19/05/2025

Law Guide Kannada

Online Guide

ಪರವಾನಿಗೆ ರಹಿತ ಫೈನಾನ್ಸ್ ಸಾಲ, ಚೆಕ್ ಬೌನ್ಸ್ ಪ್ರಕರಣ: ಮಹತ್ವದ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯ ಸೆಕ್ಷನ್ 138 ರ ಅಡಿಯಲ್ಲಿ ಯಾವುದೇ ಪರವಾನಗಿ ಪಡೆಯದೆ ಫೈನಾನ್ಸ್ ಸಾಲ ನೀಡುವ ವಹಿವಾಟುಗಳ ಸಂದರ್ಭದಲ್ಲಿ ನೀಡಲಾದ ಚೆಕ್ ಗಳು ಕ್ರಿಮಿನಲ್ ಶಿಕ್ಷೆಗೆ ಆಧಾರವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

ಅನಧಿಕೃತ ಫೈನಾನ್ಸ್ ಗಳ ಮೂಲಕ ಸಾಲ ಪಡೆದ ಸಂದರ್ಭದಲ್ಲಿ ಸಾಲಗಾರರು ನೀಡುವ ಚೆಕ್ ಗಳು ಅಮಾನ್ಯಗೊಂಡರೆ, ಅದು ಫೈನಾನ್ಸ್ ಕಂಪೆನಿಗಳಿಗೆ ಅಥವಾ ವ್ಯಕ್ತಿಗಳಿಗೆ ಮುಳುವಾಗುವ ಸಾಧ್ಯತೆ ಇದೆ. ಅಂತಹ ಸಾಲಗಳು ಕಾನೂನುಬದ್ಧ ತೀರಿಸಬೇಕಾದ ಮೊತ್ತವಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ರಾ ಅವರಿದ್ದ ವಿಭಾಗೀಯ ನ್ಯಾಯಪೀಠ ತೀರ್ಪು ನೀಡಿದೆ. ಅಲ್ಲದೆ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯ ಅಡಿಯಲ್ಲಿ ಚೆಕ್ ಅಮಾನ್ಯಗೊಂಡರೆ ಅಪರಾಧವಲ್ಲ ಎಂದು ಹೇಳಿ ಆರೋಪಿಯನ್ನು ಖುಲಾಸೆಗೊಳಿಸಿದೆ.

ಹಣ ಸಾಲ ನೀಡುವವರು ಸರಿಯಾದ ಪರವಾನಗಿಗಳನ್ನು ಪಡೆಯಬೇಕು. ಇದು ಕಡ್ಡಾಯ ನಿಯಮ. ಗೋವಾ ಹಣ-ಸಾಲದಾತರ ಕಾಯ್ದೆ, 2001, ಆಧಾರವಾಗಿರುವ ವಹಿವಾಟಿನಲ್ಲಿ ಪರವಾನಗಿ ಪಡೆಯದ ಹಣ ಸಾಲವನ್ನು ಒಳಗೊಂಡಿದೆ. ಹಾಗಾಗಿ, ಅಮಾನ್ಯಗೊಂಡ ಚೆಕ್ಗಳಿಗೆ ಮೊಕದ್ದಮೆ ಹೂಡುವುದರ ವಿರುದ್ಧ ಮಾನ್ಯವಾದ ರಕ್ಷಣೆಯನ್ನು ಒದಗಿಸುತ್ತದೆ. ಈ ಪ್ರಕರಣದಲ್ಲಿ, ಚೆಕ್ ಮತ್ತು ಪರಿಹಾರದ ಪೂರ್ಣ ಮೊತ್ತವನ್ನು ಈಗಾಗಲೇ ಪಾವತಿಸಲಾಗಿದೆ ಎಂದು ನ್ಯಾಯಪೀಠ ಪರಿಗಣಿಸಿತು. ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ತನ್ನ ಪ್ರದತ್ತ ಅಧಿಕಾರವನ್ನು ಚಲಾಯಿಸಿ ಆರೋಪಿಯನ್ನು ಖುಲಾಸೆಗೊಳಿಸಿತು.
ಸುಪ್ರೀಂ ಕೋರ್ಟ್ ಈ ತೀರ್ಪು, ವಿವಿಧ ರಾಜ್ಯಗಳಲ್ಲಿ ಫೈನಾನ್ಸ್ ಸಾಲದ ನಿಯಮಗಳು ಮತ್ತು ನೆಗೋಷಿಯೇಬಲ್ ಇನ್ ಸ್ಟ್ರುಮೆಂಟ್ಸ್ ನಿಯಂತ್ರಿಸುವ ಕಾನೂನಿನ ವ್ಯಾಖ್ಯೆಗೆ ಗಮನಾರ್ಹ ಪರಿಣಾಮಗಳನ್ನು ಬೀರುತ್ತದೆ. ಪರವಾನಗಿ ಪಡೆಯದೆ ಫೈನಾನ್ಸ್ ಸಾಲದಾತರಿಗೆ ಇದು ಮುಳುವಾಗಿದ್ದು, ಇಂತಹ ಪ್ರಕರಣಗಳಲ್ಲಿ ಸಾಲಗಾರರ ಚೆಕ್ ಪಡೆದು ಮೊಕದ್ದಮೆಗಳ ಸಂದರ್ಭದಲ್ಲಿ ಈ ತೀರ್ಪು ಪರಿಣಾಮಕಾರಿ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.