19/05/2025

Law Guide Kannada

Online Guide

ನದಿ, ಅರಣ್ಯ ವಿಚಾರದಲ್ಲಿ ನ್ಯಾಯಾಲಯಗಳೂ ಪಾಲುದಾರ: ಮೀಸಲು ಅರಣ್ಯ ರಕ್ಷಿಸಿದ ಹೈಕೋರ್ಟ್

ಬೆಂಗಳೂರು: 1929ರಲ್ಲಿ ಅಂದಿನ ಮೈಸೂರು ಮಹಾರಾಜರು ರಾಜ್ಯ ಮೀಸಲು ಅರಣ್ಯಕ್ಕೆ ಅಧಿಸೂಚನೆ ಹೊರಡಿಸಿದ್ದ ಜಾಗದ ಸ್ವಲ್ಪ ಭಾಗವನ್ನು ಖಾಸಗಿ ವ್ಯಕ್ತಿಗಳ ಪರ ಡಿಕ್ರಿ ಮಾಡಿಕೊಡಲು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿರುವ ಹೈಕೋರ್ಟ್, ನದಿ ಅರಣ್ಯ ವಿಚಾರದಲ್ಲಿ ನ್ಯಾಯಾಲಯಗಳೂ ಪಾಲುದಾರರಂತೆ ವರ್ತಿಸಬೇಕು ಎಂದು ಅಭಿಮತ ವ್ಯಕ್ತಪಡಿಸಿದೆ.

ನ್ಯಾ. ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾ. ರಾಮಚಂದ್ರ ಡಿ.ಹುದ್ದಾರ ಅವರಿದ್ದ ವಿಭಾಗೀಯ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರಾಜ್ಯ ಸರಕಾರ ಸಲ್ಲಿಸಿದ್ದ ಮೇಲ್ಮನವಿಗಳನ್ನು ಮಾನ್ಯ ಮಾಡಿರುವ ವಿಭಾಗೀಯ ಪೀಠವು, ವಿಚಾರಣಾಧೀನ ನ್ಯಾಯಾಲಯವು ಮಲ್ಲಯ್ಯ ಹಾಗೂ ಮತ್ತಿತರರ ಪರವಾಗಿ 2011ರ ಆ.29ರಂದು ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ. ಅಲ್ಲದೆ, ಒಮ್ಮೆ ಅರಣ್ಯ ಪ್ರದೇಶವೆಂದು ಘೋಷಣೆಯಾದ ಮೇಲೆ ಅದು ಸದಾ ಅರಣ್ಯವೇ ಆಗಿರುತ್ತದೆ. ಸಂವಿಧಾನಿಕ ನ್ಯಾಯಾಲಯಗಳ ಕೆಲಸ ಕೇವಲ ನ್ಯಾಯ ದೊರಕಿಸಿಕೊಡುವುದಿಲ್ಲ. ನದಿಗಳು ಹಾಗೂ ಅರಣ್ಯಗಳ ವಿಚಾರದಲ್ಲಿ ಪಾಲುದಾರರಂತೆಯೂ ವರ್ತಿಸಬೇಕು ಎಂದು ತಿಳಿಸಿದೆ.

ಜತೆಗೆ ವಿವಾದಿತ ಜಾಗಕ್ಕೆ ಸಂಬಂಧಿಸಿದಂತೆ ಕಂದಾಯ ದಾಖಲೆಗಳನ್ನು ಸರಿಪಡಿಸುವಂತೆ ಆದೇಶಿಸಿದ ನ್ಯಾಯಾಲಯ, ಆ ಜಾಗವನ್ನು ಚಾಮುಂಡಿ ಬೆಟ್ಟದ ರಾಜ್ಯ ಮೀಸಲು ಅರಣ್ಯದ ಭಾಗವೆಂದು ನಮೂದಿಸುವಂತೆ ಸೂಚಿಸಿದೆ.

ಪ್ರಕರಣದ ಹಿನ್ನೆಲೆ:
1929ರಲ್ಲಿ ಅಂದಿನ ಮೈಸೂರು ಸರಕಾರವು ರಾಜ್ಯ ಮೀಸಲು ಅರಣ್ಯ ಸೃಷ್ಟಿಗೆ ಅಧಿಸೂಚನೆ ಹೊರಡಿಸಿತ್ತು. ಅದರಲ್ಲಿ ಈ ವಿವಾದಿತ ಜಾಗವೂ ಸೇರಿತ್ತು. 1935ರಿಂದ ಕಂದಾಯ ದಾಖಲೆಗಳಲ್ಲಿ ಅರಣ್ಯ ಇಲಾಖೆ ಭೂಮಿ ಎಂದೇ ಉಲ್ಲೇಖವಾಗಿತ್ತು. ಆದರೆ 1970-71 ರಿಂದ 1973-74ರಲ್ಲಿ ಏಕಾಏಕಿ ಮಾಯಾಗ ಅವರ ಹೆಸರನ್ನು ದಾಖಲೆಗಳಲ್ಲಿ ನಮೂದಿಸಲಾಗಿತ್ತು. ಬದಲಾದ ಕಾಲಘಟದಲ್ಲಿ ಅರಣ್ಯ ಈ ಇಲಾಖೆಗೆ ಸೇರಿದ ಜಾಗದಲ್ಲಿ ಚಾಮುಂಡಿ ಬೆಟ್ಟದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ನಿರ್ಮಿಸಲಾಗಿತ್ತು. ಆದರೆ ಅಧೀನ ನ್ಯಾಯಾಲಯದ ಮೊರೆ ಹೋಗಿದ್ದ ಮಾಯಾಗ ಅವರ ಪುತ್ರ ಮಲ್ಲಯ್ಯ ವಿಚಾರಣಾ’ ನ್ಯಾಯಾಲಯದ ಮೊರೆ ಹೋಗಿದ್ದರು. ಆ ಜಾಗ ಮಾಯಾಗ ಅವರಿಗೆ ಸೇರಿದ್ದು, ಅವರ ಪುತ್ರನ ಹೆಸರಿಗೆ ಡಿಕ್ರಿ ಮಾಡಿಕೊಡಬೇಕೆಂದು ನ್ಯಾಯಾಲಯ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಸರಕಾರ ಮತ್ತು ಕೆಎಸ್ಆರ್ಟಿಸಿ ಮೇಲ್ಮನವಿ ಸಲ್ಲಿಸಿದ್ದವು.

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯವು, “ಕಂದಾಯ ದಾಖಲೆಗಳ ಪ್ರಕಾರ ವಿವಾದಿತ ಜಾಗ ರಾಜ್ಯ ಅರಣ್ಯ ಇಲಾಖೆಗೆ ಸೇರಿದ್ದಾಗಿದೆ. 1950ರಿಂದಲೂ ದಾಖಲೆಗಳು ಅರಣ್ಯ ಇಲಾಖೆಯ ಹೆಸರಿನಲ್ಲೇ ಇವೆ. ಆದರೆ 1970-71ರಿಂದ 1973-74ರ ಅವಧಿಯಲ್ಲಿ ಇದ್ದಕ್ಕಿದ್ದಂತೆ ಯಾವುದೇ ಆಧಾರವಿಲ್ಲದೆ ಅರಣ್ಯ ಇಲಾಖೆ ಹೆಸರಿನ ಜಾಗದಲ್ಲಿ ಏಕಾಏಕಿ ಮಾಯಾಗ ಎಂಬುವರ ಹೆಸರು ನಮೂದಾಗಿದೆ’ ಎಂದು ಹೇಳಿದೆ. ಅಲ್ಲದೆ, 1900ರ ಕಾಯಿದೆ ಸೆಕ್ಷನ್ 17ರಡಿ ಅಂದಿನ ಮೈಸೂರು ಸರಕಾರ 1929ರ ಜೂ.6ರಂದು ಹೊರಡಿಸಿದ್ದ ಆದೇಶದಂತೆ ಮಾಯಾಗ ಅವರ ಹೆಸರನ್ನು ದಾಖಲೆಗಳಲ್ಲಿ ಸೇರಿಸಲಾಗಿದೆ ಎಂಬ ಪ್ರತಿವಾದಿಗಳ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿದೆ.

ವಿವಾದಿತ ಜಾಗದ ಸರ್ವೇ ನಂಬರ್ ಗಳು ಮೈಸೂರು ಸರಕಾರ ಹೊರಡಿಸಿದ್ದ ಅಧಿಸೂಚನೆ ಅಥವಾ ಅರಣ್ಯ ನಕ್ಷೆಯ ಭಾಗವಲ್ಲ, ಆದರೆ ರಾಜ್ಯ ಮೀಸಲು ಅರಣ್ಯ ಅಧಿಸೂಚನೆಯನ್ವಯ ಸೃಷ್ಟಿಯಾಗಿದ್ದು, ಅದರಂತೆ ಗಡಿಗಳನ್ನು ನಿಗದಿಪಡಿಸಿದೆ ಎಂದು ನ್ಯಾಯಾಲಯ ಆದೇಶಿಸಿದೆ. ಚಾಮುಂಡಿ ಬೆಟ್ಟ ರಾಜ್ಯ ಮೀಸಲು ಅರಣ್ಯದಿಂದ ವಿವಾದಿತ ಜಾಗವನ್ನು ಡಿನೋಟಿಫೈ ಮಾಡಿರುವ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಒಮ್ಮೆ ಅರಣ್ಯ ಪ್ರದೇಶವೆಂದು ಘೋಷಿಸಿದಂತೆ ಅದು ಎಂದೆಂದಿಗೂ ಅರಣ್ಯವೇ ಆಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಜನಸಂಖ್ಯಾ ಬೆಳವಣಿಗೆ ಮತ್ತಿತರ ಕಾರಣಗಳಿಂದಾಗಿ ಅರಣ್ಯ ಅತ್ಯಂತ ವೇಗವಾಗಿ ನಾಶವಾಗುತ್ತಿದೆ. ಇದನ್ನು ತಡೆಯುವ ಅಗತ್ಯವಿದೆ ಎಂದು ನ್ಯಾಯಾಲಯ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.