ಪತ್ನಿ ಮಕ್ಕಳನ್ನ ಹುಡುಕಿಕೊಡುವಂತೆ ಕೋರ್ಟ್ ಮೊರೆ ಹೋದ ವ್ಯಕ್ತಿ: ಅರ್ಜಿ ವಜಾಗೊಳಿಸಿ ದಂಡ ವಿಧಿಸಿದ ಕೋರ್ಟ್

ಮಧ್ಯಪ್ರದೇಶ: 18 ವರ್ಷಗಳ ಹಿಂದೆ ನಾಪತ್ತೆಯಾಗಿರುವ ಪತ್ನಿ ಮತ್ತು ಮಕ್ಕಳನ್ನು ಹುಡುಕಿಕೊಡುವಂತೆ ಕೋರಿ ವ್ಯಕ್ತಿಯೋರ್ವ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಮಧ್ಯಪ್ರದೇಶ ಹೈಕೋರ್ಟ್ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
2006ರಿಂದ ನಾಪತ್ತೆಯಾಗಿರುವ ತನ್ನ ಹೆಂಡತಿ ಮತ್ತು ಮಕ್ಕಳನ್ನು ಹುಡುಕಿಕೊಡಲು ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ನಂದಕಿಶೋರ್ ಎಂಬಾತ ಮಧ್ಯಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದ್ದ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿಶಾಲ್ ಧಗತ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದ್ದು, ದಂಡದ ಮೊತ್ತವನ್ನು 30 ದಿನಗಳಲ್ಲಿ ಹೈಕೋರ್ಟ್ ನೌಕರರ ಸಂಘದಲ್ಲಿ ಠೇವಣಿ ಇಡುವಂತೆ ಆದೇಶ ನೀಡಿದೆ.
ಆಗಿದ್ದೇನು..?
2006ರಲ್ಲಿ ಪತ್ನಿ ತನ್ನ ಇಬ್ಬರು ಮಕ್ಕಳ ಜೊತೆಗೆ ಕಾಣೆಯಾಗಿದ್ದಾರೆ. ಅವರನ್ನು ಹುಡುಕಿಕೊಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿ ಎಂದು ನಂದ ಕಿಶೋರ್ ಎಂಬವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿದಾರರ ಪತ್ನಿ ಮತ್ತು ಮಕ್ಕಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶನ ನೀಡಿತ್ತು. ಹೈಕೋರ್ಟ್ ಸೂಚನೆಯಂತೆ ಪೊಲೀಸರು ಪತ್ನಿ ಮತ್ತು ಮಕ್ಕಳನ್ನು ಹಾಜರಪಡಿಸಿದರು.
ಹೈಕೋರ್ಟ್ ನ್ಯಾಯಪೀಠದ ಮುಂದೆ ಹಾಜರಾದ ಪತ್ನಿ ತಾನು ಮನೆ ಬಿಟ್ಟು ಹೋಗಲು ಕಾರಣವಾದ ವಿಷಯವನ್ನು ಮನವರಿಕೆ ಮಾಡಿದರು. ಪತಿಯ ಅಮಾನವೀಯತೆ, ಕ್ರೌರ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಅರ್ಜಿದಾರರು ತಮಗೆ ನಿಷ್ಕರುಣೆಯಿಂದ ಥಳಿಸುತ್ತಿದ್ದರು ಎಂಬುದನ್ನು ಹೇಳಿ, ತಾನು ಜೀವ ಭಯದಿಂದ ಮಕ್ಕಳ ಜೊತೆಗೆ ಬೇರೆಯೇ ವಾಸಿಸುತ್ತಿದ್ದೇನೆ ಎಂದು ಹೇಳಿದರು.
ಪತ್ನಿಗೆ ಅರ್ಜಿದಾರರು ಅಸಹನೀಯ ಕಿರುಕುಳ ನೀಡುತ್ತಿದ್ದರು. ಅದನ್ನು ತಡೆಯಲಾಗದೆ ಪತ್ನಿ ತನ್ನ ಇಬ್ಬರು ಮಕ್ಕಳ ಜೊತೆಗೆ ಮನೆ ಬಿಟ್ಟು ಹೋಗಿದ್ದಾರೆ. ಈ ವಿಚಾರ ಅರ್ಜಿದಾರರಿಗೆ ಸ್ಪಷ್ಟವಾಗಿ ಗೊತ್ತಿದ್ದರೂ ಇದನ್ನು ಮರೆಮಾಚಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದು ಕಾನೂನಿನ ದುರ್ಬಳಕೆಯಲ್ಲದೆ ಮತ್ತೇನೂ ಅಲ್ಲ ಎಂದು ನ್ಯಾಯಪೀಠ ಖಾರವಾದ ಶಬ್ದಗಳಲ್ಲಿ ವಾಗ್ದಂಡನೆ ವಿಧಿಸಿದೆ.
ಅಲ್ಲದೆ ಅರ್ಜಿದಾರರು ಕಾನೂನನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ಅರ್ಜಿ ವಜಾಗೊಳಿಸಿ ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ ಕಾರಣಕ್ಕೆ ಅರ್ಜಿದಾರರಿಗೆ 10 ಸಾವಿರ ರೂ.ಗಳ ದಂಡ ವಿಧಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ