06/03/2026

Law Guide Kannada

Online Guide

ಆಟದ ಗಂಧಗಾಳಿ ಗೊತ್ತಿಲ್ಲದ, ಬ್ಯಾಟ್ ಹಿಡಿಯಲು ಬಾರದವರು ಕ್ರಿಕೆಟ್ ಆಡಳಿತ ಮಾಡಬಾರದು – ಸುಪ್ರೀಂ ಕೋರ್ಟ್

ನವದೆಹಲಿ: ಕ್ರೀಡಾ ಸಂಸ್ಥೆಗಳನ್ನು ಕ್ರೀಡೆಯಲ್ಲಿ ಅನುಭವ ಇರುವವರೇ ಮುನ್ನಡೆಸಬೇಕು. ಆಟದ ಗಂಧಗಾಳಿ ಗೊತ್ತಿಲ್ಲದವರು, ಬ್ಯಾಟ್ ಹಿಡಿಯಲು ಬಾರದವರೆಲ್ಲಾ ಕ್ರಿಕೆಟ್ ಆಡಳಿತ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.

ಜ.6ರಂದು ನಡೆಯಬೇಕಿದ್ದ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್(ಎಂಸಿಎ) ಚುನಾವಣೆಯಲ್ಲಿ ಸ್ವಜನಪಕ್ಷಪಾತವಾಗುತ್ತಿದೆ ಹಾಗೂ ಮತದಾರರ ಪಟ್ಟಿಯಲ್ಲಿ ಹೆಚ್ಚಿನ ಸದಸ್ಯರ ಸೇರ್ಪಡೆಯಾಗಿದೆ ಎಂದು ಆರೋಪಿಸಿ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ನಾಯಕ ಕೇದಾರ್ ಜಾಧವ್ ಅವರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ನಂತರ ನ್ಯಾಯಾಲಯವು, ಎಂಸಿಎ ಚುನಾವಣೆಗೆ ತಡೆಯಾಜ್ಞೆ ನೀಡಿತ್ತು.

ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ, ಎಂಸಿಎ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸಿಜೆಐ ಸೂರ್ಯ ಕಾಂತ್, ನ್ಯಾ.ಜೋಯ್ಮಲ್ಯ ಬಾಗ್ಚಿ ಹಾಗೂ ನ್ಯಾ.ವಿಪುಲ್ ಎಂ ಪಾಂಚೋಲಿ ಅವರಿದ್ದ ಪೀಠವು, ಮಾಜಿ ಆಟಗಾರರು ಅಧಿಕಾರದ ಚುಕ್ಕಾಣಿ ಹಿಡಿಯಬೇಕು. ಕ್ರೀಡಾ ಸಂಸ್ಥೆಗಳನ್ನು ಕ್ರೀಡೆಯಲ್ಲಿ ಅನುಭವ ಇರುವವರೇ ಮುನ್ನಡೆಸಬೇಕು ಎಂದು ಅಭಿಪ್ರಾಯಪಟ್ಟಿದೆ.

1986 ರಿಂದ 2023ರ ನಡುವೆ ಎಂಸಿಎ ಅಲ್ಲಿ 164 ಸದಸ್ಯರಿದ್ದರು. ಇತ್ತೀಚೆಗೆ ಒಂದೇ ಸಮನೆ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದು ಏಕೆ ?’ ಎಂದು ಪ್ರಶ್ನಿಸಿದ ಸಿಜೆಐ ಸೂರ್ಯಕಾಂತ್, ಒಂದು ವೇಳೆ ಎಂಸಿಎ ತನ್ನ ಸದಸ್ಯರ ಸಂಖ್ಯೆಯನ್ನು 300ಕ್ಕೆ ಏರಿಸಲು ಬಯಸಿದ್ದರೆ, ಆ ಸ್ಥಾನಗಳನ್ನು ಕ್ರಿಕೆಟ್ ನಲ್ಲಿ ಸಾಧನೆ ಮಾಡಿದವರಿಗೆ ಮತ್ತು ಮಾಜಿ ಅಂತರರಾಷ್ಟ್ರೀಯ ಆಟಗಾರರಿಗೆ ಮೀಸಲಿಡಬೇಕು. ಆಟದ ಗಂಧಗಾಳಿ ಗೊತ್ತಿಲ್ಲದವರಿಗಲ್ಲ ಎಂದರು.

ಕ್ರಿಕೆಟ್ ಉಳಿದುಕೊಂಡಿರುವುದು ಆಟಗಾರರಿಂದಲೇ ಹೊರತು ಅಧಿಕಾರಿಗಳಿಂದಲ್ಲ. ಹಾಕಿ ಆಡಳಿತವು ತನ್ನ ಘನತೆಯನ್ನು ಉಳಿಸಿಕೊಂಡಿರುವುದೇ ಅದರ ಆಡಳಿತದಲ್ಲಿ ಅನುಭವವಿರುವವರು ಇರುವುದರಿಂದ ಎಂದ ನ್ಯಾಯಪೀಠವು, ಅರ್ಜಿದಾರರಿಗೆ ತಮ್ಮ ಅರ್ಜಿಯನ್ನು ಹಿಂಪಡೆಯಲು ಅವಕಾಶ ನೀಡಿತು. ಬಾಂಬೆ ಹೈಕೋರ್ಟ್ ನಲ್ಲಿ ನಡೆಯಲಿರುವ ವಿಚಾರಣೆಯ ವೇಳೆ ತಮ್ಮ ವಾದವನ್ನು ಮಂಡಿಸುವಂತೆ ಸೂಚನೆ ನೀಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.