ಹೈಕೋರ್ಟ್ ನ್ಯಾಯಮೂರ್ತಿ ವಿರುದ್ದ ಲೋಕಪಾಲ್ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಹೈಕೋರ್ಟ್ ವೊಂದರ ಹಾಲಿ ಹೆಚ್ಚುವರಿ ನ್ಯಾಯಾಧೀಶರೊಬ್ಬರ ವಿರುದ್ದ ಲೋಕಪಾಲ್ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಸೂರ್ಯಕಾಂತ್ ಹಾಗೂ ಅಭಯ ಶ್ರೀನಿವಾಸ್ ಓಕಾ ಅವರಿದ್ದ ವಿಶೇಷ ನ್ಯಾಯಪೀಠವು ಈ ತಡೆ ನೀಡಿದೆ. ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ 2013ರ ಅಡಿಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ವಿಚಾರಣೆಗೆ ಒಳಪಡಿಸಲು ತನಗೆ ಅಧಿಕಾರ ಇದೆ ಎಂಬ ಲೋಕಪಾಲ್ ಆದೇಶಕ್ಕೆ ತಡೆ ಸಿಕ್ಕಿದೆ.
ಹೈಕೋರ್ಟ್ ಹಾಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಹೆಚ್ಚುವರಿ ನ್ಯಾಯಮೂರ್ತಿಗಳ ವಿರುದ್ಧ ಸಲ್ಲಿಸಲಾಗಿರುವ ಎರಡು ದೂರುಗಳ ವಿಚಾರಣೆ ವೇಳೆ ಲೋಕಪಾಲ್ ಜನವರಿ 27ರಂದು ಆದೇಶ ಹೊರಡಿಸಿತ್ತು. ಈ ಆದೇಶದಲ್ಲಿ ತನಗೆ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ವಿಚಾರಣೆಗೆ ಒಳಪಡಿಸಲು ತನಗೆ ಅಧಿಕಾರ ಇದೆ ಎಂದು ಹೇಳಿಕೊಂಡಿತ್ತು. ಈ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠವು, ಲೋಕಪಾಲ್ ಆದೇಶ ತುಂಬಾ ಗೊಂದಲದಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಲೋಕಪಾಲ್ ರಿಜಿಸ್ಟ್ರಾರ್ಗೆ ನೋಟೀಸ್ ಜಾರಿಗೊಳಿಸಿದೆ. ಜೊತೆಗೆ ಹೈಕೋರ್ಟ್ ನ್ಯಾಯಮೂರ್ತಿಗಳ ಹೆಸರನ್ನು ಬಹಿರಂಗ ಪಡಿಸದಂತೆ ದೂರುದಾರರಿಗೆ ಮತ್ತು ಲೋಕಪಾಲ್ಗೆ ನಿರ್ದೇಶಿಸಿದೆ.
ಏನಿದು ಪ್ರಕರಣ:
ದೂರುದಾರರ ವಿರುದ್ಧ ಖಾಸಗಿ ಕಂಪೆನಿಯೊಂದು ದಾಖಲಿಸಿದ್ದ ಪ್ರಕರಣದ ವಿಚಾರಣೆಯನ್ನ ಹೈಕೋರ್ಟ್ವೊಂದರ ನ್ಯಾಯಮೂರ್ತಿಯೊಬ್ಬರು ನಡೆಸಬೇಕಿತ್ತು. ಆ ಕಂಪೆನಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ, ಹೈಕೋರ್ಟ್ ಹಾಲಿ ಹೆಚ್ಚುವರಿ ನ್ಯಾಯಮೂರ್ತಿಯೊಬ್ಬರು ಜಿಲ್ಲಾ ನ್ಯಾಯಾಲಯವೊಂದರ ಹೆಚ್ಚುವರಿ ನ್ಯಾಯಾಧೀಶರು ಮತ್ತು ಅರ್ಜಿ ವಿಚಾರಣೆ ನಡೆಸಬೇಕಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳ ಮೇಲೆ ಪ್ರಭಾವ ಬೀರಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಈ ಆರೋಪದ ಬಗ್ಗೆ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಗಳ ವಿರುದ್ಧ ಎರಡು ಪ್ರತ್ಯೇಕ ದೂರನ್ನು ಅರ್ಜಿದಾರರು ದಾಖಲಿಸಿದ್ದರು. ಈ ದೂರುಗಳನ್ನು ಪರಿಗಣಿಸಿದ್ದ ಲೋಕಪಾಲ, ಹೆಚ್ಚುವರಿ ನ್ಯಾಯಮೂರ್ತಿಗಳ ವಿರುದ್ಧ ಜನವರಿ 27ರಂದು ಈ ಆದೇಶ ಹೊರಡಿಸಿತ್ತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ