ಕ್ರಿಮಿನಲ್ ಕೇಸ್ ವಿಚಾರಣೆ ನಡೆಸಲು ಹೈಕೋರ್ಟ್ ನ್ಯಾಯಾಧೀಶರಿಗೆ ನಿಷೇಧ ವಿಧಿಸಿದ್ದ ಆದೇಶ ಹಿಂಪಡೆದ ಸುಪ್ರೀಂ
ನವದೆಹಲಿ: ನಿವೃತ್ತಿಯವರೆಗೂ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸಬಾರದು ಎಂದು ಅಲಹಾಬಾದ್ ಹೈಕೋರ್ಟ್ ನ ನ್ಯಾಯಾಧೀಶರೊಬ್ಬರಿಗೆ ತಾನೇ ವಿಧಿಸಿದ್ದ ನಿಷೇಧದ ಆದೇಶವನ್ನು ಸುಪ್ರೀಂ ಕೋರ್ಟ್ ಹಿಂಪಡೆದಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ .ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠವು, ಆಗಸ್ಟ್ 4 ರಂದು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಅವರಿಗೆ ನಿವೃತ್ತಿವರೆಗೂ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸದಂತೆ ನಿರ್ಬಂಧ ವಿಧಿಸಿತ್ತು.
ಹಣ ವಸೂಲಾತಿ ಮಾಡಲು ಅವಕಾಶವಿರುವ ಸಂದರ್ಭದಲ್ಲಿಯೂ ಕ್ರಿಮಿನಲ್ ದೂರನ್ನು ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಅವರ ಆದೇಶದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದ ನ್ಯಾಯಪೀಠ ಈ ನಿಷೇಧ ಹೇರಿತ್ತು. ಪ್ರಶಾಂತ್ ಕುಮಾರ್ ಅವರನ್ನು ಕ್ರಿಮಿನಲ್ ವಿಚಾರಣೆಯಿಂದ ದೂರವಿಟ್ಟು, ಹಿರಿಯ ನ್ಯಾಯಾಧೀಶರೊಂದಿಗೆ ಮಾತ್ರ ಕುಳಿತುಕೊಳ್ಳುವಂತೆ ನಿರ್ದೇಶನ ನೀಡಿತ್ತು.
ನ್ಯಾಯಪೀಠದ ಈ ನಿರ್ದೇಶನಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು ಈ ಹಿನ್ನೆಲೆಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ವಿನಂತಿ ಮೇರೆಗೆ ಪೀಠವು ಮರುಪರಿಶೀಲನೆ ನಡೆಸಿತು. ಹದಿಮೂರು ಹೈಕೋರ್ಟ್ ನ್ಯಾಯಾಧೀಶರೂ ಈ ಕುರಿತು ಅಲಹಾಬಾದ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು, ಸುಪ್ರೀಂ ಕೋರ್ಟ್ನ ಹಿಂದಿನ ನಿರ್ದೇಶನ ಜಾರಿಗೊಳಿಸದಂತೆ ಮನವಿ ಮಾಡಿದ್ದರು.
“ನಮ್ಮ ಉದ್ದೇಶ ನ್ಯಾಯಾಧೀಶರನ್ನು ಮುಜುಗರಕ್ಕೀಡು ಮಾಡುವುದಲ್ಲ, ಅಥವಾ ಅವರ ಗೌರವಕ್ಕೆ ಧಕ್ಕೆ ತರುವುದು ಅಲ್ಲ. ಆದರೆ, ವಿಷಯಗಳು ಮಿತಿಯನ್ನು ದಾಟಿ ನ್ಯಾಯಾಲಯದ ಘನತೆಗೆ ಧಕ್ಕೆ ಬಂದಾಗ, ಸಂವಿಧಾನದ 136ನೇ ವಿಧಿಯಡಿ ಮಧ್ಯಪ್ರವೇಶಿಸುವುದು ಈ ನ್ಯಾಯಾಲಯದ ಕರ್ತವ್ಯ ಎಂದು ಎಂದು ನ್ಯಾಯಮೂರ್ತಿ ಪರ್ದಿವಾಲಾ ಹೊಸ ಆದೇಶದಲ್ಲಿ ಸ್ಪಷ್ಟಪಡಿಸಿದರು.
ಪೀಠವು ಹೈಕೋರ್ಟ್ಗಳ ಆಡಳಿತಾತ್ಮಕ ಅಧಿಕಾರಗಳಲ್ಲಿ ಹಸ್ತಕ್ಷೇಪ ಮಾಡದೆ, ನ್ಯಾಯಾಂಗದ ಘನತೆಯನ್ನು ಕಾಯ್ದುಕೊಳ್ಳುವುದೇ ತಮ್ಮ ಉದ್ದೇಶ ಎಂದು ತಿಳಿಸಿತು. ಹೈಕೋರ್ಟ್ಗಳು ನ್ಯಾಯಾಂಗ ವ್ಯವಸ್ಥೆಯಿಂದ ಪ್ರತ್ಯೇಕವಾಗಿಲ್ಲ. ಅವು ಅದರ ಅವಿಭಾಜ್ಯ ಅಂಗವೆಂದು ನ್ಯಾಯಪೀಠ ಒತ್ತಿ ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
