19/05/2025

Law Guide Kannada

Online Guide

ಐತಿಹಾಸಿಕ ನಿರ್ಧಾರ ಕೈಗೊಂಡ ಸುಪ್ರೀಂಕೋರ್ಟ್: ನ್ಯಾಯಮೂರ್ತಿಗಳ ನೇಮಕಾತಿಯ ಸಂಪೂರ್ಣ ವಿವರ ಪ್ರಕಟ.!

ನವದೆಹಲಿ: ನ್ಯಾಯಾಂಗ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಸುಪ್ರೀಂಕೋರ್ಟ್ ಹಲವು ಮಹತ್ವದ ನಿರ್ಧಾರಗಳನ್ನ ಕೈಗೊಳ್ಳುತ್ತಿದ್ದು ಇತ್ತೀಚೆಗಷ್ಟೆ ನ್ಯಾಯಾಧೀಶರುಗಳ ಆಸ್ತಿವಿವರವನ್ನ ಬಹಿರಂಗಪಡಿಸಿತ್ತು. ಇದೀಗ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ದೇಶದ ಎಲ್ಲ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯ ಸಂಪೂರ್ಣ ಪ್ರಕ್ರಿಯೆಯ ವಿವರವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು ಈ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಂಡಿದೆ.

ಹೈಕೋರ್ಟ್ ಕೊಲೀಜಿಯಂನ ಪಾತ್ರ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಪಡೆಯುವ ಮಾಹಿತಿ ಹಾಗೂ ಸುಪ್ರೀಂಕೋರ್ಟ್ ಹುಲಿ ಜಿಎಂ ಪರಿಗಣನೆಯ ಕುರಿತಾದ ವಿವರಗಳನ್ನು ಸರ್ವೋಚ್ಚ ನ್ಯಾಯಾಲಯ ತನ್ನ ಜಾಲತಾಣದಲ್ಲಿ ಬಹಿರಂಗಪಡಿಸಿದ್ದು, ಸಾರ್ವಜನಿಕರಲ್ಲಿ ಅರಿವು ಮತ್ತು ಜಾಗೃತಿ ಮೂಡಲೆಂದು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ.

ಈಗ ನೀಡಲಾಗಿರುವ ಮಾಹಿತಿಗಳ ಪೈಕಿ, 2022ರ ನವಂಬರ್ 9 ರಿಂದ 2025ರ ಮೇ ಐದರ ಅವಧಿಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್ ಕೊಲೀಜಿಯಂ ಅನುಮೋದಿಸಿದ ಪ್ರಸ್ತಾವನೆಗಳಲ್ಲಿರುವ ಹೆಸರುಗಳು, ಹೈಕೋರ್ಟ್ ಮೂಲಸೇವೆಯಿಂದ ಅಥವಾ ವಕೀಲ ವೃತ್ತಿಯಿಂದ ಬಂದವರೇ ಎಂಬ ವಿವರಗಳನ್ನು ನೀಡಲಾಗಿದೆ. ಸುಪ್ರೀಂ ಕೋರ್ಟ್ ಕೊಲೀಜಿಯಂ ಶಿಫಾರಸು ಮಾಡಿದ ದಿನಾಂಕ, ನೇಮಕಾತಿಯ ದಿನಾಂಕ, ವಿಶೇಷ ವರ್ಗಗಳು (ಎಸ್.ಸಿ, ಎಸ್.ಟಿ., ಹಿಂದುಳಿದ, ಇತರೆ ಇತ್ಯಾದಿ) ಎಂಬ ವಿವರಗಳ ಜೊತೆಗೆ ಅಭ್ಯರ್ಥಿ ಯಾವುದೇ ಹಾಲಿ ಅಥವಾ ನಿವೃತ್ತ ಹೈಕೋರ್ಟ್ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಬಂಧಿಯೇ ಎಂಬುದನ್ನು ಸುಪ್ರೀಂಕೋರ್ಟ್ ಜಾಲತಾಣದಲ್ಲಿ ವಿವರಣೆ ನೀಡಿರುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.

ಇದೇ ವೇಳೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಆಸ್ತಿ ವಿವರಗಳನ್ನು ಕೂಡ ಸರ್ವೋಚ್ಛ ನ್ಯಾಯಾಲಯ ಪ್ರಕಟಿಸಿದೆ. ಈ ಹಿಂದೆ, ಆಸ್ತಿ ಘೋಷಣೆ ಮಾಡಿದ ನ್ಯಾಯಮೂರ್ತಿಗಳ ಹೆಸರುಗಳನ್ನಷ್ಟೇ ಸುಪ್ರೀಂ ಕೋರ್ಟ್ ತನ್ನ ಜಾಲತಾಣದಲ್ಲಿ ಪ್ರಕಟಿಸಿತ್ತು. ಆದರೆ ಆಸ್ತಿ ವಿವರಗಳನ್ನು ಪ್ರಕಟಿಸಿರಲಿಲ್ಲ. ಇದೀಗ ಒಂದು ಹೆಜ್ಜೆ ಮುಂದಿಟ್ಟಿರುವ ಸುಪ್ರೀಂ ಕೋರ್ಟ್, ಎಲ್ಲ ನ್ಯಾಯಮೂರ್ತಿಗಳ ಆಸ್ತಿ ವಿವರಗಳನ್ನು ಬಹಿರಂಗ ಪಡಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.