19/05/2025

Law Guide Kannada

Online Guide

‘ಸ್ಲಮ್ ನಲ್ಲಿದ್ದ ನಾನು ಜಡ್ಜ್ ಆಗಿ ಸುಪ್ರೀಂ ಕೋರ್ಟ್ ವರೆಗೆ ಬರಲು ಕಾರಣ ಡಾ.ಬಿ.ಅಂಬೇಡ್ಕರ್ ಸಂವಿಧಾನ- ನ್ಯಾ. ಬಿ.ಆರ್ ಗವಾಯಿ ಮಾತು ವೈರಲ್

ನವದೆಹಲಿ : ‘ಸ್ಲಮ್ ನಲ್ಲಿದ್ದ ನಾನು ನ್ಯಾಯಮೂರ್ತಿಯಾಗಿ ಸುಪ್ರೀಂ ಕೋರ್ಟ್ ವರೆಗೆ ಬರಲು ಕಾರಣ ಡಾ.ಬಿ.ಅಂಬೇಡ್ಕರ್ ಸಂವಿಧಾನ ಎಂದು ಸುಪ್ರೀಂಕೋರ್ಟ್ ಗೆ ನೂತನವಾಗಿ ಆಯ್ಕೆಯಾಗಿರುವ ಮುಖ್ಯನ್ಯಾಯಮೂರ್ತಿ ನ್ಯಾ. ಬಿ.ಆರ್ ಗವಾಯಿ ತಿಳಿಸಿದರು.

ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಗಳಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಹೆಸರನ್ನು ಹಾಲಿ ಸಿಜೆಐ ಸಂಜೀವ್ ಖನ್ನಾ ಕಾನೂನು ಇಲಾಖೆಗೆ ಶಿಫಾರಸು ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಏಪ್ರಿಲ್ 14 ರಂದು ಸುಪ್ರೀಂ ಕೋರ್ಟ್ ಆವರಣದಲ್ಲಿ ನಡೆದ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ನ್ಯಾ. ಬಿ.ಆರ್ ಗವಾಯಿ ಅವರು ಆಡಿರುವ ಮಾತುಗಳು ವೈರಲ್ ಆಗಿವೆ.

ಕಾರ್ಯಕ್ರಮದಲ್ಲಿ ಜಸ್ಟೀಸ್ ಬಿಆರ್ ಗವಾಯಿ ಅವರು, ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯಲ್ಪಡುವ ಡಾ. ಅಂಬೇಡ್ಕರ್ ಅವರ ಮಹಾನ್ ಕೊಡುಗೆಗಳನ್ನು ಸ್ಮರಿಸಿ, ಶ್ಲಾಘಿಸಿದರು. ಅಂಬೇಡ್ಕರ್ ಅವರ ಆಲೋಚನೆಗಳು ಮತ್ತು ನಾಯಕತ್ವವು ಭಾರತದ ಭವಿಷ್ಯವನ್ನು ರೂಪಿಸಲು ಮತ್ತು ಸಮಾಜದ ದುರ್ಬಲ ವರ್ಗಗಳ ಮೇಲೆತ್ತಲು ಹೇಗೆ ಸಹಾಯ ಮಾಡಿತು ಎಂಬುದನ್ನು ಅವರು ಹಂಚಿಕೊಂಡರು.

“ಡಾ. ಅಂಬೇಡ್ಕರ್ ಮತ್ತು ಅವರ ಸಹೋದ್ಯೋಗಿಗಳು ರಚಿಸಿದ ಸಂವಿಧಾನಕ್ಕಾಗಿ ರಾಷ್ಟ್ರವು ಯಾವಾಗಲೂ ಅವರಿಗೆ ಕೃತಜ್ಞರಾಗಿರಬೇಕು. ಭಾರತವು ಬಲಿಷ್ಠವಾಗಿದೆ, ಪ್ರಗತಿಪರವಾಗಿದೆ ಮತ್ತು ವಿಶ್ವದ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಅವರ ತತ್ವಶಾಸ್ತ್ರ, ಸಿದ್ಧಾಂತ ಮತ್ತು ದೃಷ್ಟಿಕೋನವೇ ನಮ್ಮನ್ನು ಒಗ್ಗಟ್ಟಿನಿಂದ ಮತ್ತು ಬಲವಾಗಿರಿಸುತ್ತಿದೆ’ ಎಂದು ಹೇಳಿದ್ದರು.

ಇದೇ ಸಂದರ್ಭದಲ್ಲಿ ತಾವು ಜೀವನದಲ್ಲಿ ನಡೆದುಬಂದ ಹಾದಿಯನ್ನ ನೆನೆದು ಭಾವುಕರಾದ ಅವರು, ಡಾ. ಅಂಬೇಡ್ಕರ್ ಅವರ ಸಮಾನತೆ ಮತ್ತು ನ್ಯಾಯಕ್ಕಾಗಿ ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದಾಗಿ ಈ ಉನ್ನತ ಹುದ್ದೆಯನ್ನು ತಲುಪಲು ನನಗೆ ಸಾಧ್ಯವಾಯಿತು. ‘ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರಯತ್ನದಿಂದಲೇ ನನಗೆ ಈ ಸ್ಥಾನ ಸಿಗಲು ಸಾಧ್ಯವಾಯಿತು, ನಾನು ಪುರಸಭೆಯ ಶಾಲೆಯಲ್ಲಿ, ಕೊಳಚೆ ಪ್ರದೇಶದಲ್ಲಿ ವಾಸವಿದ್ದು ವಿದ್ಯಾಭ್ಯಾಸ ಮಾಡಿದವನು ಎಂದು ಹೇಳಿದರು.

ಸುಮಾರು 18 ವರ್ಷಗಳ ಬಳಿಕ ಭಾರತ ಮುಖ್ಯ ನ್ಯಾಯಮೂರ್ತಿಯಾಗಿ ದಲಿತ ವ್ಯಕ್ತಿ ನೇಮಕಗೊಳ್ಳಲಿದ್ದಾರೆ. 2007ರಲ್ಲಿ ದೇಶದ ಉನ್ನತ ನ್ಯಾಯಾಂಗ ಹುದ್ದೆಗೆ ಬಡ್ತಿ ಪಡೆದ ನ್ಯಾಯಮೂರ್ತಿ ಕೆಜಿ.ಬಾಲಕೃಷ್ಣನ್ ಬಳಿಕ, ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಅಲಂಕರಿಸಿದ 2ನೇ ದಲಿತ ವ್ಯಕ್ತಿ ಬಿಆರ್ ಗವಾಯಿ ಎನಿಸಲಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.