿದು ಘಟನೆ..?
ನ್ಯಾಯಾಂಗ ಅಧಿಕಾರಿಯೊಬ್ಬರು ಜನವರಿ 6, 2022 ರಂದು ತನ್ನ ಸ್ವಂತ ಸಹೋದರನ ವಿರುದ್ದ ಮ್ಯಾಜಿಸ್ಟ್ರೇಟ್ ಮುಂದೆ ಖಾಸಗಿ ದೂರು ಸಲ್ಲಿಸಿದ್ದರು.. ತಮ್ಮ ದೂರಿನಲ್ಲಿ, ನ್ಯಾಯಾಧೀಶರು ತಮ್ಮ ಸಹೋದರ ಅಣ್ಣಾಮಲೈ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಎಲ್ಎಲ್ಎಂ ಪ್ರಬಂಧಕ್ಕಾಗಿ ತಮ್ಮ ಸಹಿಯನ್ನು ನಕಲಿ ಮಾಡಿ ನಕಲಿ ನ್ಯಾಯಾಲಯದ ಮುದ್ರೆಯನ್ನು ರಚಿಸಿದ್ದಾರೆ ಎಂದು ಆರೋಪಿಸಿದ್ದರು.

ದೂರಿನ ನಂತರ, ಮ್ಯಾಜಿಸ್ಟ್ರೇಟ್ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 468 ಮತ್ತು 471 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿತು. ಇದರಿಂದ ಬಾಧಿತರಾದ ಸಹೋದರ, ಸದರಿ ವಿಚಾರಣೆಗಳನ್ನು ರದ್ದುಗೊಳಿಸುವಂತೆ ಕೋರಿ ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದರು. ವೈಯಕ್ತಿಕ ವಿವಾದ ಎಂದು ಕರೆಯಲ್ಪಡುವ ವಿಷಯದಲ್ಲಿ ನ್ಯಾಯಾಂಗ ಅಧಿಕಾರಿ ತಮ್ಮ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತೀರ್ಮಾನಿಸಿದ ಹೈಕೋರ್ಟ್ ಸಂಜ್ಞಾ ಆದೇಶ ಮತ್ತು ಸಮನ್ಸ್ ಸೇರಿದಂತೆ ಕ್ರಿಮಿನಲ್ ಪ್ರಕರಣವನ್ನು ಸಂಪೂರ್ಣವಾಗಿ ರದ್ದುಗೊಳಿಸಿತು.

ವೈಯಕ್ತಿಕ ವಿಷಯಗಳನ್ನು ನಿರ್ವಹಿಸುವ ನ್ಯಾಯಾಧೀಶರು ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ತಮ್ಮ ಸ್ಥಾನಮಾನವನ್ನು ಬಳಸಿಕೊಳ್ಳುವ ಬದಲು ಇತರ ನಾಗರಿಕರಂತೆ ಪೊಲೀಸ್ ದೂರು ದಾಖಲಿಸಬೇಕು ಎಂದು ಒತ್ತಿ ಹೇಳಿದರು. ಹೆಚ್ಚುವರಿಯಾಗಿ, ಭಾಗಿಯಾಗಿರುವ ನ್ಯಾಯಾಧೀಶರ ವಿರುದ್ಧ ಸೂಕ್ತ ಆಡಳಿತಾತ್ಮಕ ಕ್ರಮಕ್ಕಾಗಿ ತನ್ನ ತೀರ್ಪಿನ ಪ್ರತಿಯನ್ನು ಮುಖ್ಯ ನ್ಯಾಯಾಧೀಶರಿಗೆ ಕಳುಹಿಸಲು ಹೈಕೋರ್ಟ್ ನಿರ್ದೇಶಿಸಿತು.

ಹೈಕೋರ್ಟ್ ತೀರ್ಪಿನಿಂದ ಅತೃಪ್ತರಾದ ನ್ಯಾಯಾಂಗ ಅಧಿಕಾರಿ, ಸುಪ್ರೀಂ ಕೋರ್ಟ್ ಕದ ತಟ್ಟಿ ಮೇಲ್ಮನವಿ ಸಲ್ಲಿಸಿದರು. ಸುಪ್ರೀಂ ಕೋರ್ಟ್ ನಲ್ಲಿ, ತಾನು ನಕಲಿ ದಾಖಲೆಗಳ ಬಲಿಪಶುವಾಗಿ ದೂರು ದಾಖಲಿಸಿದ್ದೇನೆ. ನ್ಯಾಯಾಧೀಶರು ಮತ್ತು ಮ್ಯಾಜಿಸ್ಟ್ರೇಟ್ ಗೆ ಖಾಸಗಿ ದೂರು ಸಲ್ಲಿಸುವುದನ್ನು ತಡೆಯಲು ಯಾವುದೇ ಕಾನೂನು ಅಡೆತಡೆಗಳಿಲ್ಲ ಎಂದು ಅವರು ವಾದಿಸಿದರು.

ಆದರೆ ನ್ಯಾಯಾಂಗ ಅಧಿಕಾರಿಯ ನಡವಳಿಕೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ ಮತ್ತು ಯಾವುದೇ ಪರಿಹಾರವನ್ನು ನೀಡದಿರಲು ನಿರ್ಧರಿಸಿ ಮೇಲ್ಮನವಿ ಅರ್ಜಿ ತಿರಸ್ಕರಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.