ಕಕ್ಷಿದಾರರು ವಕೀಲರಿಗೆ ನೀಡುವ ಸಂಪೂರ್ಣ ಅಧಿಕಾರವೇ ವಕಾಲತ್ ನಾಮ-ಹೈಕೋರ್ಟ್

ಬೆಂಗಳೂರು: ವಕಾಲತ್ ನಾಮ ಕಕ್ಷಿದಾರರು ವಕೀಲರಿಗೆ ನೀಡುವ ಸಂಪೂರ್ಣ ಅಧಿಕಾರವಾಗಿದ್ದು, ಪ್ರಕರಣ ಹಿಂಪಡೆಯಲು ಮೆಮೋ ಮೇಲೆ ಕಕ್ಷಿದಾರರ ಸಹಿ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಹೈಕೋರ್ಟ್ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ನ್ಯಾಯಾಲಯದಲ್ಲಿ ಯಾವುದೇ ಒಂದು ಪ್ರಕರಣವನ್ನು ನಡೆಸಲು ಮತ್ತು ಪ್ರಕ್ರಿಯೆಗಳನ್ನು ನಡೆಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ವಕೀಲರಿಗೆ ಕಕ್ಷಿದಾರರ ವಕಾಲತ್ ನಾಮವು ಸಂಪೂರ್ಣ ಅಧಿಕಾರ ನೀಡುತ್ತದೆ ಎಂದು ಸ್ಪಷ್ಟಪಡಿಸಿದೆ.
ವಕಾಲತ್ ಪ್ರಕಾರ ಕಕ್ಷಿದಾರರ ಪರವಾಗಿ ಕ್ರಮ ಕೈಗೊಳ್ಳಲು ವಕೀಲರಿಗೆ ಸಂಪೂರ್ಣ ಅಧಿಕಾರ ಇರುತ್ತದೆ. ಹಾಗಾಗಿ, ಪ್ರಕರಣವನ್ನು ಹಿಂಪಡೆಯಲು ನ್ಯಾಯಾಲಯಕ್ಕೆ ಸಲ್ಲಿಸಲಾಗುವ ಮೆಮೋ (ಜ್ಞಾಪಕ ಪತ್ರ)ಕ್ಕೆ ಪಕ್ಷಗಾರರ ಸಹಿ ಪಡೆಯುವ ಅಗತ್ಯವಿರುವುದಿಲ್ಲ. ಆದರೂ, ಪ್ರಕರಣ ಹಿಂಪಡೆಯುವ ಮುನ್ನ, ವಕೀಲರು ತಮ್ಮ ಕಕ್ಷಿದಾರರಿಂದ ಲಿಖಿತ ಸೂಚನೆಗಳನ್ನು ಪಡೆದುಕೊಳ್ಳುವುದು ವಿವೇಚನಾಯುಕ್ತವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ